►ಓರ್ವ ಮಹಿಳೆಯ ಆರೋಗ್ಯ ಸ್ಥಿತಿ ಗಂಭೀರ !
ಶಾಮ್ಲಿ : ಅತ್ಯಾಚಾರಗಳಿಗೆ ಕುಖ್ಯಾತಿ ಪಡೆದಿರುವ ಆದಿತ್ಯನಾಥ್ ಆಳುತ್ತಿರುವ ಉತ್ತರ ಪ್ರದೇಶದಲ್ಲಿ ವೈದ್ಯಕೀಯ ಆಚಾತುರ್ಯಗಳು ನಡೆಯುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ. ಅದರ ಮುಂದುವರಿದ ಭಾಗವಾಗಿ ಇದೀಗ ಕೋವಿಡ್ ಲಸಿಕೆಗೆಂದು ಹೋದ ಮೂವರು ವೃದ್ಧ ಮಹಿಳೆಯರಿಗೆ ರೇಬಿಸ್ ಚುಚ್ಚುಮದ್ದು ನೀಡಿರುವ ಆಘಾತಕಾರಿ ಘಟನೆ ನಡೆದಿದೆ. ಲಸಿಕೆ ಪಡೆದ ಓರ್ವ ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಶಾಮ್ಲಿ ಜಿಲ್ಲೆಯಲ್ಲಿನ ಕಂಧಲಾ ಸಮುದಾಯ ಕೇಂದ್ರದಲ್ಲಿ ಈ ಘಟನೆ ನಡೆದಿದೆ.
ಸರೋಜ್ (70), ಅನಾರ್ಕಲಿ (72) ಮತ್ತು ಸತ್ಯವತಿ (60) ಎಂಬ ಮೂವರು ಅನಕ್ಷರಸ್ಥ ಮಹಿಳೆಯರು ಕೋವಿಡ್ ಲಸಿಕೆಗೆಂದು ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಸಿಬ್ಬಂದಿಗಳು ಅವರಲ್ಲಿ ಹೊರಗಿನಿಂದ 10 ರೂಪಾಯಿಗಳ ಸಿರಿಂಜ್ ತೆಗೆದುಕೊಂಡು ಬರುವಂತೆ ಹೇಳಿದ್ದರು. ನಂತರ ಅವರಿಗೆ ಕೇಂದ್ರದಲ್ಲಿ ರೇಬಿಸ್ ಚುಚ್ಚುಮದ್ದು ನೀಡಿ ಮನೆಗೆ ಕಳುಹಿಸಲಾಗಿತ್ತು. ಮನೆಗೆ ಬಂದ ಬಳಿಕ ಮೂವರಲ್ಲಿ ಒರ್ವ ಮಹಿಳೆಯ ಆರೋಗ್ಯ ತೀರ ಹದೆಗೆಡಲಾರಂಭಿಸಿತ್ತು.
ಕುಟುಂಬಿಕರು ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿದಾಗ ಅಲ್ಲಿನ ವೈದ್ಯರು ಅವರಿಗೆ ಆರೋಗ್ಯ ಕೇಂದ್ರದಲ್ಲಿ ನೀಡಿದ್ದ ವೈದ್ಯಕೀಯ ಚೀಟಿ ನೋಡಿ ಗಾಬರಿಗೊಂಡರು. ಪರಿಶೀಲಿಸಿದಾಗ ಅವರಿಗೆ ಅಲ್ಲಿ ರೇಬಿಸ್ ಚುಚ್ಚುಮದ್ದು ನೀಡಿರುವುದು ಬೆಳಕಿಗೆ ಬಂದಿದೆ. ಆಕ್ರೋಶಗೊಂಡ ಕುಟುಂಬಿಕರು ಆರೋಗ್ಯ ಕೇಂದ್ರದ ಸಿಬ್ಬಂದಿಗಳನ್ನು ವಜಾಗೊಳಿಸುವಂತೆ ಮುಖ್ಯ ವೈದ್ಯಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.