ಮದ್ಯದ ಅಮಲಿನಲ್ಲಿ ಗಲಾಟೆ: ಯುವಕನ ಬರ್ಬರ ಹತ್ಯೆ

ಚಿಕ್ಕಬಳ್ಳಾಪುರ: ಮದ್ಯ ಸೇವನೆ ಮಾಡಲು ಸೇರಿದ ಸ್ನೇಹಿತರ ಗುಂಪಿನ ಪೈಕಿ ಓರ್ವನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಕಳೆದ ರಾತ್ರಿ ಚಿಂತಾಮಣಿಯ ಕನ್ನಂಪಲ್ಲಿಯ ನಿರ್ಜನ ಪ್ರದೇಶದಲ್ಲಿ ನಡೆದಿದೆ.

ಚಿಂತಾಮಣಿಯ ನರಸಿಂಹಪೇಟೆಯ ದುರ್ಗೇಶ್ ಅಲಿಯಾಸ್ ಚಿನ್ನಾ (25) ಕೊಲೆಯಾದವರು ಎಂದು ತಿಳಿದು ಬಂದಿದೆ. ಈತ ಬೆಂಗಳೂರು ಜೋಡಿ ರಸ್ತೆಯ ಸ್ಪೆಕ್ಸ್ ಇನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ರಾತ್ರಿ ಸ್ನೇಹಿತರೊಬ್ಬರ ಹುಟ್ಟುಹಬ್ಬದ ಪ್ರಯಕ್ತ ಬೆಂಗಳೂರು ರಸ್ತೆಯ ಕಟಮಾಚನಹಳ್ಳಿ ಸಮೀಪದ ಡಾಬಾದ ಬಳಿ ಸೇರಿದ್ದು, ಅಲ್ಲಿ ಗಲಾಟೆ ಮಾಡಿಕೊಂಡಿದ್ದರು.

- Advertisement -

ನಂತರ ರಾತ್ರಿ ಡಾಬಾ ಬಾಗಿಲು ಹಾಕಿದ ನಂತರ ಕನ್ನಂಪಲ್ಲಿಯ ಬುಲೆಟ್ ಶೋರೂಂ ಹಿಂಭಾಗದ ನಿರ್ಜನ ಪ್ರದೇಶದಲ್ಲಿ ಮದ್ಯ ಸೇವನೆ ಮಾಡಲು ಸೇರಿದ್ದರು. ಈ ಸಂದರ್ಭಧಲ್ಲಿ ಗಲಾಟೆ ನಡೆದಿದ್ದು ಮಾರಕಾಸ್ತ್ರಗಳಿಂದ ಕತ್ತು ಕೊಯ್ದು ಕೊಲೆ ಮಾಡಿದ್ದಾರೆ.

ಸ್ಥಳಕ್ಕೆ ಚಿಂತಾಮಣಿ ಉಪವಿಭಾಗದ ಎಎಸ್‌ ಪಿ ಕೌಶಲ್ ಚೌಕ್ಸಿ, ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್​ ಪೆಕ್ಟರ್ ಸುಧಾಕರ್ ರೆಡ್ಡಿ, ನಗರ ಠಾಣೆಯ ಪೊಲೀಸ್ ಇನ್ಸ್​ ಪೆಕ್ಟರ್ ರಂಗ ಶಾಮಯ್ಯ ಮತ್ತಿತರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತನ ಸಹೋದರ ಅರವಿಂದ್ ನೀಡಿದ ದೂರಿನ ಮೇಲೆ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗೆ ಶೋಧ ಕೈಗೊಂಡಿದ್ದಾರೆ.