► ವೀಡಿಯೋ ವೀಕ್ಷಿಸಿ
ಕ್ಷುಲ್ಲಕ ಕಾರಣವನ್ನು ಮುಂದಿಟ್ಟುಕೊಂಡು ಗುಂಡ್ಲುಪೇಟೆಯ ಊಟಿ ರಸ್ತೆ ಬಳಿ ಇರುವ ಗೋವಿಂದರಾಜ ಪೆಟ್ರೋಲ್ ಪಂಪ್ ನಲ್ಲಿ ಕಲೀಮ್ ಎನ್ನುವ ವ್ಯಕ್ತಿಯೋರ್ವನಿಗೆ ನಾಲ್ವರ ತಂಡ ಗುಂಪು ಹಲ್ಲೆ ನಡೆಸಿರುವ ಕುರಿತು ವರದಿಯಾಗಿದೆ. ಜೂನ್ 28ರಂದು ರಾತ್ರಿ ಪೆಟ್ರೋಲ್ ಹಾಕಿಸುವ ವಿಚಾರದಲ್ಲಿ ಉಂಟಾದ ವಾಗ್ವಾದದ ಬಳಿಕ ದುಷ್ಕರ್ಮಿಗಳು ಕಲೀಮ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ. ಅದರ ವೀಡಿಯೋ ಕೂಡಾ ವೈರಲ್ ಆಗಿದೆ. ಕಲೀಮ್ ಮೇಲೆ ಹಲ್ಲೆ ನಡೆಸಿದ ಬಳಿಕ ಅವರ ಮೊಬೈಲನ್ನು ಮತ್ತು ಬೈಕನ್ನು ಜಖಂಗೊಳಿಸಿದ್ದಾರೆ. ಈ ವೇಳೆ ಹಲ್ಲೆಯನ್ನು ತಡೆಯಲು ಬಂದ ಪೆಟ್ರೋಲ್ ಪಂಪ್ ಸಿಬ್ಬಂದಿಯ ಮೇಲೂ ದುಷ್ಕರ್ಮಿಗಳು ಹಲ್ಲೆ ನಡೆಸಿರುವುದು ವೀಡಿಯೋದಲ್ಲಿ ಕಂಡು ಬಂದಿದೆ.
ಹಲ್ಲೆಗೊಳಗಾದ ಬಳಿಕ ಕಲೀಮ್ ಅವರನ್ನು ಮೊದಲು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಆ ಬಳಿಕ ಇದೀಗ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಲೀಮ್ ನೀಡಿದ್ದ ದೂರಿನ ಆಧಾರದಲ್ಲಿ ಗುಂಪು ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ಸಂಜು ನಾಯಕ, ವೇಣು ನಾಯಕ ಮತ್ತು ಸಂಜು ಗೆಳೆಯನಾಗಿರುವ ಅಪರಿಚಿತನೊಬ್ಬನ ಮೇಲೆ ಕೊಲೆ ಯತ್ನ ಸೇರಿದಂತೆ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.