ಮಂಗಳೂರು: ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ತಂಬಾಕಿನ ಆಮಿಷಕ್ಕೆ ಯುವಜನತೆ ಬಲಿಯಾಗಬಾರದು. ಅದು ಕ್ಯಾನ್ಸರ್ ನಂತಹ ರೋಗಗಳಿಗೆ ಆಹ್ವಾನ ನೀಡುತ್ತದೆ ಎಂದು ಲೇಡಿಗೋಷನ್ ಆಸ್ಪತ್ರೆಯ ಅಧೀಕ್ಷಕ ಡಾ. ದುರ್ಗಾ ಪ್ರಸಾದ್ ಅಭಿಪ್ರಾಯಪಟ್ಟರು.
ಅವರು ಮೇ.31ರ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಡಾ. ಪಿ. ದಯಾನಂದ ಪೈ-ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಗಳೂರು ವಕೀಲರ ಸಂಘ, ಇಂಡಿಯನ್ ಕ್ಯಾನ್ಸರ್ ಸೊಸೈಟಿ ಹಾಗೂ ಮಂಗಳೂರಿನ ಟೊಬ್ಯಾಕೋ ಸೆಸೆಷನ್ ಸೆಂಟರ್ (ಯೆನಪೋಯ)ನ ಸಹಯೋಗದಲ್ಲಿ ನಗರದ ಡಾ. ಪಿ. ದಯಾನಂದ ಪೈ-ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ-2023 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸ್ಟೈಲ್ ಅಥವಾ ಮೋಜಿಗಾಗಿ ಯೌವನಾವಸ್ಥೆಯಲ್ಲಿ ಮಾಡುವ ತಂಬಾಕು, ಮದ್ಯಪಾನ ಸೇವನೆ ಮುಂದಿನ ಕೆಲವೇ ವರ್ಷಗಳಲ್ಲಿ ನಮ್ಮ ದೇಹವನ್ನು ಸಂಪೂರ್ಣವಾಗಿ ಆಹುತಿ ತಗೆದುಕೊಂಡು ಅವುಗಳಿಗೆ ದಾಸರನ್ನಾಗಿ ಮಾಡಿಕೊಳ್ಳುತ್ತವೆ, ಆದ ಕಾರಣ ಆ ದುರಾಭ್ಯಾಸಗಳಿಂದ ನಮ್ಮನ್ನ ನಾವೇ ದೂರ ಮಾಡಿಕೊಳ್ಳುವುದು ಅತ್ಯುತ್ತಮ ಮಾರ್ಗ ಎಂದ ಅವರು, ಪ್ರತಿಯೊಬ್ಬರಲ್ಲಿಯೂ ದೈವತ್ವ, ತಾಮಸ ಹಾಗೂ ಮನುಷ್ಯ ಗುಣಗಳಿರುತ್ತವೆ, ಮನುಷ್ಯತ್ವದ ಗುಣದಿಂದ ನಾವು ದೈವತ್ವದ ಗುಣಗಳ ಕಡೆಗೆ ಹೋಗಬೇಕು. ಮಾನವೀಯ ಗುಣಗಳನ್ನು ಬೆಳಸಿಕೊಂಡು, ದುರ್ಗುಣಗಳಿಂದ ದೂರವಿದ್ದಲ್ಲೀ ಮಾತ್ರ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಲು ಸಾಧ್ಯ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್ ಮಾತನಾಡಿ, ತಂಬಾಕು ಮಾರುವುದು ಮತ್ತು ಖರೀದಿಸುವುದಕ್ಕೂ ಸರ್ಕಾರ ಕೆಲವೊಂದು ತಡೆಗಳನ್ನು ಹಾಕಿದ್ದಾಗ್ಯೂ, ಅದನ್ನ ಸೇವಿಸುವವರ ಸಂಖ್ಯೆ ಕಡಿಮೆಯಾಗಿಲ್ಲ, ಮದ್ಯಪಾನ, ಧೂಮಪಾನ, ತಂಬಾಕು ಬಳಿಕೆಯಿಂದ ಮಾರಣಾಂತಿಕ ಅಪಾಯಗಳಿವೆ, ಅವುಗಳನ್ನು ಆಸ್ಪತ್ರೆಗಳಿಗೆ ಭೇಟಿ ನೀಡಿ ಪ್ರತ್ಯಕ್ಷವಾಗಿ ಕಾಣಬಹುದಾಗಿದೆ, ಅದನ್ನು ಯುವ ಮನಸ್ಸುಗಳು ಅರ್ಥ ಮಾಡಿಕೊಳ್ಳಬೇಕು ಹಾಗೂ ಸಮಾಜದಲ್ಲಿ ಈ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು, ತಂಬಾಕಿನ ಚಟಗಳನ್ನು ಬಿಡದಿದ್ದರೆ ಮನುಷ್ಯ ಚಟ್ಟ ಏರಲು ಮಾತ್ರ ಸಾಧ್ಯ, ಮನುಷ್ಯ ತನ್ನ ಮನಸ್ಸು ಹಿಡಿತದಲ್ಲಿಟ್ಟರೆ ಎಲ್ಲವೂ ಸಾಧ್ಯ ಎಂದು ಹೇಳಿದರು.
ಮಂಗಳೂರು ವಕೀಲರ ಸಂಘದ ಅಧ್ಯಕ್ಷ್ಯ ಪೃಥ್ವಿರಾಜ್ ರೈ.ಕೆ. ಮಂಗಳೂರು ತಾಲೂಕು ಆರೋಗ್ಯಾಧಿಕಾರಿ ಡಾ. ಸುಜಯ್ ಭಂಡಾರಿ, ಯೆನಪೋಯ ಡೆಂಡಲ್ ಕಾಲೇಜಿನ ಒರಲ್ ಮೆಡಿಸನ್ ಹಾಗೂ ರೇಡಿಯೋಲಾಜಿ ವಿಭಾಗದ ಅಡಿಷನಲ್ ಪ್ರೋಫೆಸರ್ ಡಾ. ರಚನಾ ಪ್ರಭು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಉಳೆಪಾಡಿ ಸ್ವಾಗತಿಸಿದರು. ವಿರೂಪಾಕ್ಷ ನಿರೂಪಿಸಿದರು. ಪುಂಡಲಿಕ ಕಲ್ಕಟ್ಟಿ ವಂದಿಸಿದರು.