ಚೆನ್ನೈ, ಆ.3: ತಮಿಳುನಾಡಿನಲ್ಲಿ ಡಿಎಂಕೆ ಸರಕಾರ ಬಂದ ಮೇಲೆ ಒಂದು ಸಾವಿರಕ್ಕೂ ಅಧಿಕ ಮಂದಿ ಎಡಿಎಂಕೆ ಮತ್ತು ಎಎಂಎಂಕೆ ಪಕ್ಷಗಳಿಂದ ಡಿಎಂಕೆಗೆ ವಲಸೆ ಬಂದಿದ್ದಾರೆ. ಆದ್ದರಿಂದ ಪಕ್ಷ ನಿಷ್ಠೆ ಪರಿಶೀಲಿಸಲು ಪಕ್ಷಗಳು ತಂತ್ರಜ್ಞಾನದ ಬಳಕೆಗೆ ಮುಂದಾಗಿವೆ. ಪಕ್ಷದವರು ಪಕ್ಷ ಸಂಬಂಧಿ ವಾಟ್ಸಾಪ್ ಸ್ಟೇಟಸನ್ನು ನಿತ್ಯ ಹಾಕಬೇಕು, ಹಾಕದವರ ಪಕ್ಷ ನಿಷ್ಠೆಯನ್ನು ನಾಯಕರು ಅನುಮಾನಿಸುವುದಾಗಿ ಹೇಳಿದ್ದಾರೆ.
ಉತ್ತರ ಗಡಿಯ ಜಿಲ್ಲೆಯ ಎಎಂಎಂಕೆ ಕಾರ್ಯಕರ್ತ ಒಬ್ಬರು “ನಮ್ಮ ಜಿಲ್ಲಾ ಕಾರ್ಯಕರ್ತರ ವಾಟ್ಸಾಪ್ ಗುಂಪು ಇದೆ. ಯೂನಿಯನ್ ಮಟ್ಟದ ಮತ್ತು ಇತರ ವಿಭಾಗಗಳ ಗುಂಪುಗಳೂ ಇವೆ. ನಾಯಕರ ಪರವಾಗಿ ಜಿಲ್ಲೆಯಲ್ಲಿ ಮಾಜಿ ಮಂತ್ರಿ ಒಬ್ಬರು ನಮ್ಮ ಗುಂಪುಗಳನ್ನು ಗಮನಿಸುತ್ತಾರೆ. ಅವರು ಕಾರ್ಯಕರ್ತರ ವಾಟ್ಸಾಪ್ ಸ್ಟೇಟಸ್ ಗಮನಿಸುತ್ತಾರೆ; ಈಗಾಗಲೇ ಅವರಲ್ಲಿ ಹಲವರು ಬೇರೆ ಪಕ್ಷಗಳಿಗೆ ಹೋಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
“ ನಮ್ಮ ಮಾಜಿ ಮಂತ್ರಿಗಳು ಕಾರ್ಯಕರ್ತರಿಗೆ ಫೋನು ಮಾಡಿ ತಳ ಮಟ್ಟದ ಕಾರ್ಯಕರ್ತರ ಬಗೆಗೆ ವಿವರಿಸುತ್ತಾರೆ. ಅವರು ಪಕ್ಷ ಸಂಬಂಧಿ ಸ್ಟೇಟಸ್ ಹಾಕಿರುವರೇ ಎಂದು ತಿಳಿದುಕೊಳ್ಳುತ್ತಾರೆ. ಅವರ ಸ್ಟೇಟಸ್ ನಲ್ಲಿ ಏನಾದರೂ ಅನುಮಾನಕ್ಕೆ ಎಡೆ ಇದ್ದರೆ ಅವರು ನೇರವಾಗಿಯೇ ಫೋನು ಮಾಡಿ ವಿಚಾರಿಸುತ್ತಾರೆ.” ಎಂದೂ ಆ ಕಾರ್ಯಕರ್ತರು ತಿಳಿಸಿದರು. ಎಲ್ಲ ವಿಭಾಗಗಳಲ್ಲೂ ಕೆಲವು ಮಾಜಿ ಮಂತ್ರಿಗಳು, ಸ್ಥಳೀಯ ನಾಯಕರು ಎಎಂಎಂಕೆ ನಾಯಕತ್ವದ ಪರವಾಗಿ ಈ ನಿಷ್ಠೆಯನ್ನು ಪರಿಶೀಲಿಸುತ್ತಾರೆ.
ಎಐಎಡಿಎಂಕೆ ಪಕ್ಷದಲ್ಲೂ ಇದೇ ಮಾದರಿ ನಡೆಯುತ್ತಿದೆ. ಪ್ರತಿಪಕ್ಷಗಳ ಐಟಿ ವಿಭಾಗದವರು ಎಲ್ಲರ ಸಾಮಾಜಿಕ ಜಾಲತಾಣ ನಿರ್ವಹಣೆಯನ್ನು ಗಮನಿಸುತ್ತಿರಬೇಕು ಎಂದು ಹೇಳಿದ್ದಾರೆ. ರಾಜ್ಯದ ಪಡುವಣ ಭಾಗದ ಐಟಿ ವಿಭಾಗದ ಕಾರ್ಯಕರ್ತರೊಬ್ಬರು “ನಮ್ಮ ಪಕ್ಷದ ಕೆಲವರು ಡಿಎಂಕೆ ಪಕ್ಷಕ್ಕೆ ಹೋದ ಮೇಲೆ, ನಮ್ಮ ನಾಯಕರು ಕಾರ್ಯಕರ್ತರ ವಾಟ್ಸಾಪ್ ಸ್ಟ್ಯಾಟಸ್ ಗಮನಿಸುವಂತೆ ತಿಳಿಸಿದ್ದಾರೆ. ಏನಾದರೂ ಅನುಮಾನ ಎನಿಸಿದರೆ ಕೂಡಲೆ ಅಂಥವರನ್ನು ವಿಚಾರಿಸುವಂತೆಯೂ ಅವರು ತಿಳಿಸಿದ್ದಾರೆ. ಕಳೆದ ಎರಡು ವಾರಗಳಿಂದ ಇವನ್ನೆಲ್ಲ ಕಟ್ಟುನಿಟ್ಟಾಗಿ ಅನುಸರಿಸುವುದಾಗಿಯೂ ಅವರು ತಿಳಿಸಿದರು. ಆದರೆ ಎಲ್ಲೆಲ್ಲ ಯಾವ್ಯಾವ ನಾಯಕರು ಯಾವ್ಯಾವ ಕಾರ್ಯಕರ್ತರ ಮೇಲೆ ಹೇಗೆಲ್ಲ ಗಮನ ನೆಟ್ಟಿದ್ದಾರೆ ಎಂಬುದು ತಿಳಿದು ಬಂದಿಲ್ಲ ಎಂದೂ ಅವರು ವಿವರಿಸುತ್ತಾರೆ.