September 19, 2020

ಆನ್‌ಲೈನ್ ಶಿಕ್ಷಣ : ಸ್ಮಾರ್ಟ್‌ಫೋನ್ ಖರೀದಿಸಲು ಸಾಧ್ಯವಾಗದ ಬಡಮಕ್ಕಳಿಗೆ ವರ್ಕ್‌ಬುಕ್ ರಚಿಸಿದ ಶಿಕ್ಷಕ

► ಜಾವೇದ್ ಖಾಝಿಯವರ ಸಾಧನೆಗೊಂದು ಸಲಾಂ

 ಮಹಾರಾಷ್ಟ್ರ: ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ದೇಶಾದ್ಯಂತ ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಟ್ಟಿರುವ ಈ ಸಂದರ್ಭದಲ್ಲಿ ಆನ್‌ಲೈನ್ ಶಿಕ್ಷಣ ಇದೀಗ ವಾಸ್ತವವಾಗಿದೆ. ಅಮೂಲ್ಯವಾದ ಸಮಯವನ್ನು ಕಳೆದುಕೊಂಡಿರುವ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣ ವರದಾನವಾಗಿ ಬಂದಿದೆ. ಆನ್‌ಲೈನ್ ಶಿಕ್ಷಣಕ್ಕೆ ಹೊಂದಿಕೊಂಡಿರುವ ಶಿಕ್ಷಕರು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವೀಡಿಯೋಗಳನ್ನು ರಚಿಸುವುದು, ಗೂಗಲ್ ಮೀಟ್ ಮೂಲಕ ಆನ್‌ಲೈನ್ ತರಗತಿಗಳನ್ನು ನಡೆಸುವುದು, ವಾಟ್ಸಾಪ್ ಗ್ರೂಪ್‌ಗಳ ಮೂಲಕ ಚಟುವಟಿಕೆಗಳನ್ನು ನೀಡುತ್ತಿದ್ದಾರೆ.

 ಸ್ಮಾರ್ಟ್‌ಫೋನ್‌ಗಳು, ಇಂಟರ್‌ನೆಟ್ ಲಭ್ಯತೆ, ಲ್ಯಾಪ್‌ಟಾಪ್ ಮತ್ತು ಇತರ ಇಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಹೊಂದಿರುವ ವಿದ್ಯಾರ್ಥಿಗಳು ಆನ್‌ಲೈನ್ ಶಿಕ್ಷಣದಿಂದ ಪ್ರಯೋಜನಗಳನ್ನು ಪಡೆಯುತ್ತಿದ್ದರೆ, ಭಾರತದ ಗ್ರಾಮೀಣ ಪ್ರದೇಶಗಳಿಗೆ ಸೇರಿದ ಇತರ ವಿದ್ಯಾರ್ಥಿಗಳು ವಿಶೇಷವಾಗಿ ಹಿಂದುಳಿದವರು ಸ್ಮಾರ್ಟ್‌ಫೋನ್‌ಗಳ ಮೂಲಕ ಶಿಕ್ಷಣವನ್ನು ಪಡೆಯಲು ಪರದಾಡುತ್ತಿದ್ದಾರೆ.

 ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಲ್ಲಿ, ಸುಮಾರು ಶೇ.60ರಷ್ಟು ವಿದ್ಯಾರ್ಥಿಗಳು ಸೌಲಭ್ಯವಂಚಿತರಾಗಿದ್ದು, ಸ್ಮಾರ್ಟ್‌ಫೋನ್ ಮತ್ತು ಇಂಟರ್‌ನೆಟ್ ವ್ಯವಸ್ಥೆಯನ್ನು ಹೊಂದಿಲ್ಲ.  ಈ ಬಿಕ್ಕಟ್ಟಿಗೆ ಸ್ಪಂದಿಸಿರುವ ಸೋಲಾಪುರದ ಜಿಲ್ಲಾ ಪರಿಷತ್ ಉರ್ದು ಪ್ರಾಥಮಿಕ ಶಾಲೆ ಶಿಕ್ಷಕ ಜಾವೇದ್ ಖಾಝಿಯವರು 1ನೇ ತರಗತಿಯಿಂದ 5ನೇ ತರಗತಿಯವರೆಗಿನ ಸೌಲಭ್ಯವಂಚಿತ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಒದಗಿಸಲು ಚಿತ್ರಕಲೆ, ಗಣಿತ ಮತ್ತು ಇತರ ಭಾಷೆಗಳು ಸೇರಿದಂತೆ ಎಲ್ಲಾ ವಿಷಯಗಳನ್ನು ಹೊಂದಿರುವ ವರ್ಕ್‌ಬುಕ್‌ಅನ್ನು ರಚಿಸಿದ್ದಾರೆ. ಸಂಬಂಧಪಟ್ಟ ಶಿಕ್ಷಕರು ಮತ್ತು ಹಿರಿಯರ ದೂರವಾಣಿ ಮಾರ್ಗದರ್ಶನದ ಮೂಲಕ ಮನೆಯಲ್ಲಿ ಮಕ್ಕಳಿಗೆ ಕಲಿಯಲು, ಓದಲು, ಬರೆಯಲು ಮತ್ತು ಸಮೀಕರಣಗಳನ್ನು ಪರಿಹರಿಸಲು ಈ ವರ್ಕ್‌ಬುಕ್ ಸಹಾಯ ಮಾಡುತ್ತದೆ.

