ಪತಿಗೆ ವಿಷ ಕೊಟ್ಟು ಕೊಲೆಗೆ ಯತ್ನಿಸಿದ ಪತ್ನಿ : ವಿಷ ಬೆರೆಸಿದ್ದ ಉಪ್ಪಿಟ್ಟು ತಿಂದ ಬೆಕ್ಕು, ನಾಯಿ ಸಾವು!

Prasthutha|

ಬೆಳಗಾವಿ: ಆಸ್ತಿಗಾಗಿ ಮಹಿಳೆಯೊಬ್ಬಳು ಸಹೋದರನ ಮಾತು ಕೇಳಿ ತನ್ನ ಪತಿಗೆ ಉಪ್ಪಿಟ್ಟಿನಲ್ಲಿ ವಿಷ ಬೆರೆಸಿ ಕೊಲೆ ಮಾಡಲು ಯತ್ನಿಸಿದ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಗೊರೇಬಾಳ ಗ್ರಾಮದಲ್ಲಿ ನಡೆದಿದೆ. ವಿಷಯುಕ್ತ ಉಪ್ಪಿಟ್ಟು ತಿಂದ ನಿಂಗಪ್ಪಾ ಹಮಾನಿ (35) ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

- Advertisement -

ಎರಡು ಎಕರೆ ಆಸ್ತಿಗಾಗಿ ಸಹೋದರನ ಮಾತು ಕೇಳಿ ಸಾವಕ್ಕ ಹಮಾನಿ (32) ತನ್ನ ಪತಿ ನಿಂಗಪ್ಪಗೆ ಉಪ್ಪಿಟ್ಟಿನಲ್ಲಿ ವಿಷ ಹಾಕಿ ಕೊಟ್ಟಿದ್ದಾಳೆ. ಉಪ್ಪಿಟ್ಟು ತಿಂದ ನಂತರ ನಿಂಗಪ್ಪ ಒದ್ದಾಡುವುದನ್ನ ಕಂಡ ಕುಟುಂಬಸ್ಥರು, ಕೂಡಲೇ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಐಸಿಯುವಿನಲ್ಲಿ ನಿಂಗಪ್ಪನಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಪತಿಗೆ ವಿಷ ಬೆರೆಸಿದ ನಂತರ ಅನುಮಾನ ಬರಬಾರದೆಂದು ವಿಷ ಬೆರೆಸಿದ್ದ ಉಪ್ಪಿಟ್ಟನ್ನು ಸಾವಕ್ಕ ಹಮಾನಿ ತಿಪ್ಪೆಗೆಸೆದಿದ್ದಳು. ಆದರೆ, ಹೊಟ್ಟೆ ತುಂಬಿಸಿಕೊಳ್ಳಲೆಂದು ಬಂದ ಎರಡು ಮೂಕ ಪ್ರಾಣಿಗಳಾದ ಬೆಕ್ಕು ಮತ್ತು ನಾಯಿ ಉಪ್ಪಿಟ್ಟು ಸೇವಿಸಿ ಸಾವನ್ನಪ್ಪಿವೆ. ಪ್ರಕರಣ ಸಂಬಂಧ ಸವದತ್ತಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳಾದ ಸಾವಕ್ಕ ಮತ್ತು ಆಕೆಯ ಸಹೋದರ ಫಕೀರಪ್ಪ ಸಿಂದೋಗಿ ಅವರನ್ನು ಬಂಧಿಸಿದ್ದಾರೆ.

Join Whatsapp