ಬೆಂಗಳೂರು : ಪಠ್ಯಪುಸ್ತಕ ವಿವಾದ ಇನ್ನೂ ಮುಗಿಯದ ಹಿನ್ನೆಲೆಯಲ್ಲಿ
ಸಿಎಂ ಬಸವರಾಜ ಬೊಮ್ಮಾಯಿ ಇಂದು ಮತ್ತೆ ಮಹತ್ವದ ಸಭೆ ಕರೆದಿದ್ದಾರೆ.
ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಪರಿಷ್ಕೃತಗೊಂಡ ಪಠ್ಯಗಳನ್ನು ತಡೆಹಿಡಿದು, ಬರಗೂರು ರಾಮಚಂದ್ರಪ್ಪ ಅವರಿಂದ ಈ ಹಿಂದೆ ಪರಿಷ್ಕೃತಗೊಂಡ ಪಠ್ಯಗಳನ್ನೇ ಸರಬರಾಜು ಮಾಡಿ ಎಂಬ ಒತ್ತಡ ಸರ್ಕಾರದ ಮೇಲೆ ಹೆಚ್ಚಾಗಿದ್ದೇ ಈ ಸಭೆಯ ಆಹ್ವಾನಕ್ಕೆ ಕಾರಣ ಎನ್ನಲಾಗಿದೆ.
ಇತ್ತೀಚೆಗೆ ಬಸವಣ್ಣ, ಅಂಬೇಡ್ಕರ್, ಕುವೆಂಪು ಅವರಿಗೆ ಅಪಮಾನಿಸಿದ ವ್ಯಕ್ತಿಯಿಂದ ಪರಿಷ್ಕೃತಗೊಂಡಂತಹ ಪಠ್ಯಗಳನ್ನು ತಡೆಹಿಡಿಯಬೇಕು ಮತ್ತು ಆ ವ್ಯಕ್ತಿಯನ್ನು ಜೈಲಿಗೆ ಕಳುಹಿಸಿಬೇಕು ಮತ್ತು ಈ ಎಲ್ಲಾ ಅವಾಂತರಗಳಿಗೆ ಕಾರಣದಾರದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ರಾಜೀನಾಮೆ ನೀಡಬೇಕು ಎಂದು ಎಲ್ಲಾ ಕನ್ನಡಪರ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ಮೇಲೆ ಒತ್ತಡ ಹೇರಿದ್ದವು.
ಪಕ್ಷಾತೀತವಾಗಿ ನಡೆದ ಈ ಕಾರ್ಯಕ್ರಮ ಈಗ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ಇಂದು ಮತ್ತೆ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು.