ಇಂದು ವಿಶ್ವ ಜಲ ದಿನ: ಕೇವಲ 29 ತಾಲ್ಲೂಕುಗಳಲ್ಲಿ ಕಾಣದ ಅಂತರ್ಜಲಕ್ಕಾಗಿ ಎರಡು ಸಾವಿರ ಕೋಟಿ ರೂ ನಷ್ಟ ಮಾಡಿಕೊಂಡ ಬಡ ರೈತರು

Prasthutha|

✍️ವಿಶೇಷ ವರದಿ: ನಂಜುಂಡಪ್ಪ.ವಿ.

- Advertisement -

ಬೆಂಗಳೂರು; ಇಂದು ಎಲ್ಲೆಡೆ ವಿಶ್ವ ಜಲ ದಿನ ಆಚರಿಸುತ್ತಿದ್ದು, “ ಅಗೋಚರ ಅಂತರ್ಜಲ – ಗೋಚರವಾಗುವಂತೆ ಮಾಡೋಣ” ಈ ವರ್ಷದ ಘೋಷ ವಾಕ್ಯ. ಆದರೆ ರಾಜ್ಯದ ಕೇವಲ 29 ತಾಲ್ಲೂಕುಗಳಲ್ಲಿ ಕಣ್ಣಿಗೆ ಕಾಣದ ಅಂತರ್ಜಲಕ್ಕಾಗಿ ರೈತರು ಎರಡು ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವೆಚ್ಚ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.


ಈ 29 ತಾಲ್ಲೂಕುಗಳಲ್ಲಿ ಸುಮಾರು ಮೂರು ಲಕ್ಷ ಕೊಳವೆ ಬಾವಿಗಳು ಹಾಳಾಗಿದ್ದು, ನಿರುಪಯುಕ್ತವಾಗಿವೆ. ಮತ್ತೆ ಪುನಶ್ಚೇನಗೊಳಿಸಲು ಸಾಧ್ಯವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇವುಗಳನ್ನು ಕೊರೆಯಲು, ಕೃಷಿ ಪಂಪ್ ಸೆಟ್ ಅಳವಡಿಸಲು, ವಿದ್ಯುತ್ ಸಂಪರ್ಕ ಕಲ್ಪಿಸುವುದು ಸೇರಿದಂತೆ ವಿವಿಧ ರೂಪದಲ್ಲಿ ರೈತರು ಭಾರೀ ಪ್ರಮಾಣದ ಹಣ ವೆಚ್ಚ ಮಾಡಿದ್ದಾರೆ.

- Advertisement -


ಇವರಲ್ಲಿ ಬಹುತೇಕ ಮಂದಿ ಸಣ್ಣ, ಅತಿ ಸಣ್ಣ ರೈತರು. ಆಕಾಶ ನೋಡಿ ಕೃಷಿ ಜತೆ ಜೂಜಾಡುವ ಈ ಭಾಗದ ರೈತರು ಕಣ್ಣಿಗೆ ಕಾಣಿಸದ ಜೀವ ಜಲದ ಮೇಲೆ ಇಷ್ಟೊಂದು ಪ್ರಮಾಣದ ಹಣವನ್ನು ವೆಚ್ಚ ಮಾಡಿ ಭಾರೀ ನಷ್ಟಕ್ಕೊಳಗಾಗಿದ್ದಾರೆ. ಈ ರೈತರು ಅತಿ ಹೆಚ್ಚು ಹಣ ವೆಚ್ಚ ಮಾಡಿ ಕೈ ಸುಟ್ಟುಕೊಂಡಿದ್ದಾರೆ. ಪ್ರಕೃತಿ ಮುಂದೆ ಎಲ್ಲರೂ ಕುಬ್ಜರು ಎನ್ನುವ ಸಂದೇಶವನ್ನು ಈ ಬೆಳವಣಿಗೆ ನೀಡುತ್ತದೆ. ಹೀಗಾಗಿ ಕಣ್ಣಿಗೆ ಕಾಣದೇ ಪಾತಾಳ ಸೇರಿರುವ ಜೀವ ಜಲವನ್ನು ಮೇಲೆತ್ತಲು, ಕೊಳವೆ ಬಾವಿ ಕೊರೆಯಲು, ರೈತರು ಹಣ ವೆಚ್ಚ ಮಾಡುವುದನ್ನು ತಗ್ಗಿಸುವ ಉದ್ದೇಶದಿಂದಲೋ ಏನೋ ವಿಶ್ವ ಸಂಸ್ಥೆ ಕಾಕತಾಲೀಯ ಎನ್ನುವಂತೆ ಈ ಬಾರಿ ಅಂತರ್ಜಲ ಗೋಚರವಾಗುವಂತೆ ಮಾಡೋಣ ಎನ್ನುವ ದ್ಯೇಯ ವಾಕ್ಯ ನೀಡಿದೆ.


ಹೌದು ರಾಜ್ಯದಲ್ಲಿ ಶೇ 51 ರಷ್ಟು ಜನ ಸಮೂಹ ಅಂತರ್ಜಲವನ್ನೇ ನಂಬಿ ಬೇಸಾಯ ಮತ್ತಿತರ ಚಟುವಟಿಕೆಗಳ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ಭೂ ಮೇಲ್ಮೈ ನೀರನ್ನು ಅವಲಂಬಿಸಿರುವವರು ಶೇ 49 ರಷ್ಟು. ಹೀಗಿರುವಾಗ ಅಂತರ್ಜಲ ದಿನೇ ದಿನೇ ಕುಸಿಯುತ್ತಿದ್ದು. ಕೆಲವೆಡೆ ಇದು ವಿಷಮ ಸ್ಥಿತಿ ತಲುಪಿದೆ. 43 ತಾಲ್ಲೂಕುಗಳಲ್ಲಿ ಅಂತರ್ಜಲ ಅಪಾಯಕಾರಿ ಮಟ್ಟದಲ್ಲಿದ್ದು. ಈ ಎಲ್ಲಾ ತಾಲ್ಲೂಕುಗಳಲ್ಲಿ ಶೇ 50 ಕ್ಕಿಂತ ಹೆಚ್ಚು ಅಂಜರ್ತಲ ದುರ್ಬಳಕೆಯಾಗಿದೆ. ಭವಿಷ್ಯದಲ್ಲಿ ಈ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಮತ್ತಷ್ಟು ಕುಸಿಯುವ ಆತಂಕ ಎದುರಾಗಿದೆ. ಅಷ್ಟೇ ಅಲ್ಲ ಇನ್ನೂ 72 ತಾಲ್ಲೂಕುಗಳಲ್ಲಿ ಅಂತರ್ಜಲ ವ್ಯವಸ್ಥೆ ಸಂಕೀರ್ಣದಾಯಕವಾಗಿದೆ.

ಅಂದರೆ ರಾಜ್ಯದ ಸುಮಾರು ಶೇ 70 ಕ್ಕಿಂತ ಹೆಚ್ಚು ಪ್ರದೇಶದಲ್ಲಿ ಅಂತರ್ಜಲ ತೀವ್ರ ತಗ್ಗಿದೆ. ಹೆಚ್ಚು ಮಳೆಯಾಗುವ ಪಶ್ಚಿಮಘಟ್ಟಗಳು, ಭೂ ಮೇಲ್ಮೈನ ನೀರಿನ ಮೇಲೆ ಬದುಕುತ್ತಿರುವ ಪ್ರದೇಶಗಳಲ್ಲಿ ಅಂತರ್ಜಲ ಆತಂಕದಲ್ಲಿಲ್ಲ. ಬಯಲು ಸೀಮೆ, ಹಳೆ ಮೈಸೂರು, ಉತ್ತರ ಕರ್ನಾಟಕದ ಹಲವು ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ.
ಕರ್ನಾಟಕವಷ್ಟೇ ಅಲ್ಲದೇ ಜಗತ್ತಿನ ಬಹುತೇಕ ಕಡೆಗಳಲ್ಲಿ ಅಂತರ್ಜಲ ಮಟ್ಟ ತಗ್ಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ವಿಶ್ವ ಜಲ ದಿನದ ಸಂದರ್ಭದಲ್ಲಿ ಅಂತರ್ಜಲ ವಲಯಕ್ಕೆ ಮಹತ್ವ ನೀಡಲಾಗಿದೆ. ಜಗತ್ತಿನಾದ್ಯಂತ 1993 ರ ಮಾರ್ಚ್ 22 ರಂದು ಮೊದಲ ಬಾರಿಗೆ ವಿಶ್ವ ಜಲ ದಿನ ಆಚರಿಸಲಾಗಿದ್ದು, ಪ್ರತಿ ವರ್ಷ ಹೊಸ ಹೊಸ ಧ್ಯೇಯಗಳೊಂದಿಗೆ ಜನ ಜಾಗೃತಿ ಮೂಡಿಸಲಾಗುತ್ತಿದೆ.


ಒಂದೆಡೆ ಅಂತರ್ಜಲ ಕುಸಿಯುತ್ತಿದ್ದರೆ ಮತ್ತೊಂದೆಡೆ ಪರಿಸರ ಸ್ನೇಹಿಯಾಗಿರುವ ಚೌಗು ಭೂಮಿ ಪ್ರದೇಶ ಕೂಡ ನಶಿಸುತ್ತಿದೆ. ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಕಣ್ಮರೆಯಾಗುತ್ತಿರುವುದು ಚೌಗು ಭೂಮಿ ವಲಯಗಳು. ಫೆಬ್ರವರಿ 2 ವಿಶ್ವ ಚೌಗುಭೂಮಿ ದಿನವನ್ನು ನಾವು ಆಚರಿಸಿದ್ದೇವೆ. ನಮ್ಮ ಭೂ ಗ್ರಹಕ್ಕೆ ಚೌಗು ಭೂಮಿಯ ನಿರ್ಣಾಯಕವಾಗಿದ್ದು, ಇದರ ಪ್ರಾಮುಖ್ಯತೆ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. 1971 ರಲ್ಲಿ ಇರಾನಿನ ರಾಮ್ಸರ್ ಸಮಾವೇಶಕ್ಕೆ ಸಹಿಹಾಕಿದ ನೆನಪಿಗಾಗಿ ವಿಶ್ವ ಚೌಗು ಭೂಮಿ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.


ವಿಶ್ವದಲ್ಲಿ ಅತ್ಯಂತ ಆರ್ಥಿಕವಾಗಿ ಬಲಿಷ್ಠ, ಮೌಲ್ಯಯುತ ಪರಿಸರ ವ್ಯವಸ್ಥೆಗಳು ಮತ್ತು ಜಾಗತಿಕ ಹವಾಮಾನದ ನಿಯಂತ್ರಣದಲ್ಲಿ ಈ ಚೌಗು ಪ್ರದೇಶಗಳು ಅರಣ್ಯಕ್ಕಿಂತ ಮೂರು ಪಟ್ಟು ಹೆಚ್ಚು ವೇಗವಾಗಿ ಕಣ್ಮರೆಯಾಗುತ್ತಿವೆ. ಅರಣ್ಯಗಳ ಪ್ರಾಮುಖ್ಯತೆಯ ಬಗ್ಗೆ ಬಹಳಷ್ಟು ತಿಳಿದಿದ್ದರೂ ತೇವಾಂಶ ಭೂಮಿಯ ಉಪಯುಕ್ತತೆಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನಮಗೆ ಸಾಧ್ಯವಾಗಿಲ್ಲ. ಅರಣ್ಯದಿಂದ ಅಂತರ್ಜಲ ಹೆಚ್ಚುತ್ತದೆ. ಚೌಗು ಭೂಮಿ ಪರಿಸರ ಮತ್ತು ಜೀವ ವೈವಿದ್ಯತೆಯ ತಾಣಗಳಾಗಿವೆ.


ಜಗತ್ತಿನ ಭೂ ಮೇಲ್ಮೈ ಭಾಗದಲ್ಲಿ ಶೇ, 3ರಷ್ಟು ಮಾತ್ರ ಚೌಗು ಭೂಮಿಯಿದೆ. ಹವಾಮಾನ ಬದಲಾವಣೆ, ಸುಸ್ಥಿರ ಅಭಿವೃದ್ಧಿ ಮತ್ತು ಜೀವ ವೈವಿದ್ಯತೆ ಮೇಲೆ ಜಾಗತಿಕ ಬದ್ಧತೆಗಳನ್ನು ಸಾಕಾರಗೊಳಿಸಲು ಇವು ಮುಖ್ಯ ಪಾತ್ರ ವಹಿಸುತ್ತವೆ. ಅರಣ್ಯಗಳಿಗಿಂತ ಎರಡು ಪಟ್ಟು ಹೆಚ್ಚು ಇಂಗಾಲವನ್ನು ಚೌಗು ಭೂಮಿ ಹೀರಿಕೊಳ್ಳುತ್ತವೆ. ಚೌಗು ಪ್ರದೇಶಗಳು ಕರಾವಳಿಯನ್ನು ರಕ್ಷಿಸುವ ಮೂಲಕ ಪ್ರವಾಹದಂತಹ ವಿಪತ್ತುಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಆದರೆ ಇಂದು ಅರಣ್ಯ ನಾಶದ ಜತೆಗೆ ಚೌಗು ಭೂಮಿಗಳನ್ನು ಬರಡು ಭೂಮಿ ಮಾಡುತ್ತಿರುವುದರಿಂದಲೂ ಸಹ ಅಂತರ್ಜಲ ಕುಸಿಯಲು ಕಾರಣವಾಗಿದೆ.

ಇದೀಗ ಅಂತರ್ಜಲ ಮರುಪೂರಣಮಾಡುವ, ಹರಿಯುವ ನೀರನ್ನು ತೆವಳುವಂತೆ ಮಾಡುವ, ತೆವಳುತ್ತಿರುವ ನೀರನ್ನು ಹಿಡಿದು ನಿಲ್ಲಿಸುವ ಕೆಲಸ ಆಗಬೇಕು. ನಗರ ಪ್ರದೇಶಗಳಲ್ಲಿ ಮಳೆ ನೀರು ಸಂಗ್ರಹಕ್ಕೆ ಒತ್ತು ನೀಡಬೇಕಾಗಿದೆ. ಇಲ್ಲವಾದಲ್ಲಿ ಕಾಣೆಯಾಗಿರುವ ಅಂತರ್ಜಲ ಇತಿಹಾಸ ಪುಟ ಸೇರಬೇಕಾಗುತ್ತದೆ.

ರಾಜ್ಯದಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಕೆರೆ ಕುಂಟೆ, ಜಲ ಮೂಲಗಳನ್ನು ರಕ್ಷಿಸಲು ಎಂಪ್ರಿ ಸಂಸ್ಥೆಯಿಂದ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶಾಲಾ ಹಂತದಲ್ಲಿ ಸಹಸ್ರಾರು ಇಕೋ ಕ್ಲಬ್ ಗಳನ್ನು ಸ್ಥಾಪಿಸಿ ವಿದ್ಯಾರ್ಥಿ ದಿಸೆಯಿಂದಲೇ ಜಲದ ಮಹತ್ವ, ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.

ಡಾ. ಎಚ್.ಕೆ. ವಿನಯ್ ಕುಮಾರ್
ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ,
ಸಂಶೋಧನಾ ನಿರ್ದೇಶಕರು, ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ

Join Whatsapp