ಉದ್ಘಾಟನೆಯಾಗದ ಯರಗೋಳ್ ಯೋಜನೆ:ಸರಕಾರದ ವಿಳಂಬ ನೀತಿ ನಾಚಿಕೆಗೇಡು; ಹೆಚ್.ಡಿ.ಕುಮಾರಸ್ವಾಮಿ ಕಿಡಿ

Prasthutha|

ಬೆಂಗಳೂರು: ಕೋಲಾರ ಜಿಲ್ಲೆಯ ನಾಲ್ಕು ತಾಲೂಕುಗಳಿಗೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಯರಗೋಳ್ ಜಲಾಶಯ ತುಂಬಿ ಹರಿಯುತ್ತಿದ್ದರೂ, ಇನ್ನೂ ಆ ಯೋಜನೆಯನ್ನು ಉದ್ಘಾಟನೆ ಮಾಡದ ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಸಮೃದ್ಧ ಮಳೆಯಿಂದ ಜಲಾಶಯ ಕೋಡಿ ಹೋಗುತ್ತಿರುವ ಹಿನ್ನೆಲೆಯಲ್ಲಿ ಸಂತಸ ವ್ಯಕ್ತಪಡಿಸಿರುವ ಅವರು, ಶೀಘ್ರವೇ ಜಲಾಶಯಕ್ಕೆ ಭೇಟಿ ನೀಡಿ  ಬಾಗೀನ ಅರ್ಪಿಸುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಸರಕಾರದ ನಿರ್ಲಕ್ಷ್ಯ ವೈಖರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಯರಗೋಳ್ ಅಣೆಕಟ್ಟೆ ತುಂಬಿ ಹರಿಯುತ್ತಿರುವ ದೃಶ್ಯ ಕಂಡು ನನ್ನ ಮನದುಂಬಿ ಬಂದಿದೆ. ಕುಡಿಯುವ ನೀರಿಲ್ಲದೆ ತತ್ತರಿಸಿದ್ದ ಈ ಭಾಗದ ಜನರಿಗೆ ಪರಿಶುದ್ಧ ನೀರು ಒದಗಿಸಲು 2006ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ಯರಗೋಳ್ ಯೋಜನೆಗೆ ಒಪ್ಪಿಗೆ ನೀಡಿದ್ದೆ. ಈ ಅಣೆಕಟ್ಟೆಗೆ ನೀರೆಲ್ಲಿಂದ ಬರುತ್ತದೆ ಎಂದು ಮೂಗು ಮುರಿದಿದ್ದವರು ಈಗೊಮ್ಮೆ ನೋಡಬೇಕು. ಅಲ್ಲಿ ಕಂಗೊಳಿಸುತ್ತಿರುವ ʼಜಲಸಿರಿʼ ನೋಡಲು ಎರಡು ಕಣ್ಣು ಸಾಲದು. ಕೋಲಾರ, ಮಾಲೂರು, ಬಂಗಾರಪೇಟೆ, ಕೆಜಿಎಫ್ ಸೇರಿ 4 ತಾಲೂಕುಗಳಿಗೆ ನೀರೊದಗಿಸುವ ಈ ಯೋಜನೆಯನ್ನು ಸರಕಾರ ಕೂಡಲೇ ಲೋಕಾರ್ಪಣೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.



Join Whatsapp