ಐಪಿಎಲ್ ಮಿನಿ ಹರಾಜಿನಲ್ಲಿ ಭಾರತೀಯರನ್ನು ಹಿಂದಿಕ್ಕಿದ ಇಂಗ್ಲೆಂಡ್ ಆಟಗಾರರು !

Prasthutha|

ಕೊಚ್ಚಿ: ಕೊಚ್ಚಿಯಲ್ಲಿ ಶುಕ್ರವಾರ ನಡೆದ ಐಪಿಎಲ್’ನ ಮಿನಿ ಹರಾಜು ಪ್ರಕ್ರಿಯೆಯಲ್ಲಿ, ಟಿ20 ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡದ ಆಟಗಾರರು ಹೊಸ ದಾಖಲೆಯನ್ನೇ ಸೃಷ್ಟಿಸಿದ್ದಾರೆ. ಐಪಿಎಲ್ ಫ್ರಾಂಚೈಸಿಗಳು ವಿಶ್ವಚಾಂಪಿಯನ್ ತಂಡದ ಆಟಗಾರರನ್ನು ಖರೀದಿಸಲು ಜಿದ್ದಿಗೆ ಬಿದ್ದ ಪರಿಣಾಮ ಮೂವರು ಆಟಗಾರರಿಗೆ ಬಂಪರ್ ಮೊತ್ತ ಲಭಿಸಿದೆ.

- Advertisement -


ಇಂಗ್ಲೆಂಡ್ನ ಒಟ್ಟು 8 ಆಟಗಾರರಿಗಾಗಿ ಮಿನಿ ಹರಾಜಿನಲ್ಲಿ ಫ್ರಾಂಚೈಸಿಗಳು ಒಟ್ಟು 56.4 ಕೋಟಿ ರೂ.ಮೊತ್ತ ಖರ್ಚು ಮಾಡಿವೆ. ಇವರಲ್ಲಿ ಕೇವಲ ಮೂವರು ಆಟಗಾರರ ಖರೀದಿಗಾಗಿ 48 ಕೋಟಿ ರೂ.ವ್ಯಯಿಸಿವೆ. ಶುಕ್ರವಾರ ಮಾರಾಟವಾದ 80 ಆಟಗಾರರ ಪೈಕಿ ಅತಿಹೆಚ್ಚು ಮೊತ್ತ ಪಡೆದವರ ಪಟ್ಟಿಯಲ್ಲಿ ಮೊದಲ ಐವರು ವಿದೇಶಿ ಆಟಗಾರರು ಎಂಬುದು ವಿಶೇಷ. ಭಾರತೀಯರಲ್ಲಿ ಮಯಾಂಕ್ ಅಗರ್’ವಾಲ್ ಅತಿಹೆಚ್ಚು ಬಿಡ್ (8.25 ಕೋಟಿ) ಪಡೆದರು.


ಚೆನ್ನೈ ಸೂಪರ್ ಕಿಂಗ್ಸ್ನಿಂದ ಬಿಡುಗಡೆಗೊಂಡಿದ್ದ ಸ್ಯಾಮ್ ಕರ್ರನ್’ರನ್ನು ತಂಡಕ್ಕೆ ಸೇರಿಸಿಕೊಳ್ಳಲು ಫ್ರಾಂಚೈಸಿಗಳ ನಡುವೆ ತೀವ್ರ ಪೈಪೋಟಿ ನಡೆದು, ಅಂತಿಮವಾಗಿ ಪಂಜಾಬ್ ಕಿಂಗ್ಸ್, ಐಪಿಎಲ್ ಇತಿಹಾಸದಲ್ಲೇ ಅತಿಹೆಚ್ಚು ಮೊತ್ತಕ್ಕೆ (18.5 ಕೋಟಿ) ಖರೀದಿಸಿತು.
ಮತ್ತೋರ್ವ ಸ್ಟಾರ್ ಆಲ್’ರೌಂಡರ್ ಬೆನ್ ಸ್ಟೋಕ್ಸ್’ಗಾಗಿ 5 ಫ್ರಾಂಚೈಸಿಗಳು ಬಿರುಸಿನ ಬಿಡ್ ನಡೆಸಿವೆ. ಟಿ20 ವಿಶ್ವಕಪ್ ಟೂರ್ನಿಯ ಫೈನಲ್’ನಲ್ಲಿ ಪಾಕಿಸ್ತಾನ ವಿರುದ್ಧ ಬೆನ್’ಸ್ಟೋಕ್ಸ್, ನಿರ್ಣಾಯಕ ಅರ್ಧಶತಕ ಗಳಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು.

- Advertisement -


ಆರಂಭದಲ್ಲಿ ಲಕ್ನೋ ಸೂಪರ್ ಜೈಂಟ್ಸ್, ಆರ್’ಸಿಬಿ, ರಾಜಸ್ಥಾನ ರಾಯಲ್ಸ್, ಚೆನ್ನೈ ಸೂಪರ್’ಕಿಂಗ್ಸ್ ಹಾಗೂ ಸನ್’ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಗಳ ನಡುವೆ ಸ್ಟೋಕ್ಸ್ ಅವರನ್ನು ಕೊಂಡುಕೊಳ್ಳಲು ಬಿರುಸಿನ ಪೈಪೋಟಿ ನಡೆಯಿತು. ಅಂತಿಮವಾಗಿ 16.25 ಕೋಟಿಗೆ ಚೆನ್ನೈ ತಂಡದ ಪಾಲಾದರು. ಇದು ಐಪಿಎಲ್’ನಲ್ಲಿ ಇದುವರೆಗಿನ ಮೂರನೇ ಜಂಟಿ ಅತಿಹೆಚ್ಚಿನ ಬಿಡ್ ಆಗಿದೆ. ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕನಾಗಿರುವ ಸ್ಟೋಕ್ಸ್, ಧೋನಿ ನಿವೃತ್ತಿಯ ಬಳಿಕ ಸಿಎಸ್’ಕೆ ಸಾರಥಿಯಾಗುವ ಸಾಧ್ಯತೆಯೂ ಇದೆ.
ಶುಕ್ರವಾರದ ಹರಾಜಿನಲ್ಲಿ ಇಂಗ್ಲೆಂಡ್’ನ ಬ್ಯಾಟ್ಸ್’ಮನ್ ಹ್ಯಾರಿ ಬ್ರೂಕ್ ಅವರಿಗೂ ಬಂಪರ್ ಮೊತ್ತ ಲಭಿಸಿದೆ. 1.50 ಕೋಟಿ ಮೂಲಬೆಲೆ ಹೊಂದಿದ್ದ ಬ್ರೂಕ್’ರನ್ನು ಸನ್ ರೈಸರ್ಸ್ ಹೈದರಾಬಾದ್, ಬರೋಬ್ಬರಿ 13.25 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ. ರಾಜಸ್ಥಾನ ರಾಯಲ್ಸ್ ತನ್ನ ಪರ್ಸ್’ನಲ್ಲಿರುವ ಪೂರ್ತಿ ಮೊತ್ತವನ್ನು [13.20 ಕೋಟಿ] ವ್ಯಯಿಸಿ ಬ್ರೂಕ್ ಅವರನ್ನು ಖರೀದಿಸಲು ಪ್ರಯತ್ನ ನಡೆಸಿತಾದರೂ ಯಶಸ್ವಿಯಾಗಲಿಲ್ಲ.


ಇಂಗ್ಲೆಂಡ್ನ ಮತ್ತಿಬ್ಬರು ಆಟಗಾರರಾದ ವಿಲ್ ಜಾಕ್ಸ್ ಮತ್ತು ಬೌಲರ್ ರೀಸ್ ಟಾಪ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಕೂಡಿಕೊಂಡಿರು. 1.5 ಕೋಟಿ ಮೂಲ ಬೆಲೆ ಹೊಂದಿದ್ದ ವಿಲ್ ಜಾಕ್ಸ್ 3.2 ಕೋಟಿಗೆ ಮತ್ತು 75 ಲಕ್ಷ ಮೂಲಬೆಲೆ ಹೊಂದಿದ್ದ ರೀಸ್ ಟಾಪ್ಲಿ 1.9 ಕೋಟಿಗೆ ಆರ್’ಸಿಬಿ ಪಾಲಾದರು. ಮಿನಿ ಹರಾಜಿನಲ್ಲಿ ಈ ಇಬ್ಬರ ಮೇಲೆ ಬೆಂಗಳೂರು ಅತಿ ಹೆಚ್ಚಿನ ಮೊತ್ತ ವ್ಯಯಿಸಿತು.
ಮಿನಿ ಹರಾಜಿನಲ್ಲಿ 29 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 80 ಆಟಗಾರರು ಮಾರಾಟವಾಗಿದ್ದಾರೆ.

Join Whatsapp