ಮಂಗಳೂರು : ದ.ಕ. ಮತ್ತು ಉಡುಪಿ ಜಿಲ್ಲೆಯ ಆಂಗ್ಲ ಮಾಧ್ಯಮ ಶಾಲೆಗಳ ಒಕ್ಕೂಟದ ಅಧ್ಯಕ್ಷ ಎಡಪದವು ಮುಹಮ್ಮದ್ ಬ್ಯಾರಿ ಅವರು ಅಲ್ಪಕಾಲದ ಅಸೌಖ್ಯದ ಬಳಿಕ ಶನಿವಾರ ಮಧ್ಯಾಹ್ನ ನಿಧನರಾಗಿದ್ದಾರೆ. ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಅವರಿಗೆ 65 ವರ್ಷಗಳಾಗಿದ್ದವು.
ಮೂಲತಃ ಎಡಪದವಿನವರಾದ ಮುಹಮ್ಮದ್ ಬ್ಯಾರಿ ಅವರು ಸಿಂಡಿಕೇಟ್ ಬ್ಯಾಂಕ್ ನಲ್ಲಿ ಉದ್ಯೋಗಿಯಾಗಿ ದೆಹಲಿ ಸಹಿತ ದೇಶದ ವಿವಿಧೆಡೆ ಸೇವೆ ಸಲ್ಲಿಸಿದವರು. ಅಲ್ಲಿಂದ ಸ್ವಯಂ ನಿವೃತ್ತಿ ಪಡೆದ ಅವರು ಶಿಕ್ಷಣ ಕ್ಷೇತ್ರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು.
ಎಡಪದವಿನಲ್ಲಿ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭಿಸಿ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಿದ್ದರು. ಮುಸ್ಲಿಂ ಸಮುದಾಯ ಶಿಕ್ಷಣ ಕ್ಷೇತ್ರದಲ್ಲಿ ಮುಂದೆ ಬರಬೇಕು ಎಂಬ ಕಾಳಜಿಯಿಂದ ಸಂಘಟನಾತ್ಮಕವಾಗಿ ಮುಂಚೂಣಿಯಲ್ಲಿ ನಿಂತು ಅವರು ಕೆಲಸ ಮಾಡಿದ್ದರು.
ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ ಸೇವೆ ನೀಡುವ ಖಾಸಗಿ ಶಾಲೆಗಳಿಗೆ ಇರುವ ಸವಾಲುಗಳನ್ನು ಸರಕಾರದ ಗಮನಕ್ಕೆ ತರುವ ಮೂಲಕ, ಸಮಸ್ಯೆಗಳನ್ನು ಪರಿಹರಿಸುವಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ್ದರು.
ದ.ಕ., ಉಡುಪಿ ಆಂಗ್ಲ ಮಾಧ್ಯಮ ಶಾಲೆಗಳ ಒಕ್ಕೂಟದ ಅಧ್ಯಕ್ಷರಾಗಿ, ಎಡಪದವು ಉಮ್ಮುಹಾತುಲ್ ಮುಮಿನೀನ್ ಮಸೀದಿಯ ಅಧ್ಯಕ್ಷರಾಗಿ ಅವರು ಸೇವೆ ಸಲ್ಲಿಸಿದ್ದರು. ಎಡಪದವು ಪರಿಸರದಲ್ಲಿ ಎಲ್ಲಾ ಸಮುದಾಯಗಳ ನಡುವೆ ಅವರು ಸೌಹಾರ್ಧ ಕೊಂಡಿಯಾಗಿದ್ದರು. ಅವರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.