ಬೆಂಗಳೂರು: ಉಚಿತವಾಗಿ ಊಟ ನೀಡಲು ನಿರಾಕರಿಸಿದ ಫಾಸ್ಟ್’ಫುಡ್ ಸೆಂಟರ್’ನ ಮಹಿಳಾ ಸಿಬ್ಬಂದಿಗೆ ಕೊಲೆ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಕುಖ್ಯಾತ ರೌಡಿಯನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಹೊಟೇಲ್ ಮಾಲೀಕರು ನೀಡಿದ ದೂರಿನ ಮೇರೆಗೆ ಜಕ್ಕೂರಿನ ಅಮೃತಹಳ್ಳಿ ಪೊಲೀಸ್ ಠಾಣೆ ರೌಡಿಶೀಟರ್ ಮಂಜುನಾಥ್ ಅಲಿಯಾಸ್ ವಾಲೇ ಮಂಜನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅಮೃತಹಳ್ಳಿಯ ಜಕ್ಕೂರು ಗ್ರಾಮದ ಸರ್ಕಲ್ ಬಳಿ ವಿಕಾಸ್ ಕುಮಾರ್ ಎಂಬುವರು ನಾರ್ತ್ ಇಂಡಿಯನ್ ಫಾಸ್ಟ್ ಪುಡ್ ಸೆಂಟರ್ ನಡೆಸುತ್ತಿದ್ದು, ಕಳೆದ ಜ. 8ರಂದು ರೌಡಿ ಮಂಜುನಾಥ್ ಎಂಬಾತ ಕುಡಿದ ನಶೆಯಲ್ಲಿ ಹೊಟೇಲ್’ಗೆ ಬಂದು ಉಚಿತವಾಗಿ ಊಟ ಕೊಡಲು ಹೇಳಿದ್ದಾನೆ. ಈ ವೇಳೆ, ಅಲ್ಲಿದ್ದ ಮಾಲೀಕರು ಊಟ ನೀಡಲು ನಿರಾಕರಿಸಿದ್ದಾರೆ. ಈ ವೇಳೆ, ಅಲ್ಲಿ ಕೆಲಸಕ್ಕೆ ಇದ್ದ ರಾಜು ಎಂಬ ಯುವಕನಿಗೆ ನಿಂದಿಸಿದ್ದಲ್ಲದೇ ಆತನಿಗೆ ಹಲ್ಲೆ ನಡೆಸಲು ಯತ್ನಿಸಿದ್ದಾನೆ. ಜೊತೆಗೆ ಹೋಟೆಲ್’ನಲ್ಲಿದ್ದ ಯುವತಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾನೆ. ಕುಡಿದ ಮತ್ತಿನಲ್ಲಿ ಹಲ್ಲೆ ನಡೆಸಲು ಮುಂದಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಸಂಬಂಧ ನಾರ್ತ್ ಫಾಸ್ಟ್ ಫುಡ್ ಸೆಂಟರ್ ಮಾಲೀಕ ವಿಕಾಸ್ ಕುಮಾರ್ ಭಯಗೊಂಡು ಎರಡು ದಿನ ಹೊಟೇಲ್ ತೆರೆದಿರಲಿಲ್ಲ. ವಿಕಾಸ್ ದೂರಿನನ್ವಯ ಅಮೃತಹಳ್ಳಿ ಪೊಲೀಸರು ಡ್ರೈವರ್ ಕೆಲಸ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ವಿರುದ್ಧ ಗಲಾಟೆ, ದಾಂಧಲೆ ಸೇರಿ ಮೂರು ಅಪರಾಧ ಪ್ರಕರಣ ದಾಖಲಾಗಿದ್ದು, ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ರೌಡಿ ಪಟ್ಟಿ ತೆರೆಯಲಾಗಿತ್ತು. ಇನ್ನು ಆರೋಪಿಯು ತನಗೆ ಅಸ್ತಮಾ ಇರುವುದರಿಂದ ದೇಹದ ಉಷ್ಣಾಂಶ ಸರಿದೂಗಿಸಲು ಮದ್ಯಸೇವನೆ ಮಾಡುತ್ತಿರುವುದಾಗಿ ಹೇಳಿಕೊಂಡು ತಿರುಗಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.