ನವದೆಹಲಿ : ಹೊಸ ಮಧ್ಯಂತರ ಮಾರ್ಗಸೂಚಿಗಳಿಗೆ ಬದ್ಧರಾಗದಿದ್ದಲ್ಲಿ ಜನಪ್ರಿಯ ಸಾಮಾಜಿಕ ಜಾಲತಾಣ ವೇದಿಕೆಗಳಾದ ಫೇಸ್ ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್ ನಾಳೆ(ಮೇ26)ಯಿಂದ ಭಾರತದಲ್ಲಿ ನಿಷೇಧಕ್ಕೊಳಪಡಲಿವೆಯೇ? ಎಂಬ ಪ್ರಶ್ನೆಯೊಂದು ವ್ಯಾಪಕವಾಗಿ ಕೇಳಿಬಂದಿದೆ.
ಸಾಮಾಜಿಕ ಜಾಲತಾಣ ವೇದಿಕೆಗಳ ನಿರ್ವಹಣೆಗೆ ಸರಕಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದೆ. ಮೇ 25ರೊಳಗೆ ಅಂದರೆ ಇಂದಿನೊಳಗೆ ಈ ಮಾರ್ಗಸೂಚಿಗೆ ಬದ್ಧವಾಗುವ ಬಗ್ಗೆ ಪ್ರಕಟಿಸಬೇಕಾಗಿದೆ. ಆದರೆ, ವಾಟ್ಸಪ್, ಫೇಸ್ ಬುಕ್ ಸೇರಿದಂತೆ ಕೆಲವು ಸಾಮಾಜಿಕ ಜಾಲತಾಣ ವೇದಿಕೆಗಳು ಇಲ್ಲಿವರೆಗೂ ತಮ್ಮ ನಿರ್ಧಾರ ಪ್ರಕಟಿಸಿಲ್ಲ. ಟ್ವಿಟರ್ ನ ಭಾರತೀಯ ಆವೃತ್ತಿ ಮತ್ತು ಕೂ ಆಪ್ ಗಳು ಮಾತ್ರ ಮೇ ೨೫ರೊಳಗೆ ಹೊಸ ಮಾರ್ಗಸೂಚಿಗೆ ಬದ್ಧವಾಗಿರುವ ಬಗ್ಗೆ ಪ್ರಕಟಿಸಿವೆ. ಸರಕಾರದ ಮಾರ್ಗಸೂಚಿಗೆ ಬದ್ಧವಾಗುವ ಗುರಿಹೊಂದಿದ್ದೇವೆ, ಆದರೆ ಕೆಲವು ವಿಷಯಗಳ ಬಗ್ಗೆ ಇನ್ನಷ್ಟು ಚರ್ಚೆ ಬಯಸಿದ್ದೇವೆ ಎಂದು ಫೇಸ್ ಬುಕ್ ಇಂದು ಪ್ರಕಟಿಸಿದೆ.
ಈ ಹೊಸ ಮಾರ್ಗಸೂಚಿ ಒಟಿಟಿ ವೇದಿಕೆಗಳು ಮತ್ತು ಸುದ್ದಿ ತಾಣಗಳಿಗೂ ಅನ್ವಯವಾಗಲಿದೆ. ಹೊಸ ನಿಯಮಗಳ ಪ್ರಕಾರ, ಕಂಪೆನಿಗಳು ಭಾರತೀಯ ಮೂಲದ ದೂರು ನಿರ್ವಹಣಾಧಿಕಾರಿಯನ್ನು ನೇಮಿಸಬೇಕಿದೆ. ದೂರುಗಳು, ಆಕ್ಷೇಪಾರ್ಹ ಸಂದೇಶಗಳನ್ನು ತೆಗೆದುಹಾಕಲು ಕ್ರಮ ಕೈಗೊಳ್ಳಬೇಕಿದೆ.