ಉತ್ತರ ಪ್ರದೇಶದ ಗೋರಖ್ ನಾಥ್ ದೇವಾಲಯದ ಭಧ್ರತೆಗೆ ಅಪಾಯವಿದೆ ಎಂದು ಆರೋಪಿಸಿ ಸ್ಥಳೀಯ ಮುಸ್ಲಿಮರು ಮನೆ ಖಾಲಿ ಮಾಡುವಂತೆ ಆದಿತ್ಯನಾಥ್ ಸರಕಾರದಿಂದ ಸೂಚನೆ

Prasthutha|

ಉತ್ತರ ಪ್ರದೇಶದ ಗೋರಖ್ ನಾಥ್ ದೇವಾಲಯದ ಭದ್ರತೆಗೆ ಅಪಾಯವಿದೆ ಎಂದು ಆರೋಪಿಸಿ ಸ್ಥಳೀಯ ಮುಸ್ಲಿಮರಿಗೆ ಬಲವಂತವಾಗಿ  ಮನೆ ಖಾಲಿ ಮಾಡುವಂತೆ ಗೋರಖ್ ಪುರ ಆಡಳಿತ ಸೂಚಿಸಿರುವ ಆಘಾತಕಾರಿ ಘಟನೆ ವರದಿಯಾಗಿದೆ.

- Advertisement -

ಮೊದಲು ಸ್ವಂತ ಇಚ್ಛೆಯಿಂದ ಮನೆ ಖಾಲಿ ಮಾಡಬಹುದು ಎಂದು ಹೇಳಿದ್ದರು, ನಂತರದ ದಿನಗಳಲ್ಲಿ ಅವರ ಮಾತು ಬೆದರಿಸುವ ರೀತಿಯಲ್ಲಿ ಬಲವಂತವಾಗಿತ್ತು  ಎಂದು ಸ್ಥಳೀಯರು ಆರೋಪಿಸಿದ್ದಾರೆ.9 ಮುಸ್ಲಿಂ ಕುಟುಂಬಗಳು ಮನೆ ಖಾಲಿ ಮಾಡುವ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿವೆ. ದೇವಾಲಯದ ಭದ್ರತೆಯ ಉದ್ದೇಶಕ್ಕಾಗಿ ಅವರು ತಮ್ಮ ಸ್ವಂತ ಇಚ್ಛೆಯಿಂದ ಮನೆಗಳನ್ನು ಖಾಲಿ ಮಾಡುತ್ತಿದ್ದಾರೆ ಎಂದು ಆ ಪತ್ರದಲ್ಲಿ ಬರೆಯಲಾಗಿದೆ.ಆದರೆ, ಸ್ಥಳೀಯ ಅಧಿಕಾರಿಗಳು ಪೇಪರ್ ಗಳಿಗೆ  ಸಹಿ ಹಾಕುವಂತೆ ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಸಂತ್ರಸ್ತ ಕುಟುಂಬಗಳು ಆರೋಪಿಸಿವೆ.

ಮನೆ ಖಾಲಿ ಮಾಡಲು ನಮ್ಮ ಕುಟುಂಬಕ್ಕೆ ಯಾವುದೇ ಸೂಚನೆ ನೀಡಿರಲಿಲ್ಲ. ಆದರೆ ಇದ್ದಕ್ಕಿದ್ದಂತೆ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಅವರು ಒಪ್ಪಿಗೆ ಪತ್ರಕ್ಕೆ ಸಹಿ ಹಾಕುವಂತೆ ಸೂಚಿಸಿದ್ದಾರೆ. ಮಾತ್ರವಲ್ಲ ಮನೆಗಳನ್ನು ಖಾಲಿ ಮಾಡುವಂತೆ ಹೇಳಿದ್ದಾರೆ. ಪರಿಹಾರದ ಬಗ್ಗೆ ನಮಗೆ ಯಾವುದೇ ಲಿಖಿತ ಭರವಸೆ ನೀಡಿಲ್ಲ  ಎಂದು ಸ್ಥಳೀಯ ನಿವಾಸಿ ಇಂತಿಯಾಝ್ ಅಹ್ಮದ್ ತಿಳಿಸಿದ್ದಾರೆ.

