ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಸಂಕ್ರಾಂತಿ ಬಳಿಕ ‘ಸಿಡಿ(CD) ವಾರ್’ ನಡೆಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ನೂತನ ಸಚಿವ ಸಂಪುಟ ವಿಸ್ತರಣೆಯ ಹಿನ್ನೆಲೆಯಲ್ಲಿ ಅಸಮಾಧಾನಿತರಾದ ಶಾಸಕರು ಹೊರಹಾಕಿರುವ ‘ಸಿಡಿ ಬ್ಲಾಕ್ ಮೇಲ್’ ಆರೋಪಕ್ಕೆ ಸಂಬಂಧಿಸಿ, ಮಾಜಿ ಸಚಿವ ಎಚ್. ವಿಶ್ವನಾಥ್ ಅವರು ಸುದ್ದಿ ಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ, ಸಂಕ್ರಾಂತಿ ಬಳಿಕ ಸಿಡಿಯೊಂದು ಹೊರಬೀಳಲಿದೆ ಎಂದು ಹೇಳಿದ್ದಾರೆ.
ಯೋಗೇಶ್ವರ್ ಅವರನ್ನು ಸಚಿವರನ್ನಾಗಿ ಮಾಡಲು ಮುನಿರತ್ನ ಅವರನ್ನು ಬಲಿಕೊಡಲಾಯಿತು ಎಂದು ವಿಶ್ವನಾಥ್ ಆರೋಪಿಸಿದ್ದಾರೆ.
ಈಗ ಸಚಿವರನ್ನಾಗಿ ಮಾಡಲಾಗಿದೆಯಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ವಿಶ್ವನಾಥ್, ಸಿಡಿ ಒಬ್ಬರ ಬಳಿಯೇ ಇಲ್ಲ, ಬೇರೆಯವರ ಬಳಿಯೂ ಇದೆ. ಸಂಕ್ರಾಂತಿ ಬಳಿಕ ಅದು ಹೊರಬೀಳಲಿದೆ ಎಂದು ಹೇಳಿದ್ದಾರೆ. ಆದರೆ, ಯಾವ ಸಿಡಿ? ಯಾರ ಸಿಡಿ? ಎಂಬುದರ ಬಗ್ಗೆ ಅವರು ಯಾವುದೇ ಸ್ಪಷ್ಟವಾಗಿ ಉತ್ತರಿಸಿಲ್ಲ.
ಸಿಡಿ ತೋರಿಸಿ ಬ್ಲಾಕ್ ಮೇಲ್ ಮಾಡಿ ಕೆಲವರು ಸಚಿವರಾಗಿದ್ದಾರೆ ಎಂದು ವಿಶ್ವನಾಥ್ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಪಾದಿಸಿದ್ದಾರೆ.