ಬೊಮ್ಮಾಯಿ ಸರ್ಕಾರದ ಭವಿಷ್ಯವೇನು?

Prasthutha|

ಸರಕಾರಕ್ಕಂತು ಜನರ ಕಾಳಜಿ ಇಲ್ಲ. ಹೀಗಿರುವಾಗ ಜನರ ಭವಿಷ್ಯದ ಹಿನ್ನೆಲೆಯಲ್ಲಿ ಸರಕಾರದ ವಿಶ್ಲೇಷಣೆ ಮಾಡಿ ಯಾವ ಪ್ರಯೋಜನವೂ ಇಲ್ಲ. ಯಡ್ಯೂರಪ್ಪ ನೇತೃತ್ವದ ಸರಕಾರವನ್ನು ಯಾಕೆ ಬದಲಾಯಿಸಲಾಯಿತು ಎಂದು ಆಡಳಿತ ಪಕ್ಷ ಬಿಜೆಪಿ ಇದುವರೆಗೆ ಸ್ಪಷ್ಟಪಡಿಸಿಲ್ಲ. ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಅವರ ಮಗ ಬಸವರಾಜ ಬೊಮ್ಮಾಯಿ ಈಗ ಬಿಜೆಪಿ ಸರಕಾರದ ಹೊಸ ಮುಖ್ಯಮಂತ್ರಿಯಾಗಿದ್ದಾರೆ ಮತ್ತು ಸಚಿವ ಸಂಪುಟ ರಚನೆ ಮಾಡಿದ್ದಾರೆ. ಖಾತೆ ಹಂಚಿಕೆ ಮತ್ತು ಜಿಲ್ಲಾ ಉಸ್ತುವಾರಿ ವಿಚಾರದಲ್ಲಿ ಭಿನ್ನಮತ ಆರಂಭವಾಗಿದೆ.

- Advertisement -


ಯಡ್ಯೂರಪ್ಪ ಸರಕಾರ ಬದಲಾವಣೆ ಆಗುತ್ತದೆ ಎಂದು ಪ್ರತಿಪಕ್ಷ ಮುಖಡರು ಸೇರಿದಂತೆ ಜನಸಾಮಾನ್ಯರು ಕೂಡ ಹೇಳುತ್ತಿದ್ದರು. ಯಡ್ಯೂರಪ್ಪ ಮುಖ್ಯಮಂತ್ರಿಯಾಗಿ ಯಾವತ್ತೂ ಪೂರ್ಣಾವಧಿ ಅಧಿಕಾರ ಮಾಡಿಲ್ಲ. ಈ ಬಾರಿಯು ಅಷ್ಟೇ ಎನ್ನಲಾಗಿತ್ತು. ಯಡ್ಯೂರಪ್ಪ ಅವರು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದವರು. ವಯಸ್ಸಿನ ಕಾರವಣವೋ ಬ್ರಹ್ಮಾಂಡ ಭ್ರಷ್ಟಾಚಾರದ ಕಾರಣವೊ ಮುಖ್ಯಮಂತ್ರಿ ಬದಲಾವಣೆ ಆಗಿದೆ. ಈ ಬಗ್ಗೆ ಸ್ಪಷ್ಟ ಸಂದೇಶವೊಂದು ಮಂಗಳೂರಿಂದಲೇ ಧ್ವನಿ ರೂಪದಲ್ಲಿ ಬಹಿರಂಗ ಆಗಿತ್ತು.


ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ನಕಲಿ ಆಡಿಯೋದಲ್ಲಿ ಅಸಲಿ ಸತ್ಯಗಳು ಅಡಗಿತ್ತು. ಮೊದಲನೆಯದು ಸಿಎಂ ಬದಲಾವಣೆ. ಎರಡನೇಯದು ಈಶ್ವರಪ್ಪ ಅವರಂತಹ ಹಳಬರಿಗೆ ಸಚಿವರ ಸ್ಥಾನ ನೀಡಲಾಗುವುದಿಲ್ಲ ಎಂಬುದು. ಈ ಆಡಿಯೋ ಹೊರ ಬಂದ ಪರಿಣಾಮವೇ ಯಡ್ಯೂರಪ್ಪ ಅವರ ವ್ಯಾಪಾರ ಪಾಲುದಾರ ರಾಜಕೀಯ ಹಿತಶತ್ರು ಕೆ.ಎಸ್.ಈಶ್ವರಪ್ಪ ತಮ್ಮ ಮಂತ್ರಿ ಸ್ಥಾನಕ್ಕಾಗಿ ಗುದ್ದಾಡಬೇಕಾಯಿತು. ಇದರೊಂದಿಗೆ ಹೈಕಮಾಂಡಿನ ಎರಡನೇ ಅಜೆಂಡಾ ಟುಸ್ ಆಯ್ತು. ಮೂಲ ಬಿಜೆಪಿಯ ಲೋ ಪ್ರೊಫೈಲ್ ವ್ಯಕ್ತಿಯೊಬ್ಬನನ್ನು ಮುಖ್ಯಮಂತ್ರಿ ಮಾಡಬೇಕೆಂಬ ಹೈಕಮಾಂಡ್ನ ಮೊದಲ ಅಜೆಂಡಾ ಕೂಡ ಮೊದಲೇ ಠುಸ್ ಆಗಿತ್ತು. ಮುಖ್ಯಮಂತ್ರಿ ಮಾತ್ರವಲ್ಲ ಸಚಿವರ ಆಯ್ಕೆ ಕೂಡ ಯಡ್ಯೂರಪ್ಪ ಅವರ ಇಚ್ಛೆಯಂತೆ ನಡೆಯಿತು. ಬಿಜೆಪಿಯ ಯುವ ಹೊಸ ಮುಖಗಳನ್ನು ಮಂತ್ರಿ ಮಾಡಬೇಕು ಎಂಬ ಹೈಕಮಾಂಡ್ ಆಸೆ ಕೈಗೂಡಲಿಲ್ಲ. ಹಳೆ ನಾಯಕರು ಪಕ್ಷಕ್ಕೆ ಪಾಠ ಮಾಡುವ ಮಟ್ಟಕ್ಕೆ ಬೆಳೆಯಲು ಅವಕಾಶ ನೀಡಬಾರದು ಎಂಬುದು, ಪ್ರದೇಶವಾರು ಪ್ರಭಾವಶಾಲಿ ನಾಯಕರನ್ನು ರೂಪಿಸಬೇಕೆಂಬುದು ಪಕ್ಷದ ಆಶಯ ಆಗಿತ್ತು. ಯಡ್ಯೂರಪ್ಪ ಸಹಿತ ಈಶ್ವರಪ್ಪ, ಜಗದೀಶ ಶೆಟ್ಟರ್, ಬಸವರಾಜ ಪಾಟೀಲ್ ಯತ್ನಾಳ್, ಆರ್. ಅಶೋಕ್ ಮುಂತಾದವರಿಗೆ ಸ್ವಯಂ ಶಕ್ತಿಯಿಂದ ಪಕ್ಷ ಸಂಘಟಿಸುವುದಾಗಲಿ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿಕೊಂಡು ಬರುವ ಶಕ್ತಿ ಇಲ್ಲ ಎಂಬುದು ಹೈಕಮಾಂಡ್ ಅಭಿಪ್ರಾಯ. ಆದರೆ ಸರಕಾರದಲ್ಲಾಗಲಿ ಪಕ್ಷದಲ್ಲಾಗಲಿ ಅವರ ಹಸ್ತಕ್ಷೇಪ ಇದ್ದೇ ಇರುತ್ತದೆ.

