ನಾಪತ್ತೆ ಪ್ರಕರಣಕ್ಕೆ ಲವ್ ಜಿಹಾದ್ ಬಣ್ಣ: ಬಜರಂಗದಳದವರಿಗೆ ವೀಡಿಯೋ ಮೂಲಕ ತಿರುಗೇಟು ನೀಡಿದ ಯುವತಿ

Prasthutha|

ಚಿಕ್ಕಮಗಳೂರು : ಇತ್ತೀಚೆಗೆ ಶೃಂಗೇರಿ ಮೂಲದ ಯುವತಿಯೊಬ್ಬಳು ನಾಪತ್ತೆಯಾಗಿರುವ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಸಂಘ ಪರಿವಾರದ ಕಾರ್ಯಕರ್ತರು ಲವ್ ಜಿಹಾದ್‌ನ ಬಣ್ಣ ನೀಡಿ ಕೋಮುಗಲಭೆ ನಡೆಸಲು ಯತ್ನಿಸುತ್ತಿರುವ ನಡುವೆಯೇ ಯುವತಿ ವಿಡಿಯೋ ಮೂಲಕ ಅಪಪ್ರಚಾರ ಮಾಡುವವರ ವಿರುದ್ಧ ತಿರುಗೇಟು ನೀಡಿದ್ದಾಳೆ.

- Advertisement -

ತನ್ನಿಷ್ಟದಂತೆ ನಾನು ಪ್ರೀತಿಸುತ್ತಿರುವ ಯುವಕನ ಜತೆ ಸ್ವಇಚ್ಛೆಯಿಂದ ಹೋಗಿದ್ದು, ನಾವಿಬ್ಬರು ಮದುವೆಯಾಗಲಿದ್ದೇವೆ ಎಂದು ಹೇಳಿರುವ ವೀಡಿಯೊ ಸಂದೇಶ ಇದೀಗ ವೈರಲ್ ಆಗಿದೆ.

ಶೃಂಗೇರಿ ತಾಲೂಕಿನ ಕಿಗ್ಗಾ ಗ್ರಾಮದ ನೆಲೆಸಿರುವ ಹಿಂದೂ ಯುವತಿಗೆ ಈ ಹಿಂದೆ ಶಿವಮೊಗ್ಗದಲ್ಲಿ ಕಾಲೇಜು ಓದುತ್ತಿದ್ದ ಸಂದರ್ಭದಲ್ಲಿ ಮೂಡಿಗೆರೆ ಪಟ್ಟಣದ ಬಾಪು ನಗರದ ಮುಸ್ಲಿಮ್ ಯುವಕನೊಬ್ಬನ ಪರಿಚಯವಾಗಿದೆ. ಈ ಪರಿಚಯ ಪ್ರೀತಿಗೆ ತಿರುಗಿತ್ತೆನ್ನಲಾಗಿದೆ. ಬಳಿಕದ ಬೆಳವಣಿಗೆಯಲ್ಲಿ ಯುವತಿಯು ಯುವಕನ ವಿರುದ್ಧವೇ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಳು.

- Advertisement -

ನಾನು ಶೃಂಗೇರಿಯಲ್ಲಿ ಕಾಲೇಜು ಓದುತ್ತಿದ್ದ ದಿನಗಳಲ್ಲಿ ಈತನ ಪರಿಚಯವಾಗಿದ್ದು, ಆನಂತರ ನಾವು ಶಿವಮೊಗ್ಗದಲ್ಲಿ ಬಾಡಿಗೆ ಮನೆಯಲ್ಲಿದ್ದೆವು. ಅಲ್ಲಿಗೆ ಆಗಾಗ ಯುವಕ ಬರುತ್ತಿದ್ದು, ತನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಅಲ್ಲದೇ ಆತ ತನ್ನ ಹೆಸರು ಜಗನ್, ತಾನೊಬ್ಬ ಶೆಟ್ಟಿ ಜನಾಂಗಕ್ಕೆ ಸೇರಿದವನಾಗಿದ್ದೇನೆ ಎಂದು ಹೇಳಿಕೊಂಡಿದ್ದು, ಆತನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಈ ಹಿಂದೆ 2021ರ ಅಕ್ಟೋಬರ್ ವೇಳೆ ಯುವತಿ ಇದೇ ಜುನೈದ್ ವಿರುದ್ಧ ಶೃಂಗೇರಿ‌ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು.

ಸದ್ಯ ಜೈಲಿನಿಂದ ಹೊರಬಂದಿರುವ ಜುನೈದ್‌ನೊಂದಿಗೆಯೇ ದೂರು ನೀಡಿದ್ದ ಯುವತಿ ನಾಪತ್ತೆಯಾಗಿದ್ದಾಳೆಂದು ಹೇಳಲಾಗುತ್ತಿದ್ದು, ಯುವತಿಯನ್ನು ಲವ್‌ ಜಿಹಾದ್ ಖೆಡ್ಡಾಕ್ಕೆ ಕೆಡವಲಾಗಿದೆ ಎಂದು ಆರೋಪಿಸಿ ಶೃಂಗೇರಿ ತಾಲೂಕಿನ ಬಜರಂಗದಳದ ಮುಖಂಡರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಹರಿಯಬಿಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ಈ ಮಧ್ಯೆ ಜುನೈದ್‌ನೊಂದಿಗೆ ನಾಪತ್ತೆಯಾಗಿದ್ದಾಳೆಂದು ಹೇಳಲಾಗುತ್ತಿರುವ ಯುವತಿ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು, ತನ್ನಿಷ್ಟದ ಯುವಕನ ಜೊತೆ ತಾನು ಹೋಗಿದ್ದು, ಮದುವೆ ಆಗಲಿದ್ದೇವೆ ಎಂದು ಹೇಳಿದ್ದಾಳೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪ್ರೇಮಿಗಳನ್ನು ಬೇರ್ಪಡಿಸಲು ಲವ್‌ ಜಿಹಾದ್ ಆರೋಪ ಹೊರಿಸಿ ಗೊಂದಲ ಮೂಡಿಸುತ್ತಿರುವ ಬಜರಂಗದಳದ ಮುಖಂಡರ ವಿರುದ್ಧ ವ್ಯಾಪಕ ಆಕ್ರೋಶವೂ ವ್ಯಕ್ತವಾಗುತ್ತಿದೆ.

Join Whatsapp