ಬಸ್ ನಲ್ಲಿ ಯುವತಿಗೆ ಕಿರುಕುಳ ಪ್ರಕರಣ | ಆರೋಪಿ ಪತ್ತೆಗೆ ಬಲೆ ಬೀಸಿರುವ ಪೊಲೀಸರು

Prasthutha|

ಮಂಗಳೂರು : ಖಾಸಗಿ ಬಸ್ಸೊಂದರಲ್ಲಿ ಯುವತಿಯೊಬ್ಬರಿಗೆ ಸಹ ಪ್ರಯಾಣಿಕರನೋರ್ವ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

- Advertisement -

ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಅವರು ಈ ಮಾಹಿತಿ ನೀಡಿದರು. ಘಟನೆಯ ಕುರಿತು ಯುವತಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಆಕೆಯನ್ನು ಸಂಪರ್ಕಿಸಲಾಯಿತು. ಆಕೆಯೇ ಉಳ್ಳಾಲ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ. ಒಂದು ವೇಳೆ ಆಕೆ ದೂರು ದಾಖಲಿಸಿರದಿದ್ದಲ್ಲಿ, ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸುತ್ತಿದ್ದರು ಎಂದು ಅವರು ತಿಳಿಸಿದರು.

ಶೀಘ್ರದಲ್ಲಿಯೇ ಈ ಸಂಬಂಧ ಬಸ್ ಮಾಲಕರ ಸಂಘದ ಸಭೆ ಕರೆಯಲಾಗುವುದು. ಹಿರಿಯ ನಾಗರಿಕರು, ಮಹಿಳೆಯರು, ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡುವಂತೆ ಸೂಚಿಸಲಾಗುವುದು ಎಂದು ಅವರು ಹೇಳಿದರು.

- Advertisement -

ಬಸ್ ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದರೆ ಇಂತಹ ಘಟನೆಗಳನ್ನು ತಡೆಗಟ್ಟಬಹುದು. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಬಸ್ ಗಳಲ್ಲಿ ಮಹಿಳಾ ತಂಡವೊಂದನ್ನು ಮಫ್ತಿಯನ್ನು ಕಳುಹಿಸಿ ಕಾರ್ಯಾಚರಣೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಇಂತಹ ಘಟನೆಗಳು ಎಲ್ಲೇ ನಡೆದರೂ, 112 ನಂಬರ್ ಗೆ ಮಾಹಿತಿ ನೀಡುವಂತೆ ಅವರು ಮನವಿ ಮಾಡಿದರು.

ಜ.14ರಂದು ಯುವತಿಯೊಬ್ಬಳು ದೇರಳಕಟ್ಟೆಯಿಂದ ಪಂಪ್ ವೆಲ್ ಗೆ ಖಾಸಗಿ ಬಸ್ಸೊಂದರಲ್ಲಿ ಪ್ರಯಾಣಿಸುತ್ತಿದ್ದ ವೇಳೆ ವಿಕೃತ ಮನೋಸ್ಥಿತಿಯ ವ್ಯಕ್ತಿಯೊಬ್ಬ ಆಕೆಯ ದೇಹ ಸ್ಪರ್ಶಿಸಿದುದಲ್ಲದೆ, ಉದ್ದಟತನದಿಂದ ನಡೆದುಕೊಂಡಿದ್ದಾನೆ. ಈ ವೇಳೆ ಬಸ್ ಸಿಬ್ಬಂದಿ, ಸಾರ್ವಜನಿಕರು ಯಾರೂ ಆಕೆಯ ಸಹಾಯಕ್ಕೆ ಬಂದಿಲ್ಲ. ಈ ಬಗ್ಗೆ ಆಕೆ ಸಾಮಾಜಿಕ ಜಾಲತಾಣದಲ್ಲಿ ಪೊಸ್ಟ್ ಮಾಡಿದ್ದುದು, ಭಾರೀ ವೈರಲ್ ಆಗಿತ್ತು.

Join Whatsapp