- Advertisement -

ಕಾಂಗ್ರೆಸ್ ಪಕ್ಷದಲ್ಲಿ ಕೂಡ ಯಾವುದೊ ಕಾಲದಲ್ಲಿ ಮಂತ್ರಿ ಆದವರು ಈಗಾಗಲೂ ಅವರೇ ಮಂತ್ರಿ ಆಗುತ್ತಲೇ ಇರುವುದು ಮತ್ತು ಅವರ ಪಕ್ಷಕ್ಕೆ ಶಕ್ತಿ ತುಂಬಲು ಆಗದಿದ್ದರೂ ಪಕ್ಷಕ್ಕೆ ಸವಾಲಾಗಿ ಇರುವವರರನ್ನು ಗಮನಿಸಿರುವ ಬಿಜೆಪಿ ಹೈಕಮಾಂಡ್ ಗೆ ತಾನು ಹೇಳುವುದಕ್ಕೆಲ್ಲ ಗೊಣು ಅಲ್ಲಾಡಿಸುವ ಭಕ್ತರ ರೀತಿಯ ಮುಖಂಡರ ಪಡೆ ಬೇಕಾಗಿದೆ. ಮಂತ್ರಿ ಆದವನಿಗೆ ಆ ಇಲಾಖೆಯನ್ನು ನಿಭಾಯಿಸುವ ಸಾಮರ್ಥ್ಯ ಬೇಕಾಗಿಲ್ಲ. ಅದನ್ನೆಲ್ಲವನ್ನು ಸಾಂಸ್ಕೃತಿಕ ಸಂಘಟನೆಯ ಮುಖಂಡರೇ ರಿಮೋಟ್ ಕಂಟ್ರೋಲ್ ಮಾಡಲಿದ್ದಾರೆ. ಸಂವಿಧಾನಾತ್ಮಕವಾಗಿ ಇಲ್ಲದ ಉಪಮುಖ್ಯಮಂತ್ರಿ (ಡಿಸಿಎಂ) ನೇಮಕ ವಿಚಾರದಲ್ಲಿ ಕೂಡ ಅಸಮಾಧಾನ ವ್ಯಕ್ತವಾಗಿದೆ. ಡಿಸಿಎಂ ಹುದ್ದೆಯನ್ನು ನೀಡಿಲ್ಲ. ಅದರೊಂದಿಗೆ ಸಮಾಜ ಕಲ್ಯಾಣ ಇಲಾಖೆಯನ್ನು ಕಸಿದುಕೊಂಡಿದ್ದಾರೆ ಎಂದು ಬಳ್ಳಾರಿಯ ಶ್ರೀರಾಮುಲು ಬೇಜಾರು ಮಾಡಿಕೊಂಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯನ್ನು ಈ ಬಾರಿ ಬಿಲ್ಲವ ಸಮುದಾಯದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ನೀಡಲಾಗಿದೆ.
ಮಂತ್ರಿ ಮಂಡಲ ರಚನೆಯಲ್ಲಿ ಬಹುದೊಡ್ಡ ಬದಲಾವಣೆಯನ್ನು ಮಾಡಲು ಸಾಧ್ಯವಾಗಿಲ್ಲ. ಆಪರೇಷನ್ ಕಮಲದ ಮೂಲಕ ಸಚಿವರಾಗಿದ್ದ ಹಲವರು ಈಗಲೂ ಮುಂದುವರಿದಿದ್ದಾರೆ. ಇವರೆಲ್ಲ ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾ ದಳದಿಂದ ಪಕ್ಷಾಂತರ ಮಾಡಿದವರು. ನಗರಾಭಿವದ್ಧಿ ಮತ್ತು ಬೆಂಗಳೂರು ನಗರ ಅಭಿವದ್ಧಿ ಇಲಾಖೆಗೆ ಅತೀ ಹೆಚ್ಚಿನ ಬೇಡಿಕೆ. ಆಪರೇಷನ್ ಕಮಲ ಮೂಲಕ ಕಾಂಗ್ರೆಸ್ ತೊರೆದ ಬಹುತೇಕರು ರಿಯಲ್ ಎಸ್ಟೇಟ್ ಉದ್ಯಮಿಗಳು. ಅವರ ಫೈಲ್ ಕ್ಲಿಯರ್ ಆಗುವುದಿಲ್ಲ ಎಂದೇ ಮೈತ್ರಿ ಸರಕಾರವನ್ನು ಉರುಳಿಸಲಾಗಿತ್ತು. ಈಗ ಸಹಜವಾಗಿ ಕಳಂಕಿತರು ಬೆಂಗಳೂರು ನಗರ ಅಭಿವದ್ಧಿ ಮೇಲೆ ಕಣ್ಣಿಟ್ಟಿದ್ದರು. ಆದರೆ ಹೊಸ ಮುಖ್ಯಮಂತ್ರಿ ಬಿಡಿಎ ಬಿಬಿಎಂಪಿ, ಬಿಎಂಆರ್ ಡಿಸಿಯನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ.

ಪಕ್ಷದೊಳಗಿನ ಅಸಮಾಧಾನ, ಅಸಾಮರ್ಥ್ಯಗಳನ್ನು ನೋಡಿದರೆ ಸರಕಾರ ತುಂಬಾ ಸಮಯ ಬಾಳುವ ಸಾಧ್ಯತೆ ತೀರಾ ಕಡಿಮೆ ಎಂಬುದು ಸಾಮಾನ್ಯ ಅಭಿಪ್ರಾಯ. ಕೊರೋನಾ ಸಮಸ್ಯೆ, ಪ್ರವಾಹದಂತಹ ಸಂಕಷ್ಟಕಾರಿ ಸಂದರ್ಭದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡಬೇಕಾಗಿತ್ತೇ ಎಂಬಿತ್ಯಾದಿ ಚರ್ಚೆಗಳು ಈಗಾಗಲೇ ನಡೆದಿವೆ. ಸತತ ಎರಡನೇ ಶೈಕ್ಷಣಿಕ ವರ್ಷ ಕೂಡ ಶಾಲಾ ಕಾಲೇಜುಗಳು ಆರಂಭವಾಗಿಲ್ಲ. ಕೋವಿಡ್ ನಿಯಂತ್ರಣ ಲಸಿಕೆ ಅಭಿಯಾನ ಸಂಪೂರ್ಣ ಕುಂಠಿತವಾಗಿದೆ. ಒಂದು ಕಡೆ ಶಾಲೆ ಆರಂಭಿಸುವ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಮತ್ತೊಂದೆಡೆ ವೀಕೆಂಡ್ ಲಾಕ್ ಡೌನ್ ಆದೇಶ ನೀಡಿದ್ದಾರೆ. ಹಳೇ ಸರಕಾರದಂತೆ ಇದು ಕೂಡ ಟೇಕಾಫ್ ಆಗಲು ತುಂಬಾ ಸಮಯವೇ ಬೇಕಾದೀತು. ಮುಖ್ಯಮಂತ್ರಿ ಬದಲಾವಣೆಯ ಹೊರತಾಗಿಯೂ ಸರಕಾರದ ಕಂಟ್ರೋಲ್ ಯಡ್ಯೂರಪ್ಪ ಅವರಲ್ಲಿಯೇ ಇರಲಿದೆ. ಡಿಫ್ಯಾಕ್ಟೊ ಸಿಎಂ ಆಗಿ ಅವರ ಮಗನೇ ಮುಂದುವರಿಯಲಿದ್ದಾನೆ. ಪೆಟ್ರೋಲ್, ಡೀಸೆಲ್, ದೈನಂದಿನ ವಸ್ತುಗಳ ಬೆಲೆ ಏರಿಕೆ ಆಗಿರುವುದು ಮಾತ್ರವಲ್ಲ, ಲಂಚದ ದರ ಕೂಡ ಏರಿಕೆ ಆಗಿದೆ ಎನ್ನಲಾಗುತ್ತಿದೆ.
ಇವುಗಳ ನಡುವೆಯೇ ಬಿಜೆಪಿ ರಾಜ್ಯ ಅಧ್ಯಕ್ಷರದ್ದು ಎನ್ನಲಾದ ನಕಲಿ ಆಡಿಯೋ ಡಿಕೊಡಿಂಗ್ ಇದುವರೆಗೆ ಆಗಿಲ್ಲ. ‘‘ಯಾರೆಗ್ಲಾ ಕೊರೊಡ್ಚಿ, ಏರೆಗ್ಲಾ ಪನೊಡ್ಚಿ’’ ಎಂದಿರುವುದು ಕಳೆದ ಬಾರಿ ಚುನಾವಣಾ ಸಂದರ್ಭದಲ್ಲಿ ಆದಾಯ ತೆರಿಗೆ ದಾಳಿಗೊಳಗಾದ ಗುತ್ತಿಗೆದಾರನಿಗೆ ಹೇಳಿರುವುದು ಎಂಬುದು ಇದೀಗ ಬಹಿರಂಗ ರಹಸ್ಯ. ರಾಜ್ಯದ ಯಾವುದೇ ರಾಷ್ಟ್ರೀಯವಾದಿ ಪತ್ರಕರ್ತರು ಕೂಡ ನಕಲಿ ಆಡಿಯೋದಲ್ಲಿ ಅಡಗಿರುವ ಅಸಲಿ ವಿಚಾರದ ಬಗ್ಗೆ ಕೂಲಂಕಷ ವಿಶ್ಲೇಷಣೆ ಮಾಡಿ ವರದಿ ಮಾಡಿಲ್ಲ ಎಂಬುದು ಸೋಜಿಗದ ವಿಚಾರ. ಯಾರಿಗೂ ಕೊಡಬೇಡಿ ಎನ್ನುವಾಗ ಇಬ್ಬರು ಸಚಿವರ ಹೆಸರು ಕೂಡ ಪ್ರಸ್ತಾವ ಆಗುತ್ತದೆ. ಹಾಗಾದರೆ ಕೊಡಬೇಡಿ ಎಂದಿರುವುದರ ಬಗ್ಗೆ ಕುತೂಹಲ ಮೂಡಿಸುತ್ತದೆ.


