ಬೆಂಗಳೂರು: ಇತ್ತೀಚೆಗೆ ಕೊರಿಯರ್ ಆಫೀಸ್’ನಲ್ಲಿ ನಡೆದ ಮಿಕ್ಸಿ ಸ್ಫೋಟದ ಆರೋಪಿ ಅನೂಪ್ ಕುಮಾರ್ ವಿರುದ್ಧ UAPA ಕಾಯ್ದೆ ಹಾಗೂ NIA ತನಿಖೆ ಯಾಕಿಲ್ಲ ಎಂದು ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿರುವ ಅವರು, ತನ್ನ ಪ್ರೀತಿಯನ್ನು ಹುಡುಗಿ ನಿರಾಕರಿಸಿದ ಕಾರಣದಿಂದ ಆಕೆಯನ್ನು ಕೊಲ್ಲುವ ದುರುದ್ದೇಶದಿಂದ ಮಿಕ್ಸಿಯಲ್ಲಿ ಬಾಂಬ್ ಅಳವಡಿಸಿ ಕೊರಿಯರ್’ನಲ್ಲಿ ಕಳಿಸಿಕೊಟ್ಟು ಅದು ಕೊರಿಯರ್ ಆಫೀಸ್’ನಲ್ಲಿ ಸ್ಫೋಟಗೊಂಡು ಕೊರಿಯರ್ ಮಾಲಿಕ ತೀವ್ರವಾಗಿ ಗಾಯಗೊಂಡಿದ್ದಾರೆ. ಮಿಕ್ಸಿ ಬಾಂಬ್ ನಡೆಸಿದ ಅನೂಪ್’ನಿಗೆ ಬಾಂಬ್ ಒದಗಿಸಿದವರು ಯಾರು? ಅಥವಾ ಈತನಿಗೆ ಬಾಂಬ್ ತಯಾರಿಸಲು ಕಲಿಸಿಕೊಟ್ಟವರು ಯಾರು? ಆತನ ಹಿನ್ನೆಲೆ ಏನು? ಬಾಂಬ್ ತಯಾರಿಸಿ ಕೊರಿಯರ್ ಮೂಲಕ ಕಳುಹಿಸುವ ಉದ್ದೇಶ ಏನಾಗಿತ್ತು? ಎಂಬುದನ್ನು ಕೂಲಂಕಷ ತನಿಖೆಗೆ ಒಳಪಡಿಸಬೇಕು. ಇದೇ ಸಂಧರ್ಭದಲ್ಲಿ ಅಲ್ಪಸಂಖ್ಯಾತ ಸಮುದಾಯದ ಯುವಕರು ಏನಾದರೂ ಸಣ್ಣಪುಟ್ಟ ತಪ್ಪು ಮಾಡಿದರೆ ಅದನ್ನು ಗಂಭೀರವಾಗಿ ಪರಿಗಣಿಸಿ ಅವರ ಮೇಲೆ ಕಠಿಣ ಕಾಯ್ದೆ ಹಾಕಿ ಅವರ ಜನ್ಮ ಜಾಲಾಡುವ ಸರ್ಕಾರ ಮತ್ತು ಪೋಲಿಸ್ ಇಲಾಖೆ ಅನೂಪ್ ವಿಚಾರದಲ್ಲಿ ಯಾಕೆ ಕಠಿಣ ಕಾಯ್ದೆ ಹಾಕಿ ಕ್ರಮ ಕೈಗೊಳ್ಳುತ್ತಿಲ್ಲ? ಎಂದು ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರಿನಲ್ಲಿ ಕುಕ್ಕರ್ ಸ್ಫೋಟವಾದಾಗ ಅರಚಾಡಿದ್ದ ಮಾಧ್ಯಮಗಳು ಮತ್ತು ಬಿಜೆಪಿ ಪ್ರತಿನಿಧಿಗಳು ಮತ್ತು ಸಂಘಪರಿವಾರ ಸಂಘಟನೆಗಳು ಹಾಸನದ ಮಿಕ್ಸಿ ಸ್ಫೋಟದ ಬಗ್ಗೆ ಮೃದು ಧೋರಣೆ ತೋರುವುದರ ಹಿಂದಿನ ಷಡ್ಯಂತ್ರವೇನು ಎಂದು ಅವರು ಪ್ರಶ್ನಿಸಿದ್ದಾರೆ.
ಕೆಲವು ದಿನಗಳ ಹಿಂದೆ ಪುತ್ತೂರು ಉಪ ವಲಯ ಅರಣ್ಯಧಿಕಾರಿ ಸಂಜೀವ ಕಾಣಿಯೂರು ಎಂಬವರು ಸಾಮಾಜಿಕ ಜಾಲತಾಣದಲ್ಲಿ ಭಜನೆಯ ಬಗ್ಗೆ ಅವಹೇಳನಕಾರಿಯಾಗಿ ಬರೆದಿದ್ದಾರೆ ಎಂದು ಆರೋಪಿಸಿ ಮುರಳಿಕೃಷ್ಣ ಹಸಂತಡ್ಕ ನೇತೃತ್ವದ ಸಂಘಪರಿವಾರ ಕಾರ್ಯಕರ್ತರ ಗುಂಪು ಸಂಜೀವರವರ ಮನೆ ಮುಂದೆ ಬಾಂಬ್ ಎಸೆದಿದ್ದರು. ಪೊಲೀಸರಿಗೆ ಅಲ್ಲಿ ಜೀವಂತ ಬಾಂಬ್ ಕೂಡ ಸಿಕ್ಕಿದೆ ಎಂದು ಪತ್ರಿಕಾ ಮಾಧ್ಯಮಗಳಲ್ಲಿ ವರದಿಯಾಗಿದೆ. ಹೀಗಿದ್ದರೂ ಇದರ ವಿರುದ್ಧ ಸರ್ಕಾರ ಮತ್ತು ಪೊಲೀಸರು ಕಠಿಣ ಕ್ರಮ ಕೈಗೊಳ್ಳದೆ ಅವರಿಗೆ ಬೆಂಬಲವಾಗಿ ನಿಂತಿರುವುದು ದುರದೃಷ್ಟಕರ ಎಂದು ಅವರು ಹೇಳಿದ್ದಾರೆ.
ಸಂಜೀವ ಕಾಣಿಯೂರು ಮನೆ ಮೇಲೆ ನಡೆದ ಸ್ಫೋಟದ ತನಿಖೆ ಏನಾಯಿತು? ಎಷ್ಟು ಜನರ ಬಂಧನ ನಡೆದಿದೆ?, ಮಿಕ್ಸಿ ಬಾಂಬ್ ನಡೆಸಿದ ಅನೂಪ್’ನಿಗೆ ಬಾಂಬ್ ಒದಗಿಸಿದವರು ಯಾರು? ಅಥವಾ ಈತನಿಗೆ ಬಾಂಬ್ ತಯಾರಿಸಲು ಕಲಿಸಿಕೊಟ್ಟವರು ಯಾರು? ಆತನ ಹಿನ್ನೆಲೆ ಏನು ಎಂಬುದನ್ನು ಪೋಲಿಸ್ ಇಲಾಖೆ ಕೂಡಲೇ ಬಹಿರಂಗ ಪಡಿಸಬೇಕು ಹಾಗೂ ಆತನ ವಿರುದ್ಧ UAPA ಕಾಯ್ದೆ ಅಡಿಯಲ್ಲಿ ಬಂಧಿಸಿ ಪ್ರಕರಣವನ್ನು NIA ತನಿಖೆಗೆ ವಹಿಸಿಕೊಡಬೇಕೆಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.