“ಸಾರಿಗೆ ನೌಕರರ ಮೇಲೆ ಎಸ್ಮಾ ಜಾರಿ ಮಾಡಬೇಡಿ, ಮುಷ್ಕರ ಮುಂದುವರೆದರೆ ಬಡವರ ಹೊಟ್ಟೆ ಮೇಲೆ ಹೊಡೆದಂತೆ” | ಯಡಿಯೂರಪ್ಪರ ಹಳೆ ಹೇಳಿಕೆ ಮತ್ತೆ ವೈರಲ್ !

Prasthutha|

►‘ಅಂದು ಬಡವರಾಗಿದ್ದ ನೌಕರರು ಈಗ ಶ್ರೀಮಂತರಾದರೇ ಎಂದು ಪ್ರಶ್ನಿಸಿದ ನೆಟ್ಟಿಗರು

- Advertisement -

ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು KSRTC ನೌಕರರು ನಿನ್ನೆಯಿಂದ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ. ಬೇಡಿಕೆಗಳನ್ನು ಈಡೇರಿಸುವ ಕುರಿತು ಆಲೋಚಿಸದೆ ಕೇವಲ ಬೆದರಿಕೆಯ ಮೂಲಕವೇ ಪ್ರತಿಭಟನೆಯನ್ನು ಹಣಿಯಲು ಪ್ರಯತ್ನಿಸುತ್ತಿರುವ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರು ನಿನ್ನೆ ಪ್ರತಿಭಟನಾ ನಿರತರ ಮೇಲೆ ಎಸ್ಮಾ ಜಾರಿಗೊಳಿಸುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಮತ್ತೊಂದೆಡೆ ಸಾರಿಗೆ ಸಚಿವ ಸವದಿ ಕೂಡಾ ಬೇಡಿಕೆಗಳನ್ನು ಈಡೇರಿಸುವ ಪ್ರಮೇಯವೇ ಇಲ್ಲ ಎಂದು ಖಂಡತುಂಡವಾಗಿ ಹೇಳಿಕೆ ನೀಡಿದ್ದರು.  ಇದೀಗ ಮುಖ್ಯಮಂತ್ರಿ ಯಡಿಯೂರಪ್ಪನವರ ಎಸ್ಮಾ ಜಾರಿ ಹೇಳಿಕೆಗೆ ವಿರುದ್ಧವಾಗಿ ಹಲವು ನೆಟ್ಟಿಗರು  ಯಡಿಯೂರಪ್ಪನವರ ಕಾಲೆಳೆದಿದ್ದಾರೆ. ಅವರು ವಿಪಕ್ಷದಲ್ಲಿದ್ದಾಗ ಸಾರಿಗೆ ನೌಕರರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ನೀಡಿದ್ದ ಹೇಳಿಕೆಯ ಪತ್ರಿಕಾ ಕಟ್ಟಿಂಗನ್ನು ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಿ ಯಡಿಯೂರಪ್ಪನವರನ್ನು ಪ್ರಶ್ನಿಸಿದ್ದಾರೆ.

ಯಡಿಯೂರಪ್ಪನವರು ವಿರೋಧ ಪಕ್ಷದಲ್ಲಿದ್ದಾಗ ಸರಕಾರಕ್ಕೆ ಮನವಿ ಮಾಡುತ್ತಾ, “ಸಾರಿಗೆ ನೌಕರರ ಪ್ರತಿಭಟನೆಯನು ಪ್ರತಿಷ್ಟೆಯನ್ನಾಗಿ ಮಾಡಿಕೊಳ್ಳಬೇಡಿ. ನೌಕರರನ್ನು ಮಾತುಕತೆಗೆ ಕರೆದು ಮುಷ್ಕರ ಅಂತ್ಯಗೊಳಿಸಿ. ಎಸ್ಮಾ ಜಾರಿ ಮಾಡದೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ. ಮುಷ್ಕರ ಮುಂದುವರೆದರೆ ಬಡವರ ಹೊಟ್ಟೆ ಮೇಲೆ ಸರ್ಕಾರವೇ ಹೊಡೆದಂತೆ” ಎಂಬ ಹೇಳಿಕೆ ನೀಡಿದ್ದರು. ಜಾಲತಾಣಿಗರು ಈಗ ಅದರ ಪತ್ರಿಕಾ ತುಂಡನ್ನು ಹಾಕಿ ಯಡಿಯೂರಪ್ಪನವರ ಕಾಲೆಳೆಯುತ್ತಿದ್ದಾರೆ.

- Advertisement -

ವಿರೋಧ ಪಕ್ಷದಲ್ಲಿದ್ದಾಗ ಆಡಳಿತ ಪಕ್ಷಕ್ಕೆ ಎಸ್ಮಾ ಜಾರಿ ಮಾಡಬೇಡಿ. ಬಡ ಸಾರಿಗೆ ನೌಕರರ ಹೊಟ್ಟೆ ಮೇಲೆ ಹೊಡೆಯಬೇಡಿ ಎಂದೆಲ್ಲಾ ಸಲಹೆ ನೀಡಿದ್ದ ಯಡಿಯೂರಪ್ಪನವರು ಈಗ ತಮ್ಮದೇ ಆಡಳಿತದಲ್ಲಿ ಅದೇ ಬಡ ನೌಕರರ ಮೇಲೆ ಎಸ್ಮಾ ಜಾರಿಯ ಮಾತುಗಳನ್ನಾಡುತ್ತಿದ್ದಾರೆ. ಹಾಗಾದರೆ ಈಗ ಪ್ರತಿಭಟನಾ ನಿರತರು ಬಡವರಲ್ಲವೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.



Join Whatsapp