ದೇವರಾಜ ಅರಸು ಎಂಬ “ಅರಸ” ನ ನೆನದು..

Prasthutha|

ಮನುಷ್ಯ ತನ್ನ ದೇಹದಿಂದಲೆ ವಿಸರ್ಜಿಸುವ ಕಕ್ಕಸ್ಸು ಎಂದರೇ ಈ ಷೋಕಾಲ್ಡ್ ನಾಗರೀಕ ಸಮಾಜ ಮುಖ ಕಿವುಚಿಕೊಂಡು ಅಸಹ್ಯ ಪಡುವ ಹೊತ್ತಿನಲ್ಲಿ ಅದೇ ಕಕ್ಕಸ್ಸನ್ನು ಬಾಚಿ ಬುಟ್ಟಿಯಲ್ಲಿ ತುಂಬಿಕೊಂಡು ತಲೆ ಮೇಲೆ ಹೊತ್ತು ಸಾಗಿಸುತ್ತಿದ್ದ ಜನಸಮುದಾಯವೊಂದು ಈ ಸಮಾಜದಲ್ಲಿ ಅನ್ನಕ್ಕಾಗಿ, ಸ್ಥಾಪಿತ ಜಾತಿವ್ಯವಸ್ಥೆ ಗುಲಾಮಗಿರಿಗಾಗಿ ಬದುಕಿತ್ತು ಎಂದರೆ ಅಂತಹ ಬದುಕಿನ ಸ್ಥಿತಿ ಅದೆಷ್ಟರ ಮಟ್ಟಿಗೆ ಬರ್ಬರ ಮತ್ತು ಅಮಾನುಷ ಎಂಬುದನ್ನು ಊಹಿಸಿಕೊಂಡರೆ ಎದೆ ನಡುಗುತ್ತದೆ.

- Advertisement -

ಬಹುಶಃ ಕಲ್ಲಳ್ಳಿ ದೇವರಾಜ ಅರಸು ಎಂಬ ನಾಯಕನೊಬ್ಬ ಇಲ್ಲದೇ ಹೋಗಿದ್ದರೆ ಇಂತಹದ್ದೊಂದು ದುಃಖ-ದೌರ್ಜನ್ಯದ ಬದುಕಿಗೆ ಮುಕ್ತಿ ಸಿಗಲು ಇನ್ನಷ್ಟು ಕಾಲವೇ ಹಿಡಿಯುತ್ತಿತ್ತೋ..?

ಅರಸು ಅವರ ರಾಜಕೀಯ ಅಭೀಷ್ಠೆ ಎಂಬುದು ಜಾತಿ ವ್ಯವಸ್ಥೆಯ ವಿಕೃತ ಹರಿವಿನ ಉಸುಕಿನಲ್ಲಿ ಹುದುಗಿ ಹೋದ ಅಸಂಖ್ಯಾತ ದಮನಿತ, ದನಿಸತ್ತ ಅನಾಥ ಜನಜಾತಿಗಳನ್ನು ಅನಾಮತ್ತಾಗಿ ಬಾಚಿ ಎದೆಗೆಳೆದುಕೊಂಡು ಹಾಲುಣಿಸುವ ಮಹಾತಾಯಿತನವೇ ಆಗಿತ್ತು.

- Advertisement -

1915 ಆಗಸ್ಟ್ 20 ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಕಲ್ಲಳ್ಳಿಯಲ್ಲಿ ಜನಿಸಿದ ದೇವರಾಜ ಅರಸು( ತಂದೆ ದೇವರಾಜ ಅರಸು-ತಾಯಿ ದೇವಿರಮ್ಮಣ್ಣಿ). ಅಂತಹ ಸ್ಥಿತಿವಂತವಲ್ಲದ ಅಪ್ಪಟ ರೈತಾಪಿ ಕುಟುಂಬ. 1941 ರಿಂದ ಆರಂಭಗೊಂಡ ಅರಸು ಅವರ ರಾಜಕೀಯ ಹೋರಾಟದ ಬದುಕು ನಿರಂತರ ಸಂಘರ್ಷಗಳಿಂದಲೇ 1982 ರಂದು ಅಕಾಲಿಕವಾಗಿ ಕೊನೆಗೊಂಡಿತು( 1972 ಜೂನ್ 6 ). ಎಂಟು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಈ ನಾಡನ್ನು ಆಳಿದ ಅರಸು ಅವರು ಕರ್ನಾಟಕ ರಾಜಕೀಯ ಚರಿತ್ರೆ ಮತ್ತು ವರ್ತಮಾನ ಎಂದೆಂದಿಗೂ ನೆನಪಿಸಿಕೊಳ್ಳುವ , ಆದರ್ಶವನ್ನಾಗಿ ಅಳವಡಿಸಿಕೊಳ್ಳಬಹುದಾದ ಹತ್ತಾರು ಜನಕಲ್ಯಾಣ ಯೋಜನೆಗಳನ್ನು ಬಿಟ್ಟು ಹೋಗಿದ್ದಾರೆ.

