ಬೇಡಿಕೆ ಈಡೇರಿಸುವ ಲಿಖಿತ ಭರವಸೆ: ರಾಜ್ಯ ಸಮುದಾಯ ನೌಕರರ ಮುಷ್ಕರ ವಾಪಸ್

Prasthutha|

ಬೆಂಗಳೂರು: ಈ ತಿಂಗಳ 19ರಿಂದ ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿದ್ದ ರಾಜ್ಯ ಸಮುದಾಯ ನೌಕರರ ಮುಷ್ಕರ ನಾಲ್ಕನೇ ದಿನವಾದ ಇಂದು ಕೊನೆಯಾಗಿದೆ. ರಾಜ್ಯ ಸರ್ಕಾರ 6192 ನೌಕರರ ಬೇಡಿಕೆಗಳ ಪರಿಹಾರಕ್ಕೆ ಲಿಖಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮುಷ್ಕರವನ್ನು ಹಿಂಪಡೆಯಲಾಗಿದೆ.

- Advertisement -

ಮುಷ್ಕರ ಆರಂಭವಾದ ಎರಡನೇ ದಿನದಂದು ಸಚಿವ ದಿನೇಶ್ ಗುಂಡೂರಾವ್ ಹಾಗೂ ಹಿರಿಯ ಸಚಿವ ಸತೀಶ್ ಜಾರಕಿಹೊಳೆ ಮತ್ತು ಅಧಿಕಾರಿಗಳು ಮುಷ್ಕರದ ಸ್ಥಳಕ್ಕೆ ಬಂದು ನೌಕರರ ಬೇಡಿಕೆಗಳನ್ನು ಪರಿಶೀಲಿಸಿ ಈಡೇರಿಸುವುದಾಗಿ ಮಾತು ಕೊಟ್ಟಿದ್ದರು. ಆದರೆ ಈ ಬಾಯಿ ಮಾತಿನ ಭರವಸೆಯ ಬದಲು ಲಿಖಿತ ಭರವಸೆಗೆ ಆಗ್ರಹಿಸಿ ಮುಷ್ಕರ ಮುಂದುವರಿಸಲಾಗಿತ್ತು.

ಕರ್ನಾಟಕದಲ್ಲಿ ಕಾರ್ಮಿಕ ಕಾನೂನು ಜಾರಿ ಇಲ್ಲ. ಕಾನೂನು ಬಾಹೀರ ಗುತ್ತಿಗೆ ಪದ್ಧತಿ ರಾರಾಜಿಸುತ್ತಿದೆ. ನೌಕರರನ್ನು ಗುಲಾಮರಂತೆ ದುಡಿಸಲಾಗುತ್ತಿದೆ. ಸೂಕ್ತ ವೇತನ ಸೌಲಭ್ಯಗಳಿಲ್ಲ. ಉದ್ಯೋಗ ಭದ್ರತೆ ಇಲ್ಲದೆ ದುಡಿಯೋದು ಹೇಗೆ? ಮುಂತಾದ ವಿಷಯಗಳನ್ನು ಎತ್ತಿ ಮುಷ್ಕರ ಮುಂದುವರೆದಿತ್ತು.

- Advertisement -

ಅಲ್ಲದೆ, ಇಂದು ಫ್ರೀಡಂ ಪಾರ್ಕ್‌ನಿಂದ ವಿಧಾನ ಸೌಧವರೆಗೆ 6,000 ಜನರ ಕಾಲ್ನಡಿಗೆ ಜಾಥವನ್ನು ಘೋಷಿಸಲಾಗಿತ್ತು. ಬೆಳಗ್ಗೆಯಿಂದಲೇ ಫ್ರೀಡಂ ಪಾರ್ಕ್‌ನಲ್ಲಿ ಭಾರಿ ಪೊಲೀಸ್ ಬಲ ಜಮಾವಣೆಯಾಗಿತ್ತು. ಮುಷ್ಕರದ ಸ್ಥಳದ ಸುತ್ತ ಬ್ಯಾರಿಕೆಡ್ ನಿರ್ಮಿಸಲಾಗಿತ್ತು. 25ಕ್ಕೂ ಹೆಚ್ಚು ಬಸ್ಸುಗಳನ್ನು ಬಂಧನ ಕಾರ್ಯಕ್ಕಾಗಿ ಸಂಯೋಜಿಸಲಾಗಿತ್ತು. ಯಾವುದಕ್ಕೂ ಹೆದರದೆ ನಡೆದ ಮುಷ್ಕರದ ಹಿನ್ನೆಲೆಯಲ್ಲಿ ಮತ್ತೆ ಮಾತುಕತೆ ನಡೆದು, ಸಂಜೆ 5:30 ಸುಮಾರಿಗೆ ಆರೋಗ್ಯ ಸೌಧಕ್ಕೆ ಕರೆದು ಲಿಖಿತ ಭರವಸೆ ಪತ್ರ ನೀಡಲಾಯಿತು.

ಈ ಪತ್ರದ ಪ್ರಕಾರ ಆರೋಗ್ಯ ಇಲಾಖೆಯು ನೌಕರರ ಖಾಯಂ ಮಾಡಲು ಪ್ರಸ್ತಾವನೆ ಸಲ್ಲಿಸಬೇಕು. ವಾರ್ಷಿಕ 5% ವೇತನ ಹೆಚ್ಚಳ ಜಾರಿ ಮಾಡಬೇಕು. ಮಾಸಿಕ 8,000 ಬದಲು ಹದಿನೈದು ಸಾವಿರ ರೂ. ಪ್ರೋತ್ಸಾಹ ಧನ ನೀಡಬೇಕು. ಉಳಿದ ಸಮಸ್ಯೆಗಳ ಪರಿಹಾರಕ್ಕೆ ಶೀಘ್ರಗತಿಯಲ್ಲಿ ಸಂಘದೊಂದಿಗೆ ಸಭೆ ನಡೆಸಬೇಕು ಎಂಬ ಬೇಡಿಕೆ ಈಡೇರುವ ಭರವಸೆ ಲಿಖಿತವಾಗಿ ದೊರೆತಿದೆ.

ಸಮುದಾಯ ನೌಕರರ ಚೊಚ್ಚಲ ಮುಷ್ಕರಕ್ಕೆ ಚಿಕ್ಕ ಚೊಚ್ಚಲ ಉತ್ತಮ ಫಲಿತಾಂಶ ಎಂದು ಇದನ್ನು ಬಣ್ಣಿಸಲಾಗಿದೆ. ರಾಜ್ಯದಾದ್ಯಂತ ಇತರೆ ಗುತ್ತಿಗೆ ಕಾರ್ಮಿಕರ ಒಡಗೂಡಿ ಗುತ್ತಿಗೆ ಪದ್ಧತಿ ವಿರುದ್ಧ ದೊಡ್ಡ ಹೋರಾಟ ಕಟ್ಟಲು ಈ ಮುಷ್ಕರದ ಯಶಸ್ಸು ಪ್ರೇರಕ ಶಕ್ತಿಯಾಗಿ ಕೆಲಸ ಮಾಡಲಿದೆ ಎಂದುಅಖಿಲ ಕರ್ನಾಟಕ ರಾಜ್ಯ ಸಮುದಾಯ ಎನ್ಎಚ್ಎಂ ಗುತ್ತಿಗೆ ನೌಕರರ ಸಂಘದ ಗೌರವಾಧ್ಯಕ್ಷ ಆರ್.ಮಾನಸಯ್ಯ, ಅಧ್ಯಕ್ಷ ಮಮಿತ ಗಾಯಕ್ವಾಡ್, ಪ್ರಧಾನ ಕಾರ್ಯದರ್ಶಿ ಚೆನ್ನಪ್ಪ ನಾಯ್ಕ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾದೊಂದಿಗೆ ಸಂಯೋಜಿತಗೊಂಡ, ಅಖಿಲ ಕರ್ನಾಟಕ ರಾಜ್ಯ ಸಮುದಾಯ ಎನ್ಎಚ್ಎಂ ಗುತ್ತಿಗೆ ನೌಕರರ ಸಂಘವನ್ನು ಮತ್ತಷ್ಟು ಬಲಪಡಿಸಲು ಸಹಕಾರಿ ಆಗಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯದ 28 ಜಿಲ್ಲೆಗಳಿಂದ ಸರಾಸರಿ ನಾಲ್ಕು ಸಾವಿರಕ್ಕೂ ಹೆಚ್ಚು, ಅದರಲ್ಲೂ ಶೇಕಡ 90ರಷ್ಟು ಮಹಿಳಾ ನೌಕರರು ಮಕ್ಕಳು ಮರಿಗಳೊಂದಿಗೆ ಮುಷ್ಕರದಲ್ಲಿ ಸತತವಾಗಿ ಭಾಗವಹಿಸಿದ್ದು ಅತ್ಯಂತ ಸಕಾರಾತ್ಮಕ ವಿಚಾರವಾಗಿದೆ ಎಂದಿದ್ದಾರೆ.

ಮುಷ್ಕರದ ನೇತೃತ್ವ ವಹಿಸಿದ್ದ ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ನೌಕರರ ಸಂಘದ ಗೌರವಾಧ್ಯಕ್ಷ ಆರ್. ಮಾನಸಯ್ಯ, ಟಿಯುಸಿಐ ಕರ್ನಾಟಕ ರಾಜ್ಯ ಸಮಿತಿ ಉಪಾಧ್ಯಕ್ಷ ಎಂ ಗಂಗಾಧರ್, ಕಾರ್ಮಿಕ ಮುಖಂಡ ಹಾಗೂ ಖ್ಯಾತ ವಕೀಲರಾದ, ಎಸ್.ಬಾಲನ್, ಟಿಯುಸಿಐ ಮುಖಂಡ ಅಜೀಜ್ ಜಾಗೀರದಾರ್, ಟಿಯುಸಿಐ ಆಕ್ಟಿವಿಸ್ಟ್ ಎಂ.ನಿಸರ್ಗ, ತುಂಗಭದ್ರಾ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಜಿ. ಅಡವಿರಾವ್, ಬಳ್ಳಾರಿ ಜಿಲ್ಲಾ ಗಣಿ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಎಂ ಸತೀಶ್, ಸಮುದಾಯ ನೌಕರ ಸಂಘದ ರಾಜ್ಯಾಧ್ಯಕ್ಷ ಮಮಿತ್ ಗಾಯಕ್ವಾಡ್, ರಾಜ್ಯ ಉಪಾಧ್ಯಕ್ಷ ಬಸವಾನಂದ, ಪ್ರಧಾನ ಕಾರ್ಯದರ್ಶಿ ಚೆನ್ನಪ್ಪ ನಾಯಕ, ಸಂಘಟನಾ ಕಾರ್ಯದರ್ಶಿ ಜಾವಿದ್ ಹವಾಲ್ದಾರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ್ ನೂಲ್ಕರ್, ರಾಜ್ಯ ಮುಖಂಡ ಸಂಜಯ್ ಗಾಂಧಿ, ಕ್ಲಿಸ್ಟೋಫರ್, ಮಂಜುನಾಥ್ ಶಿವಮೊಗ್ಗ, ಪ್ರಕಾಶ್ ಕೋಲಾರ, ಆಶಿಶ್ ಉಡುಪಿ, ಮುಂತಾದ ಪ್ರಮುಖ ಮುಂದಾಳು ಹಾಗೂ ಕಾರ್ಯಕರ್ತರ ಸತತ ಪರಿಶ್ರಮದ ಪ್ರತಿಫಲವೇ ಈ ಮುಷ್ಕರದ ಪ್ರಾಥಮಿಕ ಜಯ ಎಂದು ಅವರು ಬಣ್ಣಿಸಿದ್ದಾರೆ.



Join Whatsapp