ರಾಷ್ಟೀಯ ಪೊಲೀಸ್ ಆಯೋಗದ ಮಾರ್ಗಸೂಚಿಗಳಂತೆ ಹೊಸ ಠಾಣೆಗಳ ಸ್ಥಾಪನೆ: ಗೃಹ ಸಚಿವ ಆರಗ ಜ್ಞಾನೇಂದ್ರ

Prasthutha|

ಬೆಂಗಳೂರು: ರಾಜ್ಯದಲ್ಲಿ ರಾಷ್ಟ್ರೀಯ ಪೊಲೀಸ್ ಆಯೋಗದ ಮಾರ್ಗಸೂಚಿಗಳಂತೆ ಹೊಸ ಠಾಣೆ ಗಳನ್ನು ಸ್ಥಾಪಿಸುವ ಅಥವಾ ಮೇಲ್ದರ್ಜೆಗೇರಿಸುವ ನಿರ್ಧಾರಗಳನ್ನು ತೆಗೆದು ಕೊಳ್ಳಲಾಗುವುದು ಎಂದು ಕರ್ನಾಟಕ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿಂದು ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಸದಸ್ಯ ಹೂಲಗೇರಿ ಡಿ ಎಸ್ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.


ಲಿಂಗಸೂಗೂರು ಪಟ್ಟಣದಲ್ಲಿ ಗ್ರಾಮೀಣ ಪೊಲೀಸ್ ಠಾಣೆಯನ್ನು ಸ್ಥಾಪನೆಗೆ ಬೇಡಿಕೆ ಮಂಡಿಸಿದ್ದ, ಸದಸ್ಯರು,”ಠಾಣೆ ಸ್ಥಾಪನೆಗೆ ಬೇಕಾಗಬಹುದಾದ ನಿವೇಶನವನ್ನು ಜಿಲ್ಲಾಡಳಿತದಿಂದ ಒದಗಿಸಿಕೊಡಲಾಗುವುದು” ಎಂದುತಿಳಿಸಿದರು.
ಸದಸ್ಯರ ಮನವಿಗೆ ಉತ್ತರಿಸುತ್ತಾ, ಸಚಿವರು, “ಮುಂದಿನ ದಿನಗಳಲ್ಲಿ ತಮ್ಮ ಮನವಿಯನ್ನು ಆದ್ಯತೆಯ ಮೇರೆಗೆ ಪರಿಶೀಲಿಸಲಾಗುವುದು” ಎಂದರು.

- Advertisement -


ಜೆಡಿ (ಎಸ್ ) ಸದಸ್ಯ, ಡಾ: ಶ್ರೀನಿವಾಸಮೂರ್ತಿ ಅವರ ಇನ್ನೊಂದು ಪ್ರಶ್ನೆಗೆ ಉತ್ತರಿಸುತ್ತಾ ಸಚಿವರು, ನೆಲಮಂಗಲ ಪಟ್ಟಣದಲ್ಲಿ, ಸದ್ಯಕ್ಕೆ ಮಹಿಳಾ ಪೊಲೀಸ್ ಠಾಣೆಯನ್ನು ಸ್ಥಾಪಿಸುವ ಪ್ರಸ್ತಾವನೆ ಇಲ್ಲ” ಎಂದು ತಿಳಿಸಿದರು.
“ರಾಜ್ಯದಲ್ಲಿ ಪ್ರತಿ ಜಿಲ್ಲೆಗೊಂದರಂತೆ ಮಹಿಳಾ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದ್ದು, ಬೆಂಗಳೂರು ನಗರದಲ್ಲಿ ಪ್ರತ್ಯೇಕವಾಗಿ ಎರಡು, ಮಂಗಳೂರು, ಬೆಳಗಾವಿ, ಮೈಸೂರು ಹಾಗೂ ಕಲಬುರಗಿ ನಗರದಲ್ಲಿಯೂ ತಲಾ ಒಂದು ಮಹಿಳಾ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ” ಎಂದು ಸದನಕ್ಕೆ ತಿಳಿಸಿದರು.

ದಂಡ ಪ್ರಕ್ರಿಯೆ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕ, 2021 ಹಾಗೂ ಕರ್ನಾಟಕ ಬಂದೀಖಾನೆ ಅಭಿವೃದ್ಧಿ ಮಂಡಳಿ ವಿಧೇಯಕ 2021, ಹಾಗೂ, ಬಂದಿಗಳ ಗುರುತಿಸುವಿಕೆ (ಕರ್ನಾಟಕ ತಿದ್ದುಪಡಿ) 2021 ವಿಧೇಯಕವನ್ನೂ, ಸಭೆಯ ಮುಂದೆ ಮಂಡಿಸಿದರು.

- Advertisement -