ಬೆಂಗಳೂರು : ಸಿಎಂ ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ಈಗ ಅಸಮಾಧಾನಿತ ಶಾಸಕರ ಆಕ್ರೋಶ ಮತ್ತಷ್ಟು ತೀವ್ರಗೊಳ್ಳುತ್ತಲೇ ಇದೆ. ಮುಂದಿನ ಬುಧವಾರ ಅತೃಪ್ತ ಶಾಸಕರು ಪ್ರತ್ಯೇಕ ಸಭೆ ನಡೆಸಲು ಮುಂದಾಗಿರುವ ಬಗ್ಗೆ ವರದಿಯಾಗಿದೆ. ಸುಮಾರು 20ಕ್ಕೂ ಹೆಚ್ಚು ಶಾಸಕರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಅತೃಪ್ತ ಶಾಸಕರು ಈಗಾಗಲೇ ಫೋನ್ ನಲ್ಲಿ ಮಾತನಾಡಿಕೊಂಡಿದ್ದು, ಬುಧವಾರ ಸಭೆ ನಡೆಸಲು ಒಮ್ಮತಕ್ಕೆ ಬಂದಿದ್ದಾರೆ. ಕರಾವಳಿ ಭಾಗದ ಶಾಸಕರನ್ನು ಹೊರತುಪಡಿಸಿ, ಉಳಿದ ಭಾಗಗಳ ಶಾಸಕರು ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಸಭೆ ನಡೆಸುತ್ತಿರುವವರಲ್ಲಿ ಯಡಿಯೂರಪ್ಪ ಆಪ್ತ ಬಳಗವೇ ಮುಂಚೂಣಿಯಲ್ಲಿದೆ. ಶಾಸಕರುಗಳಾದ ಸತೀಶ್ ರೆಡ್ಡಿ, ರೇಣುಕಾಚಾರ್ಯ, ರಾಜುಗೌಡ ನಾಯಕ್, ಶಿವನಗೌಡ ನಾಯಕ್, ಗೂಳಿಹಟ್ಟಿ ಶೇಖರ್, ತಿಪ್ಪಾರೆಡ್ಡಿ, ಕರುಣಾಕರ ರೆಡ್ಡಿ, ಸೋಮಶೇಖರ್ ರೆಡ್ಡಿ, ಅಭಯ್ ಪಾಟೀಲ್, ಅಪ್ಪುಗೌಡ ಪಾಟೀಲ್, ಚಂದ್ರಪ್ಪ, ಕೆ.ಜೆ. ಬೋಪಯ್ಯ, ಅಪ್ಪಚ್ಚುರಂಜನ್, ನಾಗೇಂದ್ರ ಸೇರಿದಂತೆ ಸಚಿವ ಸ್ಥಾನ ವಂಚಿತ ಶಾಸಕರು ಸಭೆಯಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ.
ಚುನಾವಣೆಯಲ್ಲಿ ಸೋತಿರುವ ಯೋಗೇಶ್ವರ್ ರನ್ನು ಸಚಿವರನ್ನಾಗಿರಿಸಿರುವುದಕ್ಕೆ ಬಾರೀ ಆಕ್ರೋಶ ವ್ಯಕ್ತವಾಗಿದೆ. ಈ ಹಿಂದೆ ಲಕ್ಷ್ಮಣ್ ಸವದಿಯನ್ನು ಸಂಪುಟಕ್ಕೆ ತೆಗೆದುಕೊಂಡಾಗಲೂ ಭಾರೀ ವಿರೋಧ ವ್ಯಕ್ತವಾಗಿತ್ತು.