ಚುನಾವಣಾ ಭಯದಲ್ಲಿ ಪ್ರತಿಪಕ್ಷ ನಾಯಕರ ಮೇಲೆ ಸಾಲು ಸಾಲು ಮೊಕದ್ದಮೆ: ಭಿನ್ನ ಧ್ವನಿ ಹತ್ತಿಕ್ಕುತ್ತಿರುವ ಯೋಗಿ ಸರ್ಕಾರ

Prasthutha|

ಲಕ್ನೋ: ಆಗಸ್ಟ್ 27ರಿಂದ ಸೆಪ್ಟಂಬರ್ 9ರ ಮಧ್ಯೆ 14 ದಿನಗಳಲ್ಲಿ ಉತ್ತರ ಪ್ರದೇಶದ ಪೊಲೀಸರು 20 ಭಿನ್ನಮತೀಯರು ಮತ್ತು ಪ್ರತಿ ಪಕ್ಷಗಳ ನಾಯಕರ ಮೇಲೆ ನಾನಾ ಆರೋಪ ಹೊರಿಸಿರುವ 6 ಎಫ್ ಐಆರ್ ಗಳನ್ನು ಸಲ್ಲಿಸಿದ್ದಾರೆ. ಎಐಎಂಐಎಂನ ಅಸದುದ್ದೀನ್ ಉವೈಸಿ ಮೇಲೆ ಸೆಪ್ಟಂಬರ್ 9ರಂದು ಕೋಮು ಸೌಹಾರ್ದ ಕೆಡಿಸುವ ಆರೋಪ ಹೊರಿಸಲಾಗಿದೆ. ಉತ್ತರಾಖಂಡದ ಮಾಜಿ ರಾಜ್ಯಪಾಲ ಅಝೀಝ್ ಕುರೇಶಿಯವರ ಮೇಲೆ ಸೆಪ್ಟೆಂಬರ್ 5ರಂದು ದೇಶದ್ರೋಹದ ಕೇಸು ಹೂಡಲಾಗಿದೆ. ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸಹಿತ 17 ಜನ ಆಮ್ ಆದ್ಮಿ ಪಕ್ಷದ ನಾಯಕರ ಮೇಲೆ ಆಗಸ್ಟ್ 30ರಂದು ಕೋವಿಡ್ ನಿಯಾಮಾವಳಿ ಮುರಿದರೆಂಬ ಕೇಸು ಜಡಿಯಲಾಗಿದೆ. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥರಿಗೆ ಸವಾಲು ಹಾಕುವೆ ಎಂದಿರುವ ಮಾಜಿ ಐಪಿಎಸ್ ಅಧಿಕಾರಿ ಅಮಿತಾಬ್ ಠಾಕೂರ್ ಮೇಲೆ ಆಗಸ್ಟ್ 27ರಂದು ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪ ಹೊರಿಸಲಾಗಿದೆ.


ಅದಕ್ಕೆ ಮೊದಲು ಸಮಾಜವಾದಿ ಪಕ್ಷದ ನೂರು ಜನ ಬೆಂಬಲಿಗರ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಂಡುದಕ್ಕೆ ಪೊಲೀಸರು ಕೇಸ್ ಬುಕ್ ಮಾಡಿದ್ದಾರೆ ಹಾಗೂ 5 ಜನ ಎಸ್ ಪಿ ನಾಯಕರನ್ನು ಜುಲೈ 5ರಂದು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ಅವರ ಮೇಲೆ ಅನುಮತಿರಹಿತವಾಗಿ ಪ್ರತಿಭಟನೆ ನಡೆಸಿದ್ದಕ್ಕಾಗಿ ಜುಲೈ 16ರಂದು ಕೇಸು ಬಿದ್ದಿದೆ. ಫೇಸ್ ಬುಕ್ ಹೇಳಿಕೆ ಸಂಬಂಧ ಸಮಾಜವಾದಿ ಪಕ್ಷದ ನಾಯಕರನ್ನು ಜೂನ್ 5ರಂದು ಬಂಧಿಸಲಾಗಿದೆ. ಆ ಫೇಸ್ ಬುಕ್ ಲೈವ್ ಶೇರ್ ಮಾಡಿದ್ದ ಮೂವರು ಕಾಂಗ್ರೆಸ್ ನಾಯಕರ ಹೆಸರನ್ನೂ ಆ ಕೇಸಿನ ಎಫ್ ಐಆರ್ ನಲ್ಲಿ ಸೇರಿಸಲಾಗಿದೆ.

- Advertisement -


ಅದಕ್ಕೂ ಮೊದಲು 2020ರ ಮೇ ಮತ್ತು 2021ರ ಫೆಬ್ರವರಿಯಲ್ಲಿ ಕಾಂಗ್ರೆಸ್ಸಿನ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ರಾಷ್ಟ್ರೀಯ ಲೋಕ ದಳದ ಜಯಂತ್ ಚೌಧರಿ ಅವರೆಲ್ಲರ ಮೇಲೆ ಕೊರೋನಾ ನಿಯಮ ಮೀರಿದ್ದರಿಂದ ಹತ್ತಾರು ಕೇಸುಗಳನ್ನು ಹಾಕಲಾಗಿದೆ. ಅವರು ಹತ್ತಾಸ್ ಸಂತ್ರಸ್ತರ ಮನೆಗೆ ಭೇಟಿ ನೀಡಿದ್ದಕ್ಕೆ ಮತ್ತು ರೈತರ ಪ್ರತಿಭಟನೆ ಕಂಡುದಕ್ಕೆ ಈ ಕೇಸುಗಳನ್ನು ದಾಖಲಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಆಳುವ ಭಾರತೀಯ ಜನತಾ ಪಕ್ಷಕ್ಕೆ ಪ್ರತಿಪಕ್ಷಗಳವರನ್ನು ಗುರಿಯಾಗಿರಿಸಿ ಮೊಕದ್ದಮೆ ಹಾಕುವುದು ಒಂದು ಚಾಳಿಯಾಗಿದೆ.


ಪ್ರಜಾಪ್ರಭುತ್ವನ್ನು ದುರ್ಬಲಗೊಳಿಸುವುದು
ಬಿಜೆಪಿಯ ನಡೆಯು ದೇಶದ ಅತಿ ಜನ ಬಾಹುಳ್ಯದ ರಾಜ್ಯದಲ್ಲಿ ಮತ್ತು ದೇಶದಲ್ಲಿ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವುದಾಗಿದೆ. “ಮುಕ್ತ ಮಾತು ಪ್ರಜಾಪ್ರಭುತ್ವಕ್ಕೆ ಆಮ್ಲಜನಕವಾಗಿದ್ದು, ಆ ಮುಖ್ಯ ಲಕ್ಷಣವನ್ನು ಬಿಜೆಪಿ ಇಲ್ಲವಾಗಿಸುತ್ತಿದೆ” ಎಂದು ಬಿಬಿಸಿ ಇಂಡಿಯಾದ ಭಾರತದ ಬ್ಯೂರೋ ಮುಖ್ಯಸ್ಥ ರಾಮ ದತ್ತ ತ್ರಿಪಾಠಿ ಆರೋಪಿಸುತ್ತಾರೆ.


ಪ್ರತಿಪಕ್ಷಗಳ ನಾಯಕರ ಮೇಲೆ ಸದಾ ಮೊಕದ್ದಮೆ ಹಾಕುವ ಮೂಲಕ ಜನಸಾಮಾನ್ಯರನ್ನು ಭಯದಲ್ಲಿ ಇರಿಸುವ ತಂತ್ರವಿದು ಎನ್ನುತ್ತಾರೆ ಕಾನೂನು ಪಂಡಿತರು. “ಜೊಳ್ಳು ಮತ್ತು ಸುಳ್ಳು ಕೇಸನ್ನು ಹಾಕುವವರ ಮೇಲೆ ನ್ಯಾಯಾಂಗವು ಕಠಿಣ ಕ್ರಮ ಕೈಗೊಳ್ಳಬೇಕು. ದೊಡ್ಡ ನಾಯಕರೇ ಮಾತನಾಡಬಾರದು ಎಂಬ ಸ್ಥಿತಿ ತಂದಿರುವಾಗ ಜನಸಾಮಾನ್ಯರಾದರೂ ಸರಕಾರದ ವಿರುದ್ಧ ಹೇಗೆ ಮಾತನಾಡುತ್ತಾರೆ?” ಎನ್ನುತ್ತಾರೆ ನಿವೃತ್ತ ನ್ಯಾಯಮೂರ್ತಿ ಇಮ್ತಿಯಾಜ್ ಮುರ್ತಜಾ.


ಪ್ರತಿ ಪಕ್ಷಗಳವರ ಮೇಲೆ ಹಾಕಿರುವ ಕೇಸುಗಳು ಚಿಲ್ಲರೆ ಇಲ್ಲವೇ ದ್ವೇಷದ್ದಾಗಿದೆ. ಹಾತ್ರಾಸ್ ಅತ್ಯಾಚಾರ, ಕೊಲೆ ಸಂತ್ರಸ್ತರ ಮನೆಗೆ ಭೇಟಿ ನೀಡಿದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರನ್ನು ಕೂಡಲೆ ದಾರಿಯಲ್ಲಿ ಬಂಧಿಸಿ, ಕೊರೋನಾ ನಿಯಮ ಭಂಗ ಕೇಸು ಹಾಕಲಾಗಿದೆ. ಹಾತ್ರಾಸ್ ನಲ್ಲಿ ದಲಿತ ತರುಣಿಯನ್ನು ಮೇಲ್ಜಾತಿ ತರುಣರು ಗುಂಪು ಅತ್ಯಾಚಾರ ಮಾಡಿ ಆಕೆಯ ಸಾವಿಗೂ ಕಾರಣರಾಗಿದ್ದರು. ಕೇಸು ದಾಖಲಿಸುವಾಗ ಪೋಲೀಸರು ತಮ್ಮ ತಲೆ ಉಪಯೋಗಿಸಬೇಕು. ಇದು ಬ್ರಿಟಿಷ್ ವಸಾಹತು ಕಾಲವಲ್ಲ ಭಿನ್ನರನ್ನು ಹಣಿಯಲು ಸರಕಾರವು ಕಾನೂನನ್ನು ದುರುಪಯೋಗಿಸಿಕೊಳ್ಳುತ್ತದೆ ಎಂದು ಉತ್ತರ ಪ್ರದೇಶದ ಮಾಜೀ ಪೊಲೀಸ್ ಡಿಜಿ ವಿಕ್ರಂ ಸಿಂಗ್ ಹೇಳುತ್ತಾರೆ. ದೇಶದೆಲ್ಲೆಡೆ ರಾಜಕೀಯ ನಾಯಕತ್ವವು ಇಂಥದಕ್ಕೆ ಕಾರಣವಾಗಬಾರದು.


“ಭಿನ್ನ ಧ್ವನಿಗಳನ್ನು ಅದುಮಲು ಬಿಜೆಪಿಯು ಸಾಂಕ್ರಾಮಿಕ ನಿಯಮದ 144ನೇ ವಿಧಿಯನ್ನು ದುರುಪಯೋಗಿಸುತ್ತಿದೆ” ಎಂದು ಎಎಪಿ ನಾಯಕ ವೈಭವ್ ಮಹೇಶ್ವರಿಯವರು ಆಪಾದಿಸಿದರು. ದೀಪಕ್ ಸಿಂಗ್ ಪ್ರಕಾರ ಪ್ರತಿಪಕ್ಷಗಳವರ ಮೇಲೆ ಬಿಜೆಪಿಯವರ ಕೇಸಾತುರವು ನಿರಂಕುಶಾಧಿಕಾರದತ್ತ ಇಟ್ಟ ಹೆಜ್ಜೆಯಾಗಿದೆ. ಯೋಗಿ ಆದಿತ್ಯನಾಥರ ಸರಕಾರವು ಜನ ಸೇವೆಯ ಬದಲು ಜನರನ್ನು ಭಯದಲ್ಲಿರಿಸಿ ಆಳಲು ಬಯಸಿದೆ ಎಂದೂ ಅವರು ಆಪಾದಿಸಿದರು. ಯಾರು ಕಾನೂನು ಮೀರಿ ನಡೆದಿರುವರೋ ಅಂಥ ವಿರೋಧ ಪಕ್ಷದ ನಾಯಕರ ಮೇಲೆ ಮಾತ್ರ ಮೊಕದ್ದಮೆ ಹೂಡಲಾಗಿದೆ ಎಂದು ಬಿಜೆಪಿ ನಾಯಕ ಹರೀಶ್ ಚಂದ್ರ ಶ್ರೀವಾಸ್ತವ ಹೇಳುತ್ತಾರೆ. ಪೊಲೀಸರು ಕಾನೂನು ಸುವ್ಯವಸ್ಥೆ ಪಾಲನೆಗಾಗಿ ಕ್ರಮ ಕೈಗೊಂಡಿದ್ದಾರೆ ಯಾವುದೇ ಮೊಕದ್ದಮೆಯನ್ನು ಪ್ರತಿಪಕ್ಷಗಳವರನ್ನು ಕಾಡುವ ಉದ್ದೇಶದಿಂದ ಹೂಡಿಲ್ಲ ಎಂದು ಅವರು ಹೇಳಿದರು.
ಅಸದುದ್ದೀನ್ ಉವೈಸಿ ಮೇಲೆ


