ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನಕ್ಕೆ ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯ ಕೋರಿದ್ದಾರೆ.
ಮಹಿಳಾ ದಿನದ ಈ ಸಂದರ್ಭದಲ್ಲಿ ಸಿಲಿಂಡರ್ ಬೆಲೆಯನ್ನು ₹100 ಕಡಿಮೆ ಮಾಡುವ ನಿರ್ಧಾರ ಮಾಡಲಾಗಿದೆ. ಇದರಿಂದ ಕೋಟ್ಯಂತರ ಕುಟುಂಬಗಳಿಗೆ ಅನುಕೂಲವಾಗಲಿದ್ದು ನಾರಿಯರ ಶಕ್ತಿಗೆ ಬಲ ತುಂಬಲಿದೆ ಎಂದು ಹೇಳುವ ಮೂಲಕ ಮಹಿಳೆಯರಿಗೆ ಶುಭಾಶಯ ಕೋರುವುದರ ಜೊತೆಗೆ ಪ್ರಧಾನಿ ಮೋದಿ ಭರ್ಜರಿ ಗಿಫ್ಟ್ ನೀಡಿದ್ದಾರೆ.
ಸಮಾಜದ ಅಭಿವೃದ್ಧಿಯನ್ನು ಮಹಿಳೆಯರು ಸಾಧಿಸಿದ ಪ್ರಗತಿಯಿಂದ ಮಾಪನ ಮಾಡಲಾಗುತ್ತದೆ. ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸುವ ಹಾಗೂ ಅವಳ ಅಗತ್ಯ ಒತ್ತಿ ಹೇಳಲು ಮಹಿಳಾ ದಿನ ಒಂದು ಪ್ರಮುಖ ಸಂದರ್ಭವಾಗಿದೆ. ಇಂದಿಗೂ ಮಹಿಳೆಯರು ಹಲವು ಸಮಸ್ಯೆಗಳ ಸುಳಿಯಲ್ಲಿದ್ದಾರೆ. ಕಷ್ಟಗಳಿಂದ ಅವರನ್ನು ಹೊರತರಬೇಕು ಎಂದು ರಾಷ್ಟ್ರಪತಿ ಮುರ್ಮು ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಲಿಂಗ ಸಮಾನತೆ ಪ್ರಗತಿಪರ ಸಮಾಜದ ವಿಶಿಷ್ಟ ಲಕ್ಷಣವಾಗಿದೆ. ಗಂಡು–ಹೆಣ್ಣಿನ ತಾರತಮ್ಯ ಸರಪಳಿಗಳನ್ನು ಮುರಿದು, ಲಿಂಗ ಸಮಾನತೆ ಅನುಸರಿಸಬೇಕು. ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆಯರು ಸಮಾನ ಪಾಲುದಾರರಾಗಿದ್ದು ಅವರನ್ನು ಉತ್ತೇಜಿಸುವ ಎಲ್ಲಾ ಕೆಲಸಗಳನ್ನು ಮಾಡಬೇಕಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಹಿಳಾ ದಿನಾಚರಣೆಯ ಶುಭಾಶಯ ಕೋರಿದ್ದಾರೆ.
ಸ್ವಾವಲಂಬಿ ಬದುಕಿನ ಕನಸು ಕಟ್ಟಿಕೊಂಡಿರುವ ನಾಡಿನ ಕೋಟ್ಯಂತರ ಸ್ವಾಭಿಮಾನಿ ಮಹಿಳೆಯರ ಜೊತೆ ನಾವಿದ್ದೇವೆ. ನಮ್ಮ ಶಕ್ತಿ, ಗೃಹಲಕ್ಷ್ಮಿ, ಕೂಸಿನಮನೆ, ಯುವನಿಧಿ, ಗೃಹಜ್ಯೋತಿ ಯೋಜನೆಗಳು ಮಹಿಳೆಯರಲ್ಲಿ ಆರ್ಥಿಕ, ಸಾಮಾಜಿಕ ಬಲತುಂಬಿ ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ನವಯುಗಕ್ಕೆ ನಾಂದಿ ಹಾಡಿವೆ. ಕರ್ನಾಟಕದಲ್ಲೀಗ ಅನುದಿನವೂ ಮಹಿಳಾ ದಿನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಭಾಶಯ ಕೋರಿದ್ದಾರೆ.