- Advertisement -

ಮೇ 27 ರಂದು ಕೆಲವು ಅಧಿಕಾರಿಗಳು ತಮ್ಮ ಮನೆಗಳಿಗೆ ಭೇಟಿ ನೀಡಿ ಅಳತೆ ಮಾಡಿ ಹೊರಟುಹೋದರು. ಮೇ 28 ರಂದು ಅಧಿಕಾರಿಗಳು ಮತ್ತೆ ಬಂದು ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಿದರು ಎಂದು ಸ್ಥಳೀಯರು ತಿಳಿಸಿದ್ದಾರೆ.ಮರುದಿನ ಮತ್ತೆ ಬಂದು ಒಪ್ಪಿಗೆ ಪತ್ರಗಳಿಗೆ ಸಹಿ ಹಾಕುವಂತೆ ಸೂಚಿಸಿದರು. ನಾವು ಅದನ್ನು ತಿರಸ್ಕರಿಸಿದೆವು. ಆಗ ಅವರು   ಕುಟುಂಬದ ಮುಖ್ಯಸ್ಥರು ದಾಖಲೆ ಪತ್ರಕ್ಕೆ ಸಹಿ ಮಾಡುವಂತೆ ಒತ್ತಾಯಿಸಿದರು ಎಂದು ಕುಟುಂಬದ ಸದಸ್ಯರೊಬ್ಬರು ತಿಳಿಸಿದರು.

ಬುಧವಾರ ಮತ್ತೆ ಎಸ್ಡಿಎಂ, ತಹಶೀಲ್ದಾರ್ ಮತ್ತು ಇತರ ಅಧಿಕಾರಿಗಳು ಮನೆಗೆ ಬಂದು ಪತ್ರಕ್ಕೆ ಸಹಿ ಹಾಕುವಂತೆ ಹೇಳಿದರು.  ಪರಿಹಾರದ ಬಗ್ಗೆ ಅವರು ಯಾವುದೇ ಮಾತನಾಡಲಿಲ್ಲ. ನಂತರ ಅವರು ಹೆಚ್ಚಿನ ಮಾತುಕತೆಗೆ ಕಚೇರಿಗೆ ಬರುವಂತೆ ಸೂಚಿಸಿದರು ಎಂದು ಅವರು ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಜಿಯಾವುಲ್ ಇಸ್ಲಾಂ, ಪತ್ರದಲ್ಲಿ ಯಾವುದೇ ಅಧಿಕಾರಿ ಅಥವಾ ಇಲಾಖೆಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಇದಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ ತಿಳಿಸಿದ್ದಾರೆ.ಯುಪಿ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಶಹನವಾಝ್ ಆಲಂ ಅವರು ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

“ನವಾಬ್ ಆಸಿಫುದ್ದೀನ್ ಎಂಬ ಮುಸ್ಲಿಮ್ ವ್ಯಕ್ತಿ ಈ ದೇವಸ್ಥಾನಕ್ಕೆ ಜಾಗ ದಾನ ಮಾಡಿದವರು ಎಂಬುದನ್ನು ಎಲ್ಲರೂ ಅರಿಯಬೇಕು. ಇದುವರೆಗೆ ಬಿಜೆಪಿ ಮುಖಂಡರು ಮತ್ತು ಮಂತ್ರಿಗಳು ಭೂಮಿಯನ್ನು ಆಕ್ರಮಿಸಿಕೊಳ್ಳುತ್ತಿದ್ದರು. ಆದರೆ ಈಗ ಸ್ವತಃ ಮುಖ್ಯಮಂತ್ರಿಯವರೇ ಈ ಕೃತ್ಯವನ್ನು ಮುಂದುವರಿಸಿದ್ದಾರೆ. ಇದು ಕಾನೂನುಬಾಹಿರ ಮಾತ್ರವಲ್ಲ ಧರ್ಮದ ಸಿದ್ಧಾಂತಗಳಿಗೆ ವಿರುದ್ಧವಾದುದು ಎಂದು ಶಹನವಾಝ್ ಆಲಂ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

Join Whatsapp