‘ವಿಶ್ವಕಪ್​ನಲ್ಲಿ ಪಾಕಿಸ್ತಾನ ತಂಡಕ್ಕೆ ಹೆಚ್ಚುವರಿ ಭದ್ರತೆ ಇಲ್ಲ’ ; ಭಾರತ ಸರ್ಕಾರದ ಸ್ಪಷ್ಟ ಸಂದೇಶ!

Prasthutha|

ಹೊಸದಿಲ್ಲಿ: 2023ರ ಏಕದಿನ ವಿಶ್ವಕಪ್‌ಗೆ ಭಾರತಕ್ಕೆ ಬರಲು ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಅನುಮತಿ ಸಿಕ್ಕಿದೆ. ಆದರೆ ಭಾರತಕ್ಕೆ ಪಾಕ್ ತಂಡವನ್ನು ಕಳುಹಿಸಲು ಷರತ್ತುಗಳನ್ನು ವಿಧಿಸಿದ್ದ ಪಾಕ್ ಸರ್ಕಾರಕ್ಕೆ ಸ್ಪಷ್ಟ ಸಂದೇಶವನ್ನು ಭಾರತ ಸರ್ಕಾರ ರವಾನಿಸಿದ್ದು, ವಿಶ್ವಕಪ್​ನಲ್ಲಿ ಪಾಕಿಸ್ತಾನ ತಂಡಕ್ಕೆ ಹೆಚ್ಚುವರಿ ಭದ್ರತೆ ಇಲ್ಲ ಎಂದು ಹೇಳಿದೆ.

- Advertisement -

 ವಾಸ್ತವವಾಗಿ ಪಾಕ್ ತಂಡವನ್ನು ಭಾರತಕ್ಕೆ ಕಳುಹಿಸುವ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಲು ಪಾಕ್ ಸರ್ಕಾರ ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿ ನಮ್ಮ ತಂಡವನ್ನು ಭಾರತಕ್ಕೆ ಕಳುಹಿಸಬೇಕೆಂದರೆ ನಮ್ಮ ತಂಡಕ್ಕೆ ಭಾರತದಲ್ಲಿ ಹೆಚ್ಚಿನ ಭದ್ರತೆ ನೀಡಬೇಕು. ಇದನ್ನು ಐಸಿಸಿ ಲಿಖಿತ ರೂಪದಲ್ಲಿ ನಮಗೆ ಭರವಸೆ ನೀಡಿದರೆ, ನಾವು ನಮ್ಮ ತಂಡವನ್ನು ಭಾರತಕ್ಕೆ ಕಳುಹಿಸುತ್ತೇವೆ ಎಂಬ ಷರತ್ತನ್ನು ವಿಧಿಸಿದ್ದವು. ಆದರೆ ಇದೀಗ ಈ ಷರತ್ತಿಗೆ ಸಂದೇಶ ರವಾನೆಯಾಗಿದ್ದು, ಟೂರ್ನಿಯಲ್ಲಿ ಉಳಿದ ತಂಡಗಳಂತೆಯೇ ಪಾಕಿಸ್ತಾನ ತಂಡವನ್ನು ಭಾರತದಲ್ಲಿ ನಡೆಸಿಕೊಳ್ಳಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದೆ.

ಅಕ್ಟೋಬರ್ 5 ರಿಂದ ಭಾರತದಲ್ಲಿ 13ನೇ ಏಕದಿನ ವಿಶ್ವಕಪ್ ಆರಂಭವಾಗುತ್ತಿದ್ದು, ಇದರಲ್ಲಿ ಟೀಂ ಇಂಡಿಯಾ, ಪಾಕಿಸ್ತಾನ ಸೇರಿದಂತೆ ಒಟ್ಟು 10 ತಂಡಗಳು ಭಾಗವಹಿಸುತ್ತಿವೆ. ಪಾಕಿಸ್ತಾನದ ಮೊದಲ ಪಂದ್ಯ ಅಕ್ಟೋಬರ್ 6 ರಂದು ನಡೆಯಲಿದೆ. ಆದರೆ ಕೆಲವು ದಿನಗಳ ಹಿಂದೆ, ಪಾಕಿಸ್ತಾನಿ ಮಂಡಳಿಯು ತಂಡವನ್ನು ಕಳುಹಿಸಲು ಹಿಂದೇಟು ಹಾಕುತ್ತಿತ್ತು. ಅಲ್ಲದೆ ತಂಡವನ್ನು ಭಾರತಕ್ಕೆ ಕಳುಹಿಸಲು ಅನುಮತಿಗಾಗಿ ತನ್ನ ಸರ್ಕಾರವನ್ನು ಕೇಳಿತ್ತು. ಪಾಕಿಸ್ತಾನ ಸರ್ಕಾರವು ರಚಿಸಿದ್ದ ಸಮಿತಿಯಲ್ಲಿ, ಅಂತಿಮವಾಗಿ ತಂಡವನ್ನು ಭಾರತಕ್ಕೆ ಕಳುಹಿಸುವುದಕ್ಕೆ ಅನುಮತಿ ನೀಡಲಾಗಿತ್ತು.

- Advertisement -

ಶುಕ್ರವಾರ, ಆಗಸ್ಟ್ 11 ರಂದು, ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಪತ್ರಿಕಾಗೋಷ್ಠಿಯಲ್ಲಿ ಈ ವಿಷಯದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ವಿಶ್ವಕಪ್‌ಗಾಗಿ ಭಾರತಕ್ಕೆ ಬರುವ ಇತರ ಎಲ್ಲಾ ತಂಡಗಳಂತೆ ಪಾಕಿಸ್ತಾನ ತಂಡಕ್ಕೂ ಆತಿಥ್ಯ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಹೀಗಾಗಿ ಪಾಕ್ ತಂಡ ಇತರೆ ತಂಡಗಳಂತೆ ಭಾರತದಲ್ಲಿ ವಿಶ್ವಕಪ್ ಆಡಲಿದೆ.



Join Whatsapp