ಬೆಂಗಳೂರು: ಮುಂದಿನ ಸಲ ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಮದರಸಾಗಳನ್ನು ಸಂಪೂರ್ಣವಾಗಿ ಬಂದ್ ಮಾಡುತ್ತೇವೆಂದು ವಿವಾದಾತ್ಮಕ ಹೇಳಿಕೆ ನೀಡಿರುವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಮೇಲೆ ಬಿಜೆಪಿ ಪಕ್ಷ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹೀರ್ ಹುಸೇನ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಬೆಳಗಾವಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಹಿಂದೂಗಳಿಗೆ ಮಾತ್ರ ಭಾರತ ಇರುವುದು. ನಾನು ಬಸನಗೌಡ ಪಾಟೀಲ್ ಯತ್ನಾಳ್ ಆಗಿ ಉಳಿಯಲು ಶಿವಾಜಿ ಮಹಾರಾಜರು ಕಾರಣ. ಶಿವಾಜಿ ಇಲ್ಲದಿದ್ದರೆ, ನಾನು ಬಶೀರ್ ಆಹ್ಮದ್ ಪಟೇಲ್ ಆಗಿರುತ್ತಿದ್ದೆ. ಅಭಯ ಪಾಟೀಲ್ ಅಜರುದ್ದೀನ್ ಪಟೇಲ್ ಆಗಿರುದ್ದರು ಎಂದು ವಿವಾದಾತ್ಮಕ ಹೇಳಿಕೆ ನೀಡಿರುವುದು ಖಂಡನೀಯ. ಜಾತೀಯತೆ ಮೇಲೆ ರಾಜಕಾರಣ ಮಾಡುವ ಇಂಥ ನಾಲಾಯಕ್ ರಾಜಕಾರಣಿಗಳು ಸಮಾಜಕ್ಕೆ ಮಾರಕವಾಗಿದ್ದಾರೆ. ಸಮಾಜದಲ್ಲಿನ ಶಾಂತಿ ಸೌಹಾರ್ದತೆಗೆ ಧಕ್ಕೆ ತರುವ ಇಂಥ ನೀಚ ರಾಜಕಾರಣಿಗಳ ವಿರುದ್ಧ ಕೂಡಲೇ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಬಿಜೆಪಿಯ ಮುಖಂಡರು ಸಿಟಿ ರವಿ, ಅಶ್ವಥ್ ನಾರಾಯಣ ಹೀಗೆ ಹಲವು ನಾಯಕರು ಉದ್ದೇಶಪೂರ್ವಕವಾಗಿ ಸಮಾಜದಲ್ಲಿ ಸಾಮರಸ್ಯ ಕೆಡಿಸುವ ಕೆಲಸ ಮಾಡುತ್ತಿದ್ದಾರೆ, ಇವರ ಮೇಲೆ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತವಾಗಿ ದೂರ ದಾಖಲು ಮಾಡಿ ಕ್ರಮ ಜರಗಿಸಬೇಕು, ಅದೇ ರೀತಿ ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಅವರು ಒತ್ತಾಯಿಸಿದರು.
ಯತ್ನಾಳ್ ಹೇಳಿಕೆ ಸಾಮರಸ್ಯಕ್ಕೆ ಮಾರಕ: ಶಿಸ್ತು ಕ್ರಮಕ್ಕೆ ವೆಲ್ಫೇರ್ ಪಾರ್ಟಿ ಆಗ್ರಹ
Prasthutha|