ವಾಷಿಂಗ್ಟನ್ : ನೂತನ ನಿಯಮ ಮತ್ತು ಗೌಪ್ಯತಾ ನೀತಿಯನ್ನು ಒಪ್ಪಿಕೊಳ್ಳದಿದ್ದರೆ, ನಿಮ್ಮ ಖಾತೆ ಡಿಲೀಟ್ ಆಗಲಿದೆ ಎಂದು ಎಚ್ಚರಿಸಿದ್ದ ವಾಟ್ಸಪ್ ಗೆ ಇದೀಗ ಬಳಕೆದಾರರ ವಿರೋಧದ ಬಿಸಿ ತಟ್ಟಿದೆ. ಹೀಗಾಗಿ ಫೆ.8ರ ವರೆಗೆ ನೀಡಲಾಗಿದ್ದ ಗಡುವನ್ನು ಮುಂದೂಡಿದ್ದು, ಸದ್ಯಕ್ಕೆ ಯಾವುದೇ ಖಾತೆ ಅಮಾನತು ಅಥವಾ ಡಿಲೀಟ್ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಬಳಕೆದಾರರ ಭದ್ರತೆ ಮತ್ತು ಖಾಸಗಿತನಕ್ಕೆ ಸಂಬಂಧಿಸಿದ ಅಪ್ ಡೇಟ್ ಮುಂದೂಡಲಾಗಿದೆ. ನಮ್ಮ ನೂತನ ಅಪ್ ಡೇಟ್ ನಿಂದ ಹಲವು ಬಳಕೆದಾರರು ಗೊಂದಲಕ್ಕೆ ಒಳಗಾಗಿದ್ದರು. ಫೇಸ್ ಬುಕ್ ನೊಂದಿಗೆ ಯಾವುದೇ ವಾಟ್ಸಾಪ್ ಡೇಟಾ ಹಂಚಿಕೊಳ್ಳುವುದಿಲ್ಲ. ಖಾಸಗಿ ಡೇಟಾಗಳ ಎಂಡ್ ಟು ಎಂಡ್ ಎನ್ ಕ್ರಿಪ್ಷನ್ ಮುಂದುವರೆಯುತ್ತದೆ. ಅದನ್ನು ಫೇಸ್ ಬುಕ್ ಮೂಲಕ ಓದಲಾಗದು ಎಂದು ವಾಟ್ಸಪ್ ಸ್ಪಷ್ಟನೆ ನೀಡಿದೆ.
ವಾಟ್ಸಪ್ ನ ನೂತನ ಗೌಪ್ಯತಾ ನೀತಿ ಬಗ್ಗೆ ಬಳಕೆದಾರರು ಅಸಮಾಧಾನ ಹೊರಹಾಕಿದ್ದರು. ಸಾಕಷ್ಟು ಸಂಖ್ಯೆಯ ಬಳಕೆದಾರರು ಸಿಗ್ನಲ್ ಮತ್ತು ಟೆಲಿಗ್ರಾಂ ಗೆ ಸೇರ್ಪಡೆಯಾಗಿದ್ದರು. ಇದರಿಂದ ಸಿಗ್ನಲ್ ಆಪ್ ಪ್ರಚಾರಕ್ಕೆ ಬಂತು. ಹೀಗಾಗಿ ವಾಟ್ಸಪ್ ಈಗ ತನ್ನ ನಿರ್ಧಾರ ಪರಿಶೀಲನೆಗೊಳಪಡಿಸಲು ಚಿಂತಿಸಿದೆ.