ರಾಹುಲ್‌ ಗಾಂಧಿ ಪ್ರಧಾನಿ ಮಾಡಲು ಶ್ರಮಿಸಿ: ಯುವ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಡಿಕೆಶಿ ಮನವಿ

Prasthutha|

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 20 ಸ್ಥಾನ ಗೆಲ್ಲುವ ಮೂಲಕ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರನ್ನು ಪ್ರಧಾನಿ ಮಾಡಲು ಶ್ರಮಿಸಿ ಎಂದು ಯುವ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮನವಿ ಮಾಡಿದರು.

- Advertisement -

ಗುರುವಾರ ಯುವ ಕಾಂಗ್ರೆಸ್‌ನ ವಿಸ್ತೃತ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, 2024ರ ಚುನಾವಣೆ ನಿಮ್ಮ ಗುರಿಯಾಗಿರಬೇಕು. ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಿ, ಮುಂಬರುವ ಸಂಸತ್‌ ಚುನಾವಣೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದಲ್ಲಿ ಕಾಂಗ್ರೆಸ್‌ ಗೆಲುವಿಗೆ ಶ್ರಮಿಸುವಂತೆ ಕರೆ ನೀಡಿದರು.

ಈಗಾಗಲೇ ಕಾಂಗ್ರೆಸ್‌ ಸರ್ಕಾರ 59 ಸಾವಿರ ಕೋಟಿ ರೂ.ಅನುದಾನವನ್ನು ಗ್ಯಾರಂಟಿ ಯೋಜನೆಗಾಗಿ ಮೀಸಲಿಟ್ಟಿದೆ. ಈ ಅನುದಾನಕ್ಕೆ ಹೇಗೆ ಸಂಪನ್ಮೂಲ ಸಂಗ್ರಹಿಸಬೇಕೆಂಬುದರ ಬಗ್ಗೆ ನಮ್ಮ ಬಳಿ ಯೋಜನೆ ಇವೆ. ಆದರೆ ಯುವ ಕಾಂಗ್ರೆಸ್‌ ಕಾರ್ಯಕರ್ತರು ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪುವತ್ತ ಹೆಚ್ಚು ಗಮನಹರಿಸಬೇಕು ಎಂದು ಸೂಚನೆ ನೀಡಿದರು.

- Advertisement -

ಜನರಿಂದ ಹಣ ಪಡೆಯುವಂತಿಲ್ಲ:

 ಸದ್ಯದಲ್ಲೇ ಗೃಹಲಕ್ಷ್ಮಿ ಯೋಜನೆ ಜಾರಿಗೆ ಅರ್ಜಿ ಆಹ್ವಾನ ನೀಡಲಾಗುತ್ತಿದೆ. ಪ್ರತಿ ಬೂತ್‌ನಲ್ಲಿ ಓರ್ವ ಯುವತಿ ಹಾಗೂ ಯುವಕ ಪ್ರಜಾಪ್ರತಿನಿಧಿಗಳನ್ನು ನೋಂದಣಿದಾರರನ್ನಾಗಿ ನೇಮಿಸುತ್ತೇವೆ. ಅವರು ಮನೆ ಮನೆಗೆ ಹೋಗಿ ಫಲಾನುಭವಿಗಳ ಹೆಸರುಗಳನ್ನು ನೋಂದಣಿ ಮಾಡಬೇಕು. ಆಗ ನೀವು ಮತದಾರರ ಜತೆ ಸಂಪರ್ಕ ಮಾಡಿ ಅವರಿಗೆ ನೆರವಾಗಲು ಅವಕಾಶ ಕಲ್ಪಿಸಲಿದೆ. ಈ ನೋಂದಣಿ ಸಮಯದಲ್ಲಿ ಯಾರೂ ಕೂಡ ಜನರಿಂದ ಹಣ ಪಡೆಯುವಂತಿಲ್ಲ ಎಂದು ತಾಕೀತು ಮಾಡಿದರು.

ಈ ವೇಳೆ ಶಾಸಕ ರಾಜೇಗೌಡ, ರಾಷ್ಟ್ರೀಯ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಬಂಟಿ ಶೇಲ್ಕರ್‌, ಕಾರ್ಯದರ್ಶಿ ಸಾಗರಿಕಾ, ಯುವ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷ ಮೊಹಮದ್‌ ನಲಪಾಡ್‌, ಉಪಾಧ್ಯಕ್ಷ ಮಂಜುನಾಥ್‌ ಗೌಡ, ವಿಶ್ವನಾಥ್‌, ಭವ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ನಲಪಾಡ್‌ಗೆ ಡಿಕೆಶಿ ಸಖತ್‌ ಕ್ಲಾಸ್‌

ಸಭೆಯಲ್ಲಿ ಯುವ ಕಾಂಗ್ರೆಸ್‌ ಅಧ್ಯಕ್ಷ ನಲಪಾಡ್‌ಗೆ ಕ್ಲಾಸ್‌ ತೆಗೆದುಕೊಂಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಪ್ರಚಾರಕ್ಕೆ ಒಂದು ಚೌಕಟ್ಟು ಇರಬೇಕು. ಅತಿಯಾದ ಪ್ರಚಾರ ಮಾಡಬಾರದು. ನಮಗೆ ಶಕ್ತಿ ಇದೆ ಎಂದು ಎಲ್ಲಾ ಕಡೆ ವಾಲ್‌ ಪೋಸ್ಟರ್‌ ಹಾಗೂ ಬ್ಯಾನರ್‌ಗಳನ್ನು ಹಾಕುವುದಲ್ಲ. ಅವುಗಳಿಂದ ನಮಗೆ ಮತ ಬರುವುದಿಲ್ಲ. ನಮ್ಮ ಉಪಸ್ಥಿತಿಯನ್ನು ಸಾಬೀತುಪಡಿಸಬೇಕು ಎಂದು ಹೇಳಿದರು. ಈ ತಿಂಗಳ 26, 27, 28 ರಂದು ರಾಜ್ಯದಲ್ಲಿ ರಾಷ್ಟ್ರೀಯ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ಮೂಲಕ ರಾಜ್ಯದಿಂದ ದೇಶಕ್ಕೆ ಸಂದೇಶ ರವಾನೆಯಾಗಬೇಕು. ನೀವು ಆ ಕಾರ್ಯಕ್ರಮದ ಆತಿಥ್ಯ ವಹಿಸಬೇಕು. ನಿಮಗೆ ನೀಡುವ ಎಲ್ಲಾ ಹಂತದ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದು ತಿಳಿಸಿದರು.