ಮುಸ್ಲಿಮರ ಸಮಸ್ಯೆಗಳ ವಿರುದ್ಧ ಹೋರಾಡುವವರ ಬಂಧನ ಯಾಕೆ: PFI ನಾಯಕರ ಬಂಧನ ಖಂಡಿಸಿದ ಸಮಾಜವಾದಿ ಪಕ್ಷದ ಎಂಪಿ ಶಫಿಕುರ್ ರೆಹಮಾನ್

Prasthutha|

ಸಂಭಾಲ್: ದೇಶದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆಗಳ ದಾಳಿಗಳನ್ನು ಸಮಾಜವಾದಿ ಪಕ್ಷದ ಸಂಸದ ಶಫಿಕುರ್ ರೆಹಮಾನ್ ಬಾರ್ಕ್ ಖಂಡಿಸಿದ್ದು, ದೇಶದ ಮುಸ್ಲಿಮರು ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧ ಹೋರಾಡುತ್ತಿದ್ದ ಜನರನ್ನು ಏಕೆ ಬಂಧಿಸಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ರಾಷ್ಟ್ರೀಯ ತನಿಖಾ ಸಂಸ್ಥೆಯು ಕಾಲ್ಪನಿಕ ಆರೋಪಗಳ ಆಧಾರದಲ್ಲಿ 11 ರಾಜ್ಯಗಳಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ 106 ಕಾರ್ಯಕರ್ತರನ್ನು ಬಂಧಿಸಿದೆ. ಇದನ್ನು ಪ್ರಶ್ನಿಸಿದ ಶಫಿಕುರ್ ರೆಹಮಾನ್, ದೇಶದ ಇತರ ಎಲ್ಲಾ ಸಂಸ್ಥೆಗಳಂತೆ, ಪಿಎಫ್ಐ ಕೂಡ ಒಂದು ಸಂಘಟನೆಯಾಗಿದೆ. ಈ ಸಂಘಟನೆಯು ದೇಶದ ಮುಸ್ಲಿಮರು ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧ ಹೋರಾಡುತ್ತಿದ್ದು, ಇದೀಗ ಅದರ ನಾಯಕರನ್ನು ಯಾಕೆ ಬಂಧಿಸಲಾಗುತ್ತಿದೆ, ಅವರ ಮೇಲಿನ ಅಪರಾಧವೇನು ಎಂದು ಅವರು ಕೇಳಿದರು.

- Advertisement -

ಕಾಂಗ್ರೆಸ್ ನ “ಭಾರತ್ ಜೋಡೋ ಯಾತ್ರೆ”ಯನ್ನು ಸಹ ಬಾರ್ಕ್ ಬೆಂಬಲಿಸಿದ್ದು, ದೇಶವನ್ನು ಒಗ್ಗೂಡಿಸಲು ರಾಹುಲ್ ಗಾಂಧೀ ಹೊರಟಿದ್ದು ಶ್ಲಾಘನೀಯ ಎಂದು ಹೇಳಿದರು. ದೇಶದ ವಿನಾಶವನ್ನು ತಡೆಯಲು ಇದು ಉತ್ತಮ ನಡೆಯಾಗಿದೆ. ಎಲ್ಲಾ ವಿರೋಧ ಪಕ್ಷಗಳು ಇದನ್ನು ಬೆಂಬಲಿಸಬೇಕು. ಇದರಿಂದ ಪ್ರತಿಪಕ್ಷಗಳಿಗೆ ಅನುಕೂಲವಾಗಲಿದೆ. ಎಲ್ಲರೂ ಒಗ್ಗಟ್ಟಿನಿಂದ ಹೋರಾಡಿದರೆ, ಬಿಜೆಪಿ ಸರ್ಕಾರವನ್ನು ಅಳಿಸಬಹುದು ಎಂದು ಅವರು ಹೇಳಿದರು.

- Advertisement -