ನಿಮಗೆ ಮುಸ್ಲಿಮರನ್ನು ಕಂಡರೆ ಇಷ್ಟೊಂದು ದ್ವೇಷ ಏಕೆ? : ಮೋದಿಗೆ ಶಾಹಿ ಇಮಾಮ್ ಪ್ರಶ್ನೆ

Prasthutha|

►‘ನೀವು ಮನ್‌ ಕಿ ಬಾತ್‌ ಹೇಳುತ್ತೀರಿ, ಅದೇ ರೀತಿ ಮುಸ್ಲಿಮರ ಮನ್‌ ಕಿ ಬಾತ್‌ ಅನ್ನೂ ಕೇಳಬೇಕು’

- Advertisement -

ಹೊಸದಿಲ್ಲಿ: ವಿಶ್ವದಲ್ಲಿ 57 ಮುಸ್ಲಿಂ ರಾಷ್ಟ್ರಗಳಿವೆ ಅಲ್ಲಿ ಮುಸ್ಲಿಮೇತರರೂ ಇದ್ದಾರೆ. ಅಲ್ಲಿ ಯಾರಿಗೂ ತೊಂದರೆ ಆಗುತ್ತಿಲ್ಲ. ಆದ್ರೆ ಭಾರತದಲ್ಲಿ ಹಿಂದೂ ಮುಸ್ಲಿಮರ ನಡುವಿನ ಸಂಬಂಧ ಅಪಾಯದಲ್ಲಿದೆ. ದೇಶದಲ್ಲಿ ಏಕೆ ಮುಸ್ಲಿಮರನ್ನ ಕಂಡರೆ ಇಷ್ಟೊಂದು ದ್ವೇಷ? ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಮುಸ್ಲಿಮರ ಮನದ ಮಾತನ್ನೂ ಕೇಳಿ, ಅವರ ಸಮಸ್ಯೆಗಳನ್ನ ಬಗೆಹರಿಸಬೇಕು ಎಂದು ಜಾಮಾ ಮಸೀದಿಯ ಮೌಲ್ವಿ ಶಾಹಿ ಇಮಾಮ್ ಸೈಯದ್ ಅಹ್ಮದ್ ಬುಖಾರಿ ಮನವಿ ಮಾಡಿದ್ದಾರೆ.

ಹರಿಯಾಣದ ನುಹ್‌ ಜಿಲ್ಲೆಯ ಗಲಭೆಗಳು ಹಾಗೂ ಚಲಿಸುತ್ತಿದ್ದ ರೈಲಿಯಲ್ಲಿ ಪೊಲೀಸ್‌ ಅಧಿಕಾರಿಯೊಬ್ಬರ ನಾಲ್ವರನ್ನು ಹತ್ಯೆ ಮಾಡಿದ ಪ್ರಕರಣಗಳನ್ನ ಉಲ್ಲೇಖಿಸಿ ಜಾಮಾ ಮಸೀದಿಯಲ್ಲಿ ನಡೆದ ಧರ್ಮೋಪದೇಶದಲ್ಲಿ ಮಾತನಾಡಿದ್ದಾರೆ. ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮುಸ್ಲಿಂ ಸಮುದಾಯದ ಬುದ್ಧಿಜೀವಿಗಳೊಂದಿಗೆ ಸಂವಾದ ನಡೆಸಬೇಕು ಎಂದು ಸಲಹೆ ನೀಡಿದ್ದಾರೆ.

- Advertisement -

ದೇಶದ ಪರಿಸ್ಥಿತಿ ಚಿಂತಾಜನಕವಾಗಿದೆ. ದ್ವೇಷದ ಅಲೆಗಳು ದೇಶದ ಶಾಂತಿ ಮತ್ತು ಭದ್ರತೆಗೆ ಅಪಾಯವನ್ನುಂಟುಮಾಡುತ್ತಿವೆ. ಮೋದಿ ಅವರೇ ನೀವು ಮನ್‌ ಕಿ ಬಾತ್‌ ಹೇಳುತ್ತೀರಿ, ಅದೇ ರೀತಿ ಮುಸ್ಲಿಮರ ಮನ್‌ ಕಿ ಬಾತ್‌ ಅನ್ನೂ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.

ಇತ್ತೀಚಿನ ಘಟನೆಗಳಿಂದ‌ ದೇಶದ ಮುಸ್ಲಿಮರು ತೊಂದರೆಗೀಡಾಗಿದ್ದಾರೆ. ಅವರ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ದ್ವೇಷ ಮತ್ತು ಹಿಂಸಾಚಾರ ಎದುರಿಸುವಲ್ಲಿ ಕಾನೂನು ದುರ್ಬಲವಾಗಿದೆ ಎಂದು ಸಾಬೀತುಪಡಿಸುತ್ತಿದೆ. ಒಂದು ಧರ್ಮದ ಜನರಿಗೆ ಬಹಿರಂಗವಾಗಿ ಬೆದರಿಕೆ ಹಾಕಲಾಗುತ್ತಿದೆ. ಮುಸ್ಲಿಮರಿಗೆ ಬೆದರಿಕೆ ಕರೆಗಳು ಬರುತ್ತಿವೆ. ಅವರೊಂದಿಗೆ ವ್ಯಾಪಾರ ವಹಿವಾಟು ನಡೆಸದಂತೆ ಬಹಿಷ್ಕರಿಸಲಾಗುತ್ತಿದೆ. ವಿಶ್ವದಾದ್ಯಂತ 57 ಮುಸ್ಲಿಂ ರಾಷ್ಟ್ರಗಳಿದ್ದು, ಅಲ್ಲಿ ಮುಸ್ಲಿಮೇತರರೂ ವಾಸಿಸುತ್ತಿದ್ದಾರೆ. ಆದ್ರೆ ಅವರಿಗೆ, ಅವರ ಜೀವನೋಪಾಯಕ್ಕೆ ಯಾವುದೇ ಬೆದರಿಕೆ ಒಡ್ಡುತ್ತಿಲ್ಲ ಎಂದು ಹೇಳಿದ್ದಾರೆ.

ಭಾರತದಲ್ಲಿ ಮಾತ್ರ ಹಿಂದೂ-ಮುಸ್ಲಿಮರ ನಡುವಿನ ಸಂಬಂಧ ಅಪಾಯದಲ್ಲಿದೆ. ಭಾರತದಲ್ಲಿ ಮಾತ್ರ ಏಕೆ ಮುಸ್ಲಿಮರನ್ನ ಕಂಡ್ರೆ ಇಷ್ಟೊಂದು ದ್ವೇಷ? ಸ್ವಾತಂತ್ರ್ಯಕ್ಕಾಗಿ ನಮ್ಮ ಪೂರ್ವಜರು ಸಹ ಹೋರಾಡಿದ್ದಾರೆ. ಈಗ ಯಾಕೆ ಮತ್ತೆ ಹಿಂದೂ ಮುಸ್ಲಿಮರನ್ನು ಪ್ರತ್ಯೇಕಿಸುತ್ತಿದ್ದಾರೆ? ಪರಿಸ್ಥಿತಿಯನ್ನು ನಿಯಂತ್ರಿಸುವುದು ಸರ್ಕಾರದ ಕೈಯಲ್ಲಿದೆ ಎಂದು ಅಹ್ಮದ್ ಬುಖಾರಿ ಹೇಳಿದ್ದಾರೆ.

Join Whatsapp