ಸಾರಿಗೆ ನೌಕರರ ಮುಷ್ಕರ | ಸರ್ಕಾರವೇ ಹೊಣೆ ಎಂದ ಸಿದ್ದರಾಮಯ್ಯ

Prasthutha|

ಬೆಂಗಳೂರು : ವೇತನ ಹೆಚ್ಚಳಕ್ಕೆ ಒತ್ತಾಯಿಸಿ, ಆರನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಬೇಕೆಂದು ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳ ನೌಕರರು ನಡೆಸುತ್ತಿರುವ ಮುಷ್ಕರದ ಬಗ್ಗೆ ಪ್ರತಿಕ್ರಿಯಿಸಿರುವ ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡಿದ್ದಾರೆ. “ಕೊರೊನಾ ರೋಗದಿಂದ ತತ್ತರಿಸಿಹೋಗಿರುವ ರಾಜ್ಯದ ಜನತೆ ಕೆಎಸ್‌ಆರ್‌ಟಿಸಿ‌ ನೌಕರರ ಮುಷ್ಕರದಿಂದಾಗಿ ದುಪ್ಪಟ್ಟು ಕಷ್ಟ-ನಷ್ಟಕ್ಕೀಡಾಗುತ್ತಿರುವುದಕ್ಕೆ ರಾಜ್ಯದ ಅಸಮರ್ಥ-ಭ್ರಷ್ಟ ಬಿಜೆಪಿ ಸರ್ಕಾರವೇ ಹೊಣೆಯಾಗಿದೆ” ಎಂದು ಸಿದ್ದರಾಮಯ್ಯ ಟ್ವೀಟ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

“ಸರ್ಕಾರ ತನ್ನ ಪ್ರತಿಷ್ಠೆಯನ್ನು ಬದಿಗಿಟ್ಟು ತಕ್ಷಣ ಕೆಎಸ್‌ಆರ್‌ಟಿಸಿ ಕಾರ್ಮಿಕರ ಜೊತೆ ಮಾತುಕತೆ ನಡೆಸಿ ಸಮಸ್ಯೆಯನ್ನು ಸೌಹಾರ್ದತೆಯಿಂದ ಬಗೆಹರಿಸಿ” ಎಂದು ಸಲಹೆ ನೀಡಿದ್ದಾರೆ.

“ಕಳೆದ ಬಾರಿ ಕೆಎಸ್‌ಆರ್‌ಟಿಸಿ‌ ನೌಕರರ‌ ಮುಷ್ಕರದ ಸಂದರ್ಭದಲ್ಲಿ ಅವರ ಬೇಡಿಕೆಗಳ ಬಗ್ಗೆ ಸಮ್ಮತಿಸಿದಾಗಲೇ ಅದರ ಪರಿಣಾಮವನ್ನು ರಾಜ್ಯ ಬಿಜೆಪಿ ಸರ್ಕಾರ ಯೋಚಿಸಿ ನಿರ್ಧಾರ ಕೈಗೊಳ್ಳಬೇಕಿತ್ತು. ಆ‌ ಕ್ಷಣದಲ್ಲಿ ಸುಳ್ಳು ಆಶ್ವಾಸನೆ ನೀಡಿ ನಂತರ ಮಾತು ತಪ್ಪಿರುವುದೇ ಈಗಿನ ಸಂಘರ್ಷಕ್ಕೆ ಕಾರಣ” ಎಂದು ಸಿದ್ದರಾಮಯ್ಯ ಟ್ವೀಟ್ ನಲ್ಲಿ ಆರೋಪಿಸಿದ್ದಾರೆ.

- Advertisement -

“ಕಾರ್ಮಿಕ‌ ಸಂಘದ ನಾಯಕರ ಜೊತೆ ಕೂತು ಅವರ ಮ‌ನವೊಲಿಸಿ ಸಮಸ್ಯೆಯನ್ನು ಬಗೆಹರಿಸಬೇಕಾದ ರಾಜ್ಯ ಬಿಜೆಪಿ ಸರ್ಕಾರ ಖಾಸಗಿ ಬಸ್ ಓಡಿಸುವ, ಎಸ್ಮಾ ಜಾರಿಗೊಳಿಸುವ ಬೆದರಿಕೆಯೊಡ್ಡಿ‌ ಸಂಘರ್ಷಕ್ಕೆ ದಾರಿಮಾಡಿಕೊಡುತ್ತಿರುವುದು ದುರದೃಷ್ಟಕರ” ಎಂದು ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಖೇದ ವ್ಯಕ್ತಪಡಿಸಿದ್ದಾರೆ.

“ಕೆಎಸ್‌ಆರ್‌ಟಿಸಿ ನೌಕರರ ಬೇಡಿಕೆಗಳನ್ನು ಈಡೇರಿಸಲಾಗದಿರುವುದಕ್ಕೆ ರಾಜ್ಯ ಬಿಜೆಪಿ ಸರ್ಕಾರ ನೀಡುತ್ತಿರುವ ಆರ್ಥಿಕ ಸಂಕಷ್ಟ ಸ್ವಯಂಕೃತ ಅಪರಾಧ. ತನ್ನ ದುರಾಡಳಿತ ಮತ್ತು ಕೇಂದ್ರದ ಗುಲಾಮಗಿರಿಯಿಂದಾಗಿ ರಾಜ್ಯ ಸರ್ಕಾರ ದಿವಾಳಿಯಾಗಿದೆ” ಎಂದು ಅವರು ಹೇಳಿದ್ದಾರೆ.

ಈ ಮುಷ್ಕರದಿಂದಾಗಿ ಕೆಲವು ಸರ್ಕಾರಿ ಬಸ್‌ಗಳು ಸಂಚಾರ ನಡೆಸುತ್ತಿದ್ದು, ಖಾಸಗಿ ವಾಹನಗಳ ಸಂಚಾರ ಹೆಚ್ಚಾಗಿದೆ. ಸರ್ಕಾರ ಮತ್ತು ನೌಕರರ ಪ್ರತಿಷ್ಠೆ ಮುಂದುವರೆದಿದ್ದು, ಬಸ್‌ಗಳ ಸಂಚಾರವಿಲ್ಲದೆ ಜನರು ಪರದಾಡುವಂತಾಗಿದೆ.

Join Whatsapp