ಬಾರಾಬಂಕಿಯಲ್ಲಿ ಅಸದುದ್ದೀನ್ ಉವೈಸಿ ನಡೆಸಿದ ಸಭೆಯಲ್ಲಿ ಅವರು ಮಾಡಿದ ಭಾಷಣವು ಕೋಮು ಸೌಹಾರ್ದ ಹಾಳು ಮಾಡುವಂತಾದ್ದು ಎಂದು ಸೆಪ್ಟೆಂಬರ್ 9ರಂದು ಕೇಸು ಹಾಕಿದ್ದಾರೆ. ಅವರು ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಮೇಲೆ ಗೌರವಾರ್ಹವಲ್ಲದ ಮಾತನ್ನು ಆಡಿದ್ದಾರೆ ಎಂದೂ ಕೇಸಿನಲ್ಲಿ ಹೇಳಲಾಗಿದೆ. ಉತ್ತರಾಖಂಡದ ಮಾಜೀ ರಾಜ್ಯಪಾಲ ಅಜೀಜ್ ಕುರೇಶಿ ಮೇಲೆ ಬಿಜೆಪಿಯ ಆಕಾಶ್ ಕುಮಾರ್ ಸಕ್ಸೇನಾ ನೀಡಿದ ದೂರಿನ ಮೇಲೆ ಸೆಪ್ಟೆಂಬರ್ 5ರಂದು ದೇಶದ್ರೋಹದ ಮೊಕದ್ದಮೆ ಹೂಡಲಾಗಿದೆ. ಎಫ್ ಐಆರ್ ನಂತೆ ಮಾಜಿ ರಾಜ್ಯಪಾಲರು ಜೈಲು ಸೇರಿರುವ ಎಸ್ ಪಿ ನಾಯಕ ಅಜಂ ಖಾನ್ ರನ್ನು ಭೇಟಿಯಾದರು. ಮತ್ತು ಆಗ ಮುಖ್ಯಮಂತ್ರಿ ಯೋಗಿ ಸರಕಾರವನ್ನು ರಕ್ತ ಹೀರುವ ದುಷ್ಟ ಸರಕಾರ ಎಂದು ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ಹೇಳಲಾಗಿದೆ. ರಾಂಪುರ ಪೋಲೀಸು ಠಾಣೆಯಲ್ಲಿ ಅವರ ಮೇಲೆ ದೇಶದ್ರೋಹದ ಮೊಕದ್ದಮೆ ಹೂಡಲಾಗಿದೆ.


ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಎಎಪಿಯ ಉ. ಪ್ರ. ಘಟಕದ ಅಧ್ಯಕ್ಷ ಮತ್ತು ರಾಜ್ಯ ಸಭಾ ಸದಸ್ಯ ಸಂಜಯ್ ಸಿಂಗ್ ಸೇರಿ 17 ಜನ ತಿರಂಗಾ ಯಾತ್ರೆ ನಡೆಸಿದರು. ಆಗಸ್ಟ್ 30ರಂದು ಅವರ ಮೇಲೆ ಕೋವಿಡ್ ನಿಯಮ ಮೀರಿದ್ದಾಗಿ ಕೇಸು ಜಡಿಯಲಾಗಿದೆ. ಅಮಿತಾಬ್ ಠಾಕೂರ್ ಮಾಜೀ ಐಪಿಎಸ್ ಅಧಿಕಾರಿ. ಅಧಿಕಾರ್ ಸೇನಾ ಎಂಬ ತನ್ನದೇ ಹೊಸ ಪಕ್ಷ ಸ್ಥಾಪಿಸುವುದಾಗಿ ಅವರು ಲಕ್ನೋದಲ್ಲಿ ಹೇಳಿದ ಬೆನ್ನಿಗೇ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಅವರು ನಾನು ನೇರ ಯೋಗಿ ಆದಿತ್ಯನಾಥರ ವಿರುದ್ಧ ಚುನಾವಣೆ ಸ್ಪರ್ಧಿಸುವೆ ಎಂದು ಹೇಳಿದ್ದೇ ಈ ಕ್ಷಿಪ್ರ ಬಂಧನಕ್ಕೆ ಕಾರಣ. ಆದರೆ ಆಗಸ್ಟ್ 16ರಂದು ದೆಹಲಿ ಸುಪ್ರೀಂ ಕೋರ್ಟಿನ ಹೊರ ಭಾಗದಲ್ಲಿ ಓರ್ವ ಅತ್ಯಾಚಾರ ಸಂತ್ರಸ್ತೆಯು ದ್ನೇಹಿತನ ಜೊತೆ ಸುಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡುದಕ್ಕೆ ಅಮಿತಾಬ್ ಠಾಕೂರ್ ಚಿತಾವಣೆ ಕಾರಣ ಎಂದು ಎಫ್ ಐಆರ್ ನಲ್ಲಿ ಹೇಳಲಾಗಿದೆ. ಒಟ್ಟಿನಲ್ಲಿ ಉತ್ತರ ಪ್ರದೇಶದಲ್ಲಿ ವಿರೋಧಿ ಧ್ವನಿಗಳನ್ನು ವ್ಯವಸ್ಥಿತವಾಗಿ ಹತ್ತಿಕ್ಕಲಾಗುತ್ತಿದೆ.

- Advertisement -