ಬೆಲ್’ಗ್ರೇಡ್ : ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ನ 54 ಕೆ.ಜಿ. ಪುರುಷರ ವಿಭಾಗದಲ್ಲಿ ಭಾರತದ ಯುವ ಬಾಕ್ಸರ್ ಆಕಾಶ್ ಕುಮಾರ್ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಆ ಮೂಲಕ ಚಾಂಪಿಯನ್’ಶಿಪ್’ ನಲ್ಲಿ ಭಾರತಕ್ಕೆ ಮೊದಲ ಪದಕ ಖಚಿತಪಡಿಸಿದ್ದಾರೆ. ಇದರೊಂದಿಗೆ ವಿಶ್ವ ಚಾಂಪಿಯನ್ಶಿಪ್ ’ನಲ್ಲಿ ಪದಕ ಗೆದ್ದ ಏಳನೇ ಭಾರತೀಯ ಪುರುಷ ಬಾಕ್ಸರ್ ಎಂಬ ಕೀರ್ತಿಯನ್ನು ಆಕಾಶ್ ತನ್ನದಾಗಿಸಿಕೊಂಡಿದ್ದಾರೆ.
ಬೆಲ್’ಗ್ರೇಡ್ ’ನಲ್ಲಿ ನಡೆಯುತ್ತಿರುವ WBC ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭರ್ಜರಿ ಪಂಚ್’ಗಳ ಮೂಲಕ ಮಿಂಚಿದ ಸೇನಾ ಬಾಕ್ಸರ್ ಆಕಾಶ್, ಮಂಗಳವಾರ ಮಾಜಿ ಒಲಿಂಪಿಕ್ ಬೆಳ್ಳಿ ಪದಕ ವಿಜೇತ ವೆನೆಜುವೆಲಾದ ಯೊಯೆಲ್ ಫಿನೊಲ್ ರಿವಾಸ್ ವಿರುದ್ಧ 5-0 ಅಂತರದಲ್ಲಿ ಗೆಲ್ಲುವ ಮೂಲಕ ಸೆಮಿ ಪ್ರವೇಶಿಸಿದ್ದು, ಅಂತಿಮ ನಾಲ್ಕರ ಘಟ್ಟದಲ್ಲಿ ಕಜಕಸ್ತಾನದ 19 ವರ್ಷದ ಮಖ್ಮೂದ್ ಸಬೀರ್ಖಾನ್ ಸವಾಲನ್ನು ಎದುರಿಸಬೇಕಾಗಿದೆ. ಕಜಕಸ್ತಾನದ ಬಾಕ್ಸರ್ ಯುವ ವಿಭಾಗದಲ್ಲಿ ಮೂರು ಬಾರಿ ಏಷ್ಯನ್ ಚಿನ್ನದ ಪದಕ ವಿಜೇತರಾಗಿದ್ದಾರೆ
ಹಾಲಿ ರಾಷ್ಟ್ರೀಯ ಚಾಂಪಿಯನ್ ಆಗಿರುವ ಆಕಾಶ್ ಕುಮಾರ್, ಇದೇ ಮೊದಲ ಬಾರಿಗೆ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ಆಕಾಶ್, ನಾನು ಈ ಪದಕವನ್ನು ನನ್ನ ದಿವಂಗತ ತಾಯಿ, ತಂದೆ ಮತ್ತು ನನ್ನ ತರಬೇತುದಾರರಿಗೆ ಅರ್ಪಿಸುತ್ತೇನೆ. ನಾನು ಮೊದಲ ಬಾರಿಗೆ ಇಂತಹ ದೊಡ್ಡ ಪಂದ್ಯಾವಳಿಯಲ್ಲಿ ಆಡುತ್ತಿದ್ದೇನೆ. ಉತ್ತಮ ಪ್ರದರ್ಶನ ನೀಡಿದ್ದೇನೆ ಎಂಬುದರ ಬಗ್ಗೆ ನನಗೆ ಹೆಮ್ಮೆ ಇದೆ’ ಎಂದಿದ್ದಾರೆ. ಶ್ವಾಸಕೋಶದ ಸೋಂಕಿನಿಂದ ಕಳೆದ ಸೆಪ್ಟಂಬರ್’ನಲ್ಲಿ ಆಕಾಶ್ ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು. ತಾಯಿಯ ಅಗಲಿಕೆಯ ನೋವಿನ ನಡುವೆಯೂ ರಿಂಗ್ ಪ್ರವೇಶಿಸಿದ್ದ ಆಕಾಶ್ ದೇಶವೇ ಹೆಮ್ಮೆಪಡುವಂತಹ ಸಾಧನೆ ಮಾಡಿದ್ದಾರೆ.
ಇನ್ನು ಪುರುಷರ 63.5 ಕೆ.ಜಿ. ವಿಭಾಗದಲ್ಲಿ ಐದು ಬಾರಿ ಏಷ್ಯನ್ ಚಾಂಪಿಯನ್ ಆಗಿರುವ ಭಾರತದ ಶಿವ ಥಾಪ ಕ್ವಾರ್ಟರ್ ಫೈನಲ್ ತಲುಪಿದ್ದು, ಟರ್ಕಿಯ ಕೆರೆಮ್ ಓಜ್ಮೆನ್’ಗೆ ಪಂಚ್ ನೀಡಲು ತಯಾರಿ ನಡೆಸಿದ್ದಾರೆ. ಈ ಪಂದ್ಯವನ್ನು ಗೆದ್ದರೆ ವಿಶ್ವ ಚಾಂಪಿಯನ್ಶಿಪ್ನಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಪುರುಷ ಬಾಕ್ಸರ್ ಎಂಬ ದಾಖಲೆಯನ್ನು ಶಿವ ಥಾಪ ತಮ್ಮದಾಗಿಸಿಕೊಳ್ಳಲಿದ್ದಾರೆ.
+92 ಕೆಜಿ ವಿಭಾಗದಲ್ಲಿ ಭಾರತದ ನರೇಂದರ್ ಬರ್ವಾಲ್, ಅಜರ್ಬೈಜಾನ್ನ ಮಹಮ್ಮದ್ ಅಬ್ದುಲ್ಲಾಯೆವ್ ವಿರುದ್ಧ, 71 ಕೆಜಿ ವಿಭಾಗದಲ್ಲಿ ನಿಶಾಂತ್ ದೇವ್ ರಷ್ಯಾದ ವಾಡಿಮ್ ಮುಸೇವ್ ವಿರುದ್ಧ ಸೆಣಸಲಿದ್ದಾರೆ. ಕಳೆದ ಆವೃತ್ತಿಯಲ್ಲಿ ಕ್ವಾರ್ಟರ್ಫೈನಲ್ ತಲುಪಿದ್ದ ಹಾಲಿ ಏಷ್ಯನ್ ಚಾಂಪಿಯನ್ ಸಂಜೀತ್ 92 ಕೆಜಿ ವಿಭಾಗದಲ್ಲಿ ಇಟಲಿಯ ಅಜೀಜ್ ಅಬ್ಬೆಸ್ ಎದುರಿಸಲಿದ್ದಾರೆ.