ಭ್ರಷ್ಟಾಚಾರದ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಆರಂಭದಲ್ಲಿ ಕೂಡ ಜಿರೋ ಟ್ರಾಫಿಕ್ ಸುದ್ದಿಯಾಗಿತ್ತು. ಈ ಬಾರಿ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಕೂಡ ಜಿರೋ ಟ್ರಾಫಿಕಿನಲ್ಲಿ ವಿಮಾನ ನಿಲ್ದಾಣದಿಂದ ರಾಜಭವನಕ್ಕೆ ಕರೆತರಲಾಗಿತ್ತು. ಅವರು ನಾ ಖಾವುಂಗ ನಹೀಂ ಖಾನೇದೂಂಗ ಎನ್ನುತ್ತಿದ್ದ ನರೇಂದ್ರ ಮೋದಿ ಇರುವ ದೆಹಲಿಯಿಂದ ತರಾತುರಿಯಲ್ಲಿ ಸಚಿವೆಯಾಗಲು ಆಗಮಿಸಿದ್ದರು. ಬಿಜೆಪಿಯ ಹೈಕಮಾಂಡ್ ಸೂಚನೆಯ ಮೇರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಶಿಶು ಆಹಾರ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ನಿಪ್ಪಾಣಿಯ ಶಶಿಕಲಾ ಜೊಲ್ಲೆ ಅವರಿಗೆ ದೆಹಲಿಯ ಆದೇಶದಂತೆಯೇ ಮತ್ತೆ ಸಚಿವ ಸ್ಥಾನ ನೀಡಲಾಗಿತ್ತು.
ಸಚಿವೆ ಶಶಿಕಲಾ ಜೊಲ್ಲೆ ಚಿಕ್ಕೋಡಿಯ ಬಿಜೆಪಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆಯ ಮಡದಿ. ಗಂಡ ಸಂಸದ ಮತ್ತು ಮಡದಿ ಶಾಸಕಿ ಮತ್ತು ಸಚಿವೆ. ಹೇಳಿ ಕೇಳಿ ಆರ್ ಎಸ್ ಎಸ್ ನ ಅತ್ಯಂತ ನಿಕಟವರ್ತಿಗಳು. ಆದುದರಿಂದಲೇ ಮೊಟ್ಟೆ ಹಗರಣದಲ್ಲಿ ಆರೋಪ ಕೇಳಿಬಂದಾಗ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಾಗಿ ಬರಲಿಲ್ಲ. ರಾಜೀನಾಮೆ ನೀಡದಿರುವುದಕ್ಕೆ ಮತ್ತೊಂದು ಕಾರಣವೂ ಕೇಳಿಬಂದಿದೆ. ಅದೇನೆಂದರೆ, ಈ ಹಗರಣವನ್ನು ಹೊರ ಹಾಕಿದ ಗುಪ್ತ ಕಾರ್ಯಾಚರಣೆ ಮಾಡಿರುವುದು ಮಾಧ್ಯಮದವರಲ್ಲ ಬದಲಿಗೆ ಅವರದೇ ಪಕ್ಷದ ಕಾರ್ಯಕರ್ತರು ಎಂಬುದು. ಮಾಧ್ಯಮದವರು ಮಾಡಲಿ ಇತರರು ಮಾಡಿರಲಿ ಭ್ರಷ್ಟಾಚಾರ ನಡೆದಿರುವುದು ವಾಸ್ತವ. ಆದರೆ, ಭ್ರಷ್ಟಾಚಾರದ ಬಗ್ಗೆ ಬಿಜೆಪಿಯ ವ್ಯಾಖ್ಯಾನ ಬೇರೆಯೇ ಆಗಿರುತ್ತದೆ.

ಇತ್ತೀಚೆಗೆ ನಡೆದಿರುವ ಮಾಜಿ ಸಚಿವ ಜಮೀರ್ ಖಾನ್ ನಿವಾಸದ ಮೇಲಿನ ಇಡಿ ದಾಳಿ. ವಾಸ್ತವದಲ್ಲಿ ಟಿವಿ ಚಾನಲಿನಲ್ಲಿ ಪ್ರಸಾರ ಮಾಡಲೆಂದೇ ಮಾಡಲಾದ ದಾಳಿಯಂತಿತ್ತು. ಸಾಮಾನ್ಯವಾಗಿ ಜಮೀರ್ ಖಾನ್ ಆಗರ್ಭ ಶ್ರೀಮಂತ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಜಮೀರ್ ಖಾನ್ ಹಣ ಹಂಚುವ ಪ್ರಸಂಗಗಳು ಇವೆಯೇ ಹೊರತು ಅಪರ ತಪರ ಮಾಡಿ ವಿಚಾರಗಳು ಇಲ್ಲ.
ಹೆಚ್ಚು ಆದಾಯ ತರುವ ವ್ಯಾಪಾರ ಹೊಂದಿರುವುದು ಎಲ್ಲರಿಗೂ ತಿಳಿದ ವಿಚಾರ. ಆದಾಯ ತೆರಿಗೆ, ಇಡಿ, ಎನ್ಐಎ ದಾಳಿಗಳು ಮುಸ್ಲಿಮರ ವಿರುದ್ಧ ಅಪಪ್ರಚಾರ ಮಾಡುವ ರೀತಿಯಲ್ಲಿ ಟಿವಿ ಚಾನಲುಗಳಲ್ಲಿ ಪ್ರಸಾರ ಆಗುವ ಉದ್ದೇಶಕ್ಕಾಗಿಯೇ ನಡೆಸುವಂತೆ ಮೇಲ್ನೋಟಕ್ಕೆ ಕಾಣುತ್ತದೆ. ಈ ಹಿನ್ನೆಲೆಯಲ್ಲಿ ನಕಲಿ ಆಡಿಯೋದ ತನಿಖೆ ನಡೆಯುವ ಸಾಧ್ಯತೆ ಇಲ್ಲ



Join Whatsapp