 TwoCircles.netನೊಂದಿಗೆ ಮಾತನಾಡುತ್ತಾ, ಜಾವೇದ್‌ರವರು ತಮ್ಮ ಮಾತೃಭಾಷೆ ಉರ್ದು ಮತ್ತು ಅದರ ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸುವ ಉದ್ದೇಶದಿಂದ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ‘‘ನಾನು ಇದರಿಂದ ಹಣ ಸಂಪಾದಿಸುವ ಉದ್ದೇಶವನ್ನು ಹೊಂದಿಲ್ಲ’’ ಎಂದು ಅವರು ಹೇಳಿದ್ದಾರೆ.   ಈ ವರ್ಕ್‌ಬುಕ್ ದುಬಾರಿಯಲ್ಲ. ಜಾವೇದ್‌ರವರ ಪ್ರಕಾರ, ಸಂಬಂಧಪಟ್ಟ ತರಗತಿ ಶಿಕ್ಷಕರಿಂದ ಪಾವತಿಸಲಾಗುತ್ತದೆ. ‘‘ನಮ್ಮ ಬಡ ವಿದ್ಯಾರ್ಥಿಗಳ ಮೇಲೆ ಆರ್ಥಿಕ ಹೊರೆ ಹಾಕಲು ನಾವು ಬಯಸುವುದಿಲ್ಲ’’ ಎಂದು ಅವರು ಹೇಳಿದ್ದಾರೆ.

 ಈ ವರ್ಕ್‌ಬುಕ್ ಯಶಸ್ವಿಯಾಗಿದ್ದು, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದ ಹೆಚ್ಚಿನ ಪ್ರತಿಕ್ರಿಯೆ ಬಂದಿದೆ ಎಂದು ಅವರು ಹೇಳಿದ್ದಾರೆ. ‘‘ಖಾಸಗಿ ಶಾಲೆಗಳು ಮತ್ತು ಮಹಾರಾಷ್ಟ್ರದ ಇತರ ನಗರಗಳಿಂದಲೂ ನನಗೆ ಕರೆಗಳು ಬಂದಿವೆ’’ ಎಂದು ಹೇಳಿದ್ದಾರೆ.  ಪಠ್ಯಪುಸ್ತಕ ಆಧಾರಿತ ಈ ವರ್ಕ್‌ಬುಕ್‌ನ ಮೂರು ಸಾವಿರ ಪ್ರತಿಗಳು ಬಹುತೇಕ ಮುಗಿದಿದ್ದು, ಜಿಲ್ಲೆಯ 65 ಜಿಲ್ಲಾ ಪರಿಷತ್, 22 ನಿಗಮ ಮತ್ತು 12 ನಗರ ಪರಿಷತ್ ಶಾಲಾ ವಿದ್ಯಾರ್ಥಿಗಳ ಎಲ್ಲಾ ಐದು ಸಾವಿರ ವಿದ್ಯಾರ್ಥಿಗಳ ಬೇಡಿಕೆಯನ್ನು ಪೂರೈಸಲು ಇನ್ನೂ ಮೂರು ಸಾವಿರ ಪ್ರತಿಗಳನ್ನು ಪ್ರಕಟಿಸಲು ಯೋಜಿಸುತ್ತಿದ್ದೇವೆ ಎಂದು ಜಾವೇದ್ ಹೇಳಿದ್ದಾರೆ.

 ಈ ವರ್ಕ್‌ಬುಕ್ ಕಲಿಕೆಯ ಚಟುವಟಿಕೆಯನ್ನು ಸುಲಭಗೊಳಿಸಿದೆ ಎಂದು ಜಿಲ್ಲಾ ಪರಿಷತ್ ಪ್ರಾಥಮಿಕ ಶಾಲಾ ಶಿಕ್ಷಕಿ ಮೊಹ್ಸಿನಾ ಬಂಗಿ ಹೇಳಿದ್ದಾರೆ. ನಾವು ಕರೆಗಳನ್ನು ಮಾಡುವ ಮೂಲಕ ಮೇಲ್ವಿಚಾರಣೆ ಮಾಡುತ್ತಿದ್ದು, ವಿದ್ಯಾರ್ಥಿಗಳು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅವರು ಪಠ್ಯಪುಸ್ತಕವನ್ನು ಓದುತ್ತಿದ್ದಾರೆ ಮತ್ತು ಉತ್ತರಗಳನ್ನು ಬರೆಯುತ್ತಿದ್ದಾರೆ ಹಾಗೂ ಇತರ ವಿಷಯಗಳ ಸಮಸ್ಯೆಗಳನ್ನು ಪರಿಹರಿಸುತ್ತಿದ್ದಾರೆ’’ ಎಂದು ಅವರು ಹೇಳಿದ್ದಾರೆ.

 ನಾಲ್ಕನೇ ತರಗತಿ ವಿದ್ಯಾರ್ಥಿನಿಯ ತಾಯಿ ಆಯಿಷಾ ವಾಸಿಮ್ ಬಾಗ್ವಾನ್ ಈ ವರ್ಕ್‌ಬುಕ್‌ನ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ‘‘ಇದು ನನ್ನ ಮಗಳ ಕಲಿಕೆಯ ಪ್ರಕ್ರಿಯೆಗೆ ವೇಗವನ್ನು ನೀಡಿದೆ. ಈಗ ಅವಳು ಅಧ್ಯಯನ ಮಾಡಲು ಸಮಯವನ್ನು ನೀಡುತ್ತಿದ್ದಾಳೆ, ಗಣಿತದ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದಾಳೆ ಮತ್ತು ನನ್ನ ಸಹಾಯವನ್ನು ಪಡೆಯುವ ಮೂಲಕ ಉತ್ತರಗಳನ್ನು ಬರೆಯುತ್ತಿದ್ದಾಳೆ’’ ಎಂದು ಆಯಿಷಾ ಹೇಳಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!