ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲು 20 ವರ್ಷ ಬೇಕು: RBI ಮಾಜಿ ಗವರ್ನರ್‌

Prasthutha|

ಹೈದರಾಬಾದ್‌: ಭಾರತವು ಅಭಿವೃದ್ಧಿ ಹೊಂದಿದ ದೇಶವಾಗಲು ಇನ್ನೂ 20 ವರ್ಷಗಳು ಬೇಕಾಗಲಿವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ನ (RBI) ಮಾಜಿ ಗವರ್ನರ್‌ ಸಿ. ರಂಗರಾಜನ್‌ ಶನಿವಾರ ಹೇಳಿದ್ದಾರೆ.

- Advertisement -

ಭಾರತವನ್ನು 5 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯನ್ನಾಗಿಸುವುದು ಅಲ್ಪಾವಧಿಗೆ ಮಹತ್ವಾಕಾಂಕ್ಷೆಯ ಗುರಿಯಾಗಿದೆ. ಹೀಗಿದ್ದರೂ ಈ ಗಾತ್ರದ ಆರ್ಥಿಕತೆಯು 3,472 ಡಾಲರ್ ತಲಾ ಆದಾಯ ಪ್ರಕಾರ ಮಧ್ಯಮ ಆದಾಯದ ದೇಶ ಎಂದು ಕರೆಸಿಕೊಳ್ಳಲಿದೆ. ಮೇಲ್ಮಧ್ಯಮ ಆದಾಯದ ದೇಶದ ಮಟ್ಟಕ್ಕೆ ತಲುಪಬೇಕಾದರೆ ಭಾರತಕ್ಕೆ ಇನ್ನೂ ಎರಡು ವರ್ಷ ಬೇಕಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಹೊಂದಿದ ದೇಶಗಳ ಸಾಲಿಗೆ ಸೇರಲು ತಲಾ ಆದಾಯವು ಕನಿಷ್ಠ 13,205 ಡಾಲರ್ ಇರಬೇಕು. ಹೀಗಾಗಲು ದೇಶದ ಆರ್ಥಿಕತೆಯು ಶೇ 8 ರಿಂದ ಶೇ 9ರ ಆಸುಪಾಸಿನಲ್ಲಿ ಬೆಳವಣಿಗೆ ಕಾಣಬೇಕಿದ್ದು, ಈ ಹಂತಕ್ಕೆ ತಲುಪಲು ಭಾರತಕ್ಕೆ ಇನ್ನೂ 20 ವರ್ಷಗಳು ಬೇಕಾಗಲಿವೆ ಎಂದು ಹೇಳಿದ್ದಾರೆ.

- Advertisement -

ಭಾರತವು ಸದ್ಯ ಜಗತ್ತಿನ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಆದರೆ, ಐಎಂಎಫ್‌ನ ಪ್ರಕಾರ ತಲಾ ಆದಾಯದ ಲೆಕ್ಕದಲ್ಲಿ 197 ದೇಶಗಳ ಸಾಲಿನಲ್ಲಿ ಭಾರತವು 142ನೇ ಸ್ಥಾನದಲ್ಲಿದೆ. ಹೀಗಾಗಿ ನೀತಿ ನಿರೂಪಕರು ದೇಶದ ಆರ್ಥಿಕ ಬೆಳವಣಿಗೆ ದರವನ್ನು ಹೆಚ್ಚಿಸುವತ್ತ ತಕ್ಷಣವೇ ಹೆಚ್ಚು ಗಮನ ಹರಿಸುವ ಅಗತ್ಯ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.



Join Whatsapp