ಹೊಸದಿಲ್ಲಿ: ಮಹಿಳಾ ಮೀಸಲಾತಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಸೋಮವಾರ ಅನುಮೋದನೆ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾರತದ ಹೊಸ ಸಂಸತ್ನಲ್ಲಿ ನಡೆದ ಕಲಾಪದ ಮೊದಲ ದಿನವಾದ ಇಂದು (ಮಂಗಳವಾರ) ಮಹಿಳಾ ಮೀಸಲಾತಿ ಮಸೂದೆ ಮಂಡಿಸಲಾಗಿದೆ. ಇದನ್ನು ನಾರಿ ಶಕ್ತಿ ವಂದನ್ ಅಧಿನಿಯಮ್ ಎಂದು ಕರೆಯಲಾಗುವುದು. ಹೊಸ ಸಂಸತ್ ಭವನದಲ್ಲಿ ಮಾಡಿದ ತಮ್ಮ ಮೊದಲ ಭಾಷಣದಲ್ಲಿ ಪ್ರಧಾನಿ ಮೋದಿ ಮಹಿಳಾ ಮೀಸಲಾತಿ ಮಸೂದೆಯನ್ನು ಘೋಷಿಸಿದರು. ಕಳೆದ 27 ವರ್ಷಗಳಲ್ಲಿ ಹಲವಾರು ಬಾರಿ ಮಸೂದೆಯನ್ನು ಮಂಡಿಸಲಾಗಿದೆ ಆದರೆ ಪದೇ ಪದೇ ಅದಕ್ಕೆ ತಡೆಯೊಡ್ಡಲಾಗಿತ್ತು.
ನಾರಿಶಕ್ತಿ ವಂದನ್ ಅಧಿನಿಯಂ ಅನ್ನು ಪರಿಚಯಿಸುವ ಸಂದರ್ಭದಲ್ಲಿ ಪ್ರಧಾನಿ ಎಲ್ಲಾ ಸಂಸದರಲ್ಲಿ ಒಮ್ಮತವನ್ನು ಕೇಳಿದರು. ಹಿಂದಿನ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಅವರಿಗೆ ಮೀಸಲಾತಿ ಮಸೂದೆಯನ್ನು ಅಂಗೀಕರಿಸಲು ಸಾಧ್ಯವಾಗಲಿಲ್ಲ. ‘ನಾರಿ ಶಕ್ತಿ ವಂದನ್ ಅಧಿನಿಯಮ್’ ಹೆಚ್ಚಿನ ಮಹಿಳೆಯರು ಸಂಸತ್, ವಿಧಾನಸಭೆಗಳ ಸದಸ್ಯರಾಗುವುದನ್ನು ಖಚಿತಪಡಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ
ದೇಶದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಹೆಚ್ಚು ಹೆಚ್ಚು ಮಹಿಳೆಯರು ಸೇರಬೇಕೆಂದು ನಾವು ಬಯಸುತ್ತೇವೆ. ದೇಶದಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿ ಪ್ರಕ್ರಿಯೆಯನ್ನು ಜಗತ್ತು ಗುರುತಿಸಿದೆ. ಇದು ಕ್ರೀಡೆಯಿಂದ ಸ್ಟಾರ್ಟ್ಅಪ್ಗಳವರೆಗೆ ಜೀವನದ ವಿವಿಧ ಆಯಾಮಗಳಲ್ಲಿ ಭಾರತೀಯ ಮಹಿಳೆಯರು ನೀಡಿದ ಕೊಡುಗೆಗಳಿಗೆ ಸಾಕ್ಷಿಯಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.