ನವದೆಹಲಿ: ಪರಮವೀರ್ ಸಿಂಗ್ ಸೈನಿ ಮತ್ತು ಬಲ್ಜಿತ್ ಸಿಂಗ್ ಮತ್ತಿತರರ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ಆದೇಶದಂತೆ ತನಿಖಾ ಕೊಠಡಿ ಸೇರಿದಂತೆ ಪೊಲೀಸ್ ಠಾಣೆಯ ಪ್ರತಿ ಭಾಗದಲ್ಲಿಯೂ ಸಿಸಿಟಿವಿ ಅಳವಡಿಸಬೇಕು ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನಿರ್ದೇಶಿಸಿದೆ.
ಪೊಲೀಸ್ ಠಾಣೆಯ ಯಾವುದೇ ಭಾಗ ಸಿಸಿಟಿವಿಯಿಂದ ಹೊರತಾಗಿರಬಾರದು ಮತ್ತು ಸಹಜವಾಗಿಯೇ ತನಿಖಾ ಕೊಠಡಿ ಕೂಡ ಸಿಸಿಟಿವಿ ವ್ಯಾಪ್ಗಿಗೆ ಒಳಪಡಬೇಕು ಎಂದು ಸುಪ್ರೀಂಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿರುವುದಾಗಿ ನ್ಯಾಯಮೂರ್ತಿ ಅಮೋಲ್ ರತ್ತನ್ ಸಿಂಗ್ ವಿವರಿಸಿದ್ದಾರೆ.
ಪೊಲೀಸ್ ಠಾಣೆಗಳ ಪ್ರವೇಶ ಮತ್ತು ನಿರ್ಗಮನ ಸ್ಥಳಗಳು ಮತ್ತು ಮುಖ್ಯ ಗೇಟ್‌ಗಳಲ್ಲಿ ಮಾತ್ರವಲ್ಲದೆ ಎಲ್ಲಾ ಲಾಕಪ್‌ಗಳು, ಕಾರಿಡಾರ್‌ಗಳು, ಸಂದರ್ಶಕರ ಕೊಠಡಿ, ಸ್ವಾಗತ ಪ್ರದೇಶಗಳು, ವರಾಂಡಾಗಳಲ್ಲಿ ಕ್ಯಾಮೆರಾ ಅಳವಡಿಸಬೇಕು. ಔಟ್ ಹೌಸ್, ಅಧಿಕಾರಿ ಕೊಠಡಿಗಳು, ಲಾಕಪ್ ಕೊಠಡಿಗಳ ಹೊರಗೆ, ಠಾಣೆಯ ಅಂಗಳ ಮತ್ತು ಆವರಣ ಗೋಡೆ, ಹಾಗೆಯೇ ಸ್ನಾನಗೃಹ ಮತ್ತು ಶೌಚಾಲಯಗಳ ಹೊರಗೆ ಸೇರಿದಂತೆ ಪೊಲೀಸ್ ಠಾಣೆಗಳ ಯಾವುದೇ ಭಾಗ ಸಿಸಿಟಿವಿಯಿಂದ ಮುಕ್ತವಾಗಿರಬಾರದು. ಸಹಜವಾಗಿಯೇ ಯಾವುದೇ ತನಿಖಾ ಕೊಠಡಿ ಕೂಡ (ಸುಪ್ರೀಂಕೋರ್ಟ್‌ನ) ಅಂತಹ ನಿರ್ದೇಶನಗಳ ವ್ಯಾಪ್ತಿಗೆ ಒಳಪಡುತ್ತದೆ.
“ನಾವು (ಭಾರತ) ವಿಶ್ವದ 5ನೇ ಅಥವಾ 6 ನೇ ಅತಿದೊಡ್ಡ ಆರ್ಥಿಕತೆಯಾಗಿದ್ದೇವೆ. ಆದ್ದರಿಂದ ಥರ್ಡ್ ಡಿಗ್ರಿ ಟ್ರೀಟ್‌ಮೆಂಟ್‌ನಂತಹ ಅಡ್ಡದಾರಿ ಹಿಡಿಯುವ ಬದಲು ತನಿಖೆ ಸೇರಿದಂತೆ ಸಮಕಾಲೀನ ವಿಚಾರಣಾ ವಿಧಾನಗಳನ್ನು ಅಳವಡಿಸಿಕೊಳ್ಳದಿರುವುದಕ್ಕೆ ಸಬೂಬು ಹೇಳಬಾರದು” ಎಂದು ಅದು ಎಚ್ಚರಿಸಿದೆ.
ಜೈಲಿನಲ್ಲಿ ತನ್ನ ವಿರುದ್ಧ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿ ಭೂಗತ ಪಾತಕಿ ಕೌಶಲ್ ಚೌಧರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾ. ಸಿಂಗ್ ಅವರಿದ್ದ ಏಕಸದಸ್ಯ ಪೀಠದಲ್ಲಿ ನಡೆಯಿತು. ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಅಡಿ ಆರೋಪಿ ಸೂಚಿಸಿದಂತಹ ಕ್ರಮಗಳಿಗೆ ಅವಕಾಶವಿಲ್ಲ ಎಂದ ಹರಿಯಾಣ ಡಿಜಿಪಿ ವಾದವನ್ನು ಒಪ್ಪದ ನ್ಯಾಯಾಲಯ ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಅನುಸರಿಸಲಾಗುತ್ತಿದೆಯೇ ಎಂಬ ಬಗ್ಗೆ ಅಫಿಡವಿಟ್ ಸಲ್ಲಿಸಲು ಹರಿಯಾಣ, ಪಂಜಾಬ್ ಹಾಗೂ ಚಂಡೀಗಢದ ಡಿಜಿಪಿಗೆ ಸೂಚಿಸಿದೆ. ಮುಂದಿನ ವಿಚಾರಣೆ ಫೆ. 9ಕ್ಕೆ ನಿಗದಿಯಾಗಿದೆ.
(ಕೃಪೆ: ಬಾರ್ ಆ್ಯಂಡ್ ಬೆಂಚ್ )