ಕ್ಷುಲ್ಲಕ ವಿಚಾರಕ್ಕೆ ಯುವಕರ ಮಧ್ಯೆ ಘರ್ಷಣೆ, ಹತ್ಯೆ: ವಾಸ್ತವ ತಿರುಚಿ ಎಡವಟ್ಟು ಹೇಳಿಕೆ ನೀಡಿದ ಗೃಹ ಸಚಿವ !

Prasthutha|

➤ಬೇಜವಾಬ್ದಾರಿ ಹೇಳಿಕೆ ನೀಡಿ ತಪ್ಪಾಯ್ತು ಎಂದ ಆರಗ ಜ್ಞಾನೇಂದ್ರ

- Advertisement -

ಬೆಂಗಳೂರು: ನಗರದ ಜೆಜೆ ನಗರದಲ್ಲಿ ಕಳೆದ ರಾತ್ರಿ ಚೂರಿ ಇರಿತಕ್ಕೆ ಒಳಗಾಗಿ ಯುವಕ ಸಾವನ್ನಪ್ಪಿದ ಘಟನೆಯ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ವಾಸ್ತವವನ್ನು ತಿರುಚಿ ಕೋಮು ಉದ್ವಿಗ್ನತೆಗೆ ಪ್ರಚೋದನೆ ನೀಡುವ ರೀತಿಯಲ್ಲಿ ಹೇಳಿಕೆ ನೀಡಿ ಬಳಿಕ ಸ್ಪಷ್ಟನೆ ನೀಡಿರುವ ಪ್ರಸಂಗ ನಡೆದಿದೆ.

ಬೆಂಗಳೂರಿನ ಜೆ. ಜೆ. ನಗರದ ವಾಸಿ ಚಂದ್ರು ಎಂಬಾತ ಗುಡ್ಡದಹಳ್ಳಿಯಲ್ಲಿ ರೋಲ್ ತಿನ್ನುವಾಗ ಸಣ್ಣ ಅಪಘಾತವಾಗಿ ಘರ್ಷಣೆ ನಡೆದಿತ್ತು. ಇದು ಕೊಲೆಯಲ್ಲಿ ಅಂತ್ಯಗೊಂಡಿದೆ. ಈ ಘರ್ಷಣೆಯಿಂದ ತೀವ್ರವಾಗಿ ಗಾಯಗೊಂಡ ಚಂದ್ರು ನನ್ನು ಆಸ್ಪತ್ರೆ ದಾಖಲು ಮಾಡಿದ್ದರೂ, ಆತ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

- Advertisement -

ಆದರೆ ಈ ವಿಷಯಕ್ಕೆ ಸಂಬಂಧಿಸಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ, ಉರ್ದು ಮಾತನಾಡದ ಹಿನ್ನೆಲೆಯಲ್ಲಿ ಚಂದ್ರು ಎಂಬಾತನನ್ನು ಇರಿದು ಕೊಲೆಗೈಯ್ಯಲಾಗಿದೆ ಎಂದು ಹೇಳಿಕೆ ನೀಡಿದ್ದರು.

ಯುವಕ ಚಂದ್ರು ಆತ ಚಿಕನ್ ಖರೀದಿ ಮಾಡಲು ಹೋದಾಗ ಅಂಗಡಿಯವರು ಉರ್ದು ಮಾತನಾಡುವಂತೆ ಹೇಳಿದ್ದಾರೆ. ಆದರೆ, ಚಂದ್ರುವಿಗೆ ಉರ್ದು ಮಾತನಾಡಲು ಬಂದಿಲ್ಲ. ಚಂದ್ರುವಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರಲ್ಲ ಅಂತ ಹೇಳಿ ಅಮಾನುಷವಾಗಿ ಕೊಲೆ ಮಾಡಿದ್ದಾರೆ ಎಂದು ಗೃಹ ಸಚಿವರು ಹೇಳಿಕೆ ನೀಡಿದ್ದರು.

ಆದರೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಟ್ವೀಟ್ ಮಾಡಿ, ಜೆಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಧ್ಯರಾತ್ರಿ (05.04.2022) ನಡೆದ ಕೊಲೆ ಪ್ರಕರಣ ನಡೆದಿದೆ. ಸೈಮನ್ ರಾಜ್ ಮತ್ತು ಚಂದ್ರು ಇಬ್ಬರು ಮೈಸೂರು ರಸ್ತೆಯಲ್ಲಿ ಊಟಕ್ಕೆ ತೆರಳಿ ಹಿಂದಿರುಗುವಾಗ ಇವರ ಮತ್ತು ಶಾಹಿದ್  ಎಂಬಾತ  ಚಾಲನೆ ಮಾಡುತ್ತಿದ್ದ ಮತ್ತೊಂದು ಬೈಕುಗಳ ಪರಸ್ಪರ ತಗುಲಿದ ವಿಷಯವು ಗಲಾಟೆಗೆ ಕಾರಣವಾಗಿದ್ದು, ಈ ಗಲಾಟೆಗೆ ಇತರರು ಸೇರಿಕೊಂಡಿರುತ್ತಾರೆ. ಗಲಾಟೆಯ ಸಂದರ್ಭದಲ್ಲಿ ಶಾಹಿದ್, ಚಂದ್ರುವಿನ ಬಲ ತೊಡೆಗೆ ಇರಿದು ಘಟನಾ ಸ್ಥಳದಿಂದ ಪರಾರಿಯಾಗಿರುತ್ತಾರೆ. ಗಾಯಾಳುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿ ತೀವ್ರ ರಕ್ತ ಸ್ರಾವದಿಂದ ಸಾವನ್ನಪ್ಪಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಜನ ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ತನಿಖೆ ಮುಂದುವರೆದಿದೆ ಎಂದು ಮಾಹಿತಿ ನೀಡಿದ್ದಾರೆ.

ಆದರೆ ವಾಸ್ತವ ಹೀಗಿದ್ದರೂ ಗೃಹ ಸಚಿವರು “ಉರ್ದು ಮಾತನಾಡದ್ದಕ್ಕೆ ಹತ್ಯೆ ಮಾಡಲಾಗಿದೆ” ಎಂದು ಬಹಿರಂಗವಾಗಿ ಸುಳ್ಳು ಹೇಳಿಕೆ ನೀಡಿ, ಕೋಮು ಭಾವನೆ ಪ್ರಚೋದನೆಗೆ ಪ್ರಯತ್ನಿಸಿದ್ದಾರೆ ಎಂದು ವಿರೋಧ ಪಕ್ಷಗಳು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕ ಜಮೀರ್ ಅಹ್ಮದ್ ಕೂಡ ಗೃಹ ಸಚಿವರ ಹೇಳಿಕೆಯನ್ನು ಖಂಡಿಸಿದ್ದಾರೆ.

ಬಳಿಕ ಉಲ್ಟಾ ಹೊಡೆದ ಆರಗ ಜ್ಞಾನೇಂದ್ರ ಹೇಳಿಕೆ ಬಿಡುಗಡೆ ಮಾಡಿ, ಬೆಂಗಳೂರು ಜೆಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ನಡೆದ ಚೂರಿ ಇರಿತಕ್ಕೆ ಒಳಗಾಗಿ ಒಬ್ಬ ಯುವಕ ಮೃತ ಪಟ್ಟ ಘಟನೆ ಅತ್ಯಂತ ಅಮಾನೀಯವಾದುದು. ದ್ವಿಚಕ್ರ ವಾಹನದಲ್ಲಿ ಹೋಗಿದ್ದ ಯುವಕರು, ಸಣ್ಣ ಅಪಘಾತ ಸಂಬಂಧ ಮಾತಿಗೆ ಮಾತು ಬೆಳೆದು, ಘರ್ಷಣೆ ನಡೆದ ವಿಷಯದಲ್ಲಿ ಒಬ್ಬ ಯುವಕ ತೊಡೆ ಮೇಲಿನ ಚೂರಿ ಇರಿತದಿಂದ ತೀವ್ರ ಗಾಯಗೊಂಡು ಮೃತಪಟ್ಟಿದ್ದಾನೆ. ಈ ಸಂಬಂಧ ಪೊಲೀಸರು ಮೂವರು ಯುವಕರನ್ನು ವಶ ಪಡೆದಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

  ಜವಾಬ್ದಾರಿಯುತ ಸ್ಥಾನದಲ್ಲಿರುವ ಗೃಹ ಸಚಿವರು ಘಟನೆಯ ಸೂಕ್ಷ್ಮತೆಯನ್ನು ಅರಿಯದೆ ಕೋಮು ಆಧಾರದಲ್ಲಿ ಹೇಳಿಕೆ ನೀಡಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

2 ಲಕ್ಷ ರೂ. ಪರಿಹಾರ ನೀಡಿದ ಝಮೀರ್ ಅಹ್ಮದ್

ಜೆ. ಜೆ. ನಗರದ ವಾಸಿ ಚಂದ್ರು ಹತ್ಯೆಯಾದ ವಿಷಯ ತಿಳಿಯುತ್ತಿದ್ದಂತೆ ಚಾಮರಾಜಪೇಟೆ ಕ್ಷೇತ್ರದ ಶಾಸಕ ಝಮೀರ್ ಅಹ್ಮದ್ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿ 2 ಲಕ್ಷ ರೂ.ಪರಿಹಾರ ನೀಡಿದ್ದಾರೆ.

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News



Join Whatsapp