ಬೆಂಗಳೂರು: ಹಿಂದಿ ದಿವಸ್ ಆಚರಣೆ ವಿರೋಧಿಸಿ ರಾಜ್ಯಾದ್ಯಂತ ಮಂಗಳವಾರ ಕನ್ನಡ ಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.
ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.
ಬಲವಂತವಾಗಿ ಹಿಂದಿ ಹೇರಲು ಹೊರಟಿರುವ ಕೇಂದ್ರ ಸರ್ಕಾರದ ಧೋರಣೆ ವಿರುದ್ಧಆಕ್ರೋಶ ವ್ಯಕ್ತಪಡಿಸಿ ಕೇಂದ್ರದ ವಿರುದ್ಧ ಘೋಷಣೆ ಕೂಗಿದರು.
ವಾಟಾಳ್ ನಾಗರಾಜ್ ಮಾತನಾಡಿ, ಹಿಂದಿ ದಿವಸ್ ಆಚರಣೆ ಮೂಲಕ ರಾಜ್ಯದಲ್ಲಿ ಹಿಂದಿ ಭಾಷೆ ಜಾರಿಗೆ ತರಲು ಹೊರಟಿದ್ದು ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಕನ್ನಡ ಚಳವಳಿ ನಾಯಕ ಸಾ.ರಾ.ಗೋವಿಂದು ಮಾತನಾಡಿ, ಕೇಂದ್ರ ಸರ್ಕಾರ ತ್ರಿಭಾಷಾ ಸೂತ್ರ ಒಪ್ಪಿಕೊಂಡಿದ್ದೇವೆ. ಇಷ್ಡಾದರೂ ನಮ್ಮ ಮೇಲೆ ಬಲವಂತವಾಗಿ ಹಿಂದಿ ದಿವಸ್ ಹೇರಲು ಹೊರಟಿದೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಹಿಂದಿ ದಿವಸ್ ಹೇರಿಕೆ ಮಾಡಲು ಅವಕಾಶ ನೀಡುವುದಿಲ್ಲ. ಹಿಂದಿ ಭಾಷೆಯನ್ನು ನಾವು ರಾಷ್ಟ್ರೀಯ ಭಾಷೆ ಎಂದು ಒಪ್ಪಿಕೊಂಡಿಲ್ಲ ಎಂದು ಹೇಳಿದರು.
ಕೇಂದ್ರ ಸರ್ಕಾರ ಬಲವಂತವಾಗಿ ಹಿಂದಿ ದಿವಸ್ ಹೇರಲು ಹೊರಟರೆ ಕನ್ನಡ ಚಳವಳಿ ನಾಯಕರು ನಿರಂತರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಬೆಂಗಳೂರು ಜೆ.ಪಿ.ಭವನದ ಬಳಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ವಿಧಾನ ಪರಿಷತ್ ಮಾಜಿ ಶಾಸಕರಾದ ಟಿ. ಎ. ಶರವಣ ಮಾತನಾಡಿ, ಹಿಂದಿ ಭಾಷೆಯ ಬಗ್ಗೆ ನಮ್ಮಗೆ ಯಾವುದೇ ವಿರೋಧವಿಲ್ಲ, ಸರ್ವ ಭಾಷೆಯನ್ನು ನಾವು ಗೌರವಿಸುತ್ತೇವೆ. ಆದರೆ ಹಿಂದಿಯನ್ನು ಒತ್ತಾಯ ಪೂರ್ವಕವಾಗಿ ಹೇರುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಇದು ಆರು ಕೋಟಿ ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ ಎಂದರು.
ನಮ್ಮ ನೆಲ -ಜಲ -ಭಾಷೆಯ ಉಳಿವಿನ ಬಗ್ಗೆ ಪ್ರಶ್ನೆ ಬಂದರೆ, ಜೆಡಿಎಸ್ ಪಕ್ಷ ತನ್ನ ಸಂಪೂರ್ಣ ಬೆಂಬಲ ನೀಡಿ ನಮ್ಮ ಜನತೆಗೆ ಬೆಂಗಾವಲಾಗಿ ನಿಲ್ಲುತ್ತಾ ಬಂದಿದೆ, ಮುಂಬರುವ ದಿನಗಳಲ್ಲೂ ಪೂರ್ಣ ಬೆಂಬಲ ನೀಡುತ್ತದೆ. ದೇಶಕ್ಕೆ ಕನ್ನಡಿಗನನ್ನು ಪ್ರಧಾನ ಮಂತ್ರಿಯಾಗಿ ಕೊಟ್ಟ ನಮ್ಮ ಪಕ್ಷ, ಮುಂದೆ ಇಂತಹ ಸೌಭಾಗ್ಯ ನಮ್ಮ ಕನ್ನಡಕ್ಕೆ ದೊರಕುತ್ತದೆ ಎಂಬುದು ಸಂಶಯ, ಅಂತಹ ಪ್ರಾದೇಶಿಕ ಪಕ್ಷ ಯಾವುದೇ ಸಂದರ್ಭದಲ್ಲಿ ಯಾರಿಗೂ ಹೆದರದೆ ನಮ್ಮ ಜನರ ರಕ್ಷಣೆಗೆ ಪಣತೊಟ್ಟು ನಿಲ್ಲುತ್ತದೆ ಎಂದು ಹೇಳಿದರು.
ಸಾಹಿತ್ಯ ಸಂಸ್ಕೃತಿಯಲ್ಲಿ, ಕಲೆಯಲ್ಲಿ ಉತ್ತುಂಗದಲ್ಲಿರುವ ನಮ್ಮ ಭಾಷೆಗೆ ಕಿಂಚಿತ್ತು ಚ್ಯುತಿ ಬರಲು ನಮ್ಮ ಜೆಡಿಎಸ್ ಪಕ್ಷ ಎಂದು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಇದು ಹೀಗೆ ಮುಂದುವರಿದರೆ ಮುಂಬರುವ ದಿನಗಳಲ್ಲಿ ಮತ್ತಷ್ಟು ತೀವ್ರವಾಗಿ ಹೋರಾಟ ನಡೆಸುವುದಾಗಿ ಎಂದು ಹೇಳಿದರು,