ಕರ್ನಾಟಕದ ರಾಜಕಾರಣ ಬಲಾಢ್ಯ ಜಾತಿಗಳ ಹಿಡಿತದಲ್ಲಿ ವಿಜೃಂಭಿಸುತ್ತಿದ್ದ ಕಾಲಘಟ್ಟದಲ್ಲಿ ಸಾಮಾನ್ಯ ರೈತ ಕುಟುಂಬದಿಂದ ಬಂದ ಸಣ್ಣ ಜಾತಿಯೊಂದರ ದೇವರಾಜ ಅರಸು ಅವರು ಈ ರಾಜ್ಯದ ರಾಜಕಾರಣದ ಮುಂಚೂಣಿ ನಾಯಕನಾಗಿ ಬೆಳೆದು ನಿಂತದ್ದು ಅಷ್ಟು ಸುಲಭದ ಮಾತಲ್ಲ.

ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತ ಆ ದಿನಗಳು ನಾಡಿನ ಅನಾಥ ಜನಜಾತಿಗಳ ಪಾಲಿಗೆ ಸುವರ್ಣ ಯುಗವೊಂದು ಆರಂಭಗೊಂಡಿತು. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಸೂತ್ರವನ್ನು ಅತ್ಯಂತ ಕರಾರು ವಕ್ಕಾಗಿ ಅನುಷ್ಠಾನ ಗೊಳಿಸುವಲ್ಲಿ ಅರಸು ತೋರಿದ ದಾಷ್ಟ್ಯತೆ ಸದಾ ಸ್ಮರಣೀಯವಾದದ್ದು, ಈ ನೆಲದಲ್ಲಿ ಜಾತಿ ಎಂಬ ಕವಚ ಹೊದಿಸಿ ಜನಸಮುದಾಯವೊಂದನ್ನು ಮಲಹೊರುವಂತಹ ಅಸಹ್ಯ , ಅಮಾನವೀಯ ಕೆಲಸಕ್ಕೆ ನಿಯೋಜಿಸಲಾಗಿತ್ತು. ಇಂತಹ ಅಮಾನುಷತನವನ್ನು ತೊಡೆದು ಹಾಕಲೆಂದೆ ಅರಸು1977 ರಲ್ಲಿ “ಮಲಹೊರುವ ಪದ್ದತಿ ನಿಷೇಧ ಶಾಸನ” ವನ್ನು ರೂಪಿಸಿದರು. ಬಸವಲಿಂಗಪ್ಪ ಎಂಬ ಇನ್ನೋರ್ವ ಜನನಾಯಕ ಈ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಮೂಲಕ ಅರಸು ಅವರ ಬೆನ್ನಿಗೆ ನಿಂತರು. 1972 ರಿಂದ 1977 ರವರೆಗಿನ ಕರ್ನಾಟಕ ಕಂಡ ಅರಸು ಯುಗ ಸಾಮಾಜಿಕ ಪರಿವರ್ತನೆ ಯುಗವಾಗಿ ಜನದನಿ ಮೊಳಗಿಸಿತ್ತು. ಹಿಂದುಳಿದ ವರ್ಗಗಳಿಗೆ ಉದ್ಯೋಗ, ಶೈಕ್ಷಣಿಕ ಮೀಸಲಾತಿಗೆ ಹಾವರನೂರು ಆಯೋಗ ರಚಿಸುವ ಮೂಲಕ ಹಿಂದುಳಿದ ಜಾತಿಗಳಲ್ಲಿ ಹಕ್ಕಿನ ಎಚ್ಚರವನ್ನು ಬಿತ್ತಿದವರು ಅರಸು. ವಿಧ್ಯಾರ್ಥಿಗಳಿಗೆ ‘ಮಧ್ಯಾಹ್ನದ ಊಟದ ಯೋಜನೆ’, ‘ಜೀತಪದ್ದತಿ ನಿಷೇಧ ಕಾಯ್ದೆ’, ಶ್ರೀಮಂತರ ಸಾಲದ ಶೂಲದಲ್ಲಿ ಸಿಲುಕಿ ನರಳುತ್ತಿದ್ದ ಬಡವರ ಸಾಲ ಮನ್ನಾಕ್ಕಾಗಿ ‘ಋಣ ಪರಿಹಾರ ಕಾಯ್ದೆ