ಶಿವಮೊಗ್ಗ: ತಾಲೂಕಿನ ಬಿಕ್ಕೋನ ಹಳ್ಳಿಯ ಯಶೋದಮ್ಮ ಎಂಬ 45 ವರ್ಷದ ಮಹಿಳೆ ಹೊಲದಲ್ಲಿ ಕಳೆ ತೆಗೆಯುವಾಗ ಚಿರತೆಯೊಂದು ದಾಳಿ ನಡೆಸಿದೆ. ಪರಿಣಾಮ ಚಿರತೆಯ ದಾಳಿಗೆ ಯಶೋದಮ್ಮ ಬಲಿಯಾಗಿದ್ದಾರೆ.
ಮೊದಲ ಬಾರಿಗೆ ತಾಲೂಕಿನಲ್ಲಿ ಚಿರತೆಯ ದಾಳಿಗೆ ಬಲಿಯಾಗಿದೆ. ಶಿವಮೊಗ್ಗದ ಬಿಕ್ಕೋನ ಹಳ್ಳಿ ಸರ್ವೆ ನಂಬರ್ 9 ರಲ್ಲಿ ಈ ಘಟನೆ ನಡೆದಿದೆ. ಈ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳು ಖಚಿತ ಪಡಿಸಿದ್ದಾರೆ. ಕುತ್ತಿಗೆ ಭಾಗವೂ ಗಾಯಗೊಂಡಿದ್ದು, ಹಿಂಭಾಗದಲ್ಲಿ ತೀವ್ರ ತರವಾದ ದಾಳಿಗೆ ಒಳಗಾಗಿದೆ. ಇದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಮತ್ತು ಶಂಕರವಲಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಭಯದಲ್ಲಿ ಸುತ್ತಮುತ್ತ ಗ್ರಾಮಸ್ಥರು
ಈ ದಾಳಿ ಬಿಕ್ಕೋನಹಳ್ಳಿ ಸುತ್ತಮುತ್ತ ಗ್ರಾಮಸ್ಥರನ್ನು ಗಾಬರಿ ಪಡಿಸಿದೆ. ಈ ಭಾಗದಲ್ಲಿ ಚಿರತೆ ಹೆಚ್ಚಿದ್ದು, ಅರಣ್ಯ ಇಲಾಖೆಯವರ ನಿರ್ಲಕ್ಷ್ಯದಿಂದ ಯಾವ ಕ್ರಮವೂ ಜರುಗಿಸಿಲ್ಲ. ಇದೀಗ ಚಿರತೆ ದಾಳಿಯ ಬಳಿಕ ಗ್ರಾಮಸ್ಥರು ಮನೆಯಿಂದ ಹೊರಗೆ ಮತ್ತು ಗದ್ದೆ, ಹೊಲ, ತೋಟಗಳಿಗೆ ಹೋಗಲು ಭಯಪಡುವಂತಾಗಿದೆ. ಮಹಿಳೆಯ ಸಾವಿನಿಂದ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ.