ಭಾರತೀಯ ನೋಟುಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಯಾಕೆ ಮುದ್ರಿಸಬಾರದು: ಕೇಜ್ರಿವಾಲ್’ಗೆ ಮನೀಶ್ ತಿವಾರಿ ತಿರುಗೇಟು

Prasthutha|

ನವದೆಹಲಿ: ಭಾರತೀಯ ನೋಟುಗಳಲ್ಲಿ ಗಣೇಶ ಮತ್ತು ಲಕ್ಷ್ಮಿ ದೇವಿಯ ಭಾವಚಿತ್ರಗಳನ್ನು ಮುದ್ರಿಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದ ಒಂದು ದಿನದ ಬಳಿಕ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಈ ನೋಟುಗಳಲ್ಲಿ ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರ ಫೋಟೋವನ್ನು ಯಾಕೆ ಮುದ್ರಿಸಬಾರದು ಎಂದು ಪ್ರಶ್ನಿಸಿದ್ದಾರೆ.

- Advertisement -

ಎಎಪಿ ಮುಖ್ಯಸ್ಥರ ಈ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್’ನ ಪಂಜಾಬ್ ಘಟಕದ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ, ಕೇಜ್ರಿವಾಲ್ ಅವರು ಮುಂದಿನ ಗುಜರಾತ್ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಹಿಂದುತ್ವ ಅಜೆಂಡಾವನ್ನು ನೆಚ್ಚಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಈ ಮಧ್ಯೆ ನೋಟ್’ನಲ್ಲಿ ಗಣೇಶ ಮತ್ತು ಲಕ್ಷ್ಮಿ ದೇವಿಯ ಫೋಟೋ ಮುದ್ರಣ ಕುರಿತ ಕೇಜ್ರಿವಾಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಪಂಜಾಬ್ ಆನಂದ್’ಪುರ ಸಾಹಿಬ್ ಸಂಸದ ಮನೀಶ್ ತಿವಾರಿ, ಹೊಸ ನೋಟ್’ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಫೋಟೋವನ್ನು ಯಾಕೆ ಮುದ್ರಿಸಬಾರದು. ಒಂದು ಕಡೆ ಮಹಾತ್ಮ ಗಾಂಧಿ, ಇನ್ನೊಂದು ಕಡೆ ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಮುದ್ರಿಸಲು ಅಡ್ಡಿ ಏನು ಎಂದು ಟ್ವೀಟ್’ನಲ್ಲಿ ಪ್ರಶ್ನಿಸಿದ್ದಾರೆ.

- Advertisement -

ಅಹಿಂಸೆ, ಸಂವಿಧಾನ ಮತ್ತು ಸಮಾನತಾವಾದ ಒಂದು ಒಕ್ಕೂಟದಲ್ಲಿ ಬೆಸೆಯುತ್ತದೆ. ಅದು ಆಧುನಿಕ ಭಾರತೀಯ ಪ್ರತಿಭೆಗಳನ್ನು ಪರಿಪೂರ್ಣವಾಗಿ ಒಗ್ಗೂಡಿಸುತ್ತದೆ ಎಂದು ಅವರು ಟ್ವೀಟ್’ನಲ್ಲಿ ತಿಳಿಸಿದ್ದಾರೆ.

ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕರೆನ್ಸಿ ನೋಟುಗಳ ಮೇಲೆ ಗಣೇಶ ಮತ್ತು ಲಕ್ಷ್ಮಿ ದೇವಿಯ ಫೋಟೋಗಳನ್ನು ಮುದ್ರಿಸುವಂತೆ ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡಿದ್ದರು.

“ನಮ್ಮ ನೋಟುಗಳಲ್ಲಿ ಲಕ್ಷ್ಮಿ-ಗಣೇಶನ ಚಿತ್ರವಿದ್ದರೆ, ನಮ್ಮ ದೇಶವು ಅಭಿವೃದ್ಧಿ ಹೊಂದುತ್ತದೆ. ನಾನು ಈ ಬಗ್ಗೆ ಎರಡು ದಿನಗಳಲ್ಲಿ ಪ್ರಧಾನಿಗೆ ಪತ್ರ ಬರೆಯುತ್ತೇನೆ” ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.

Join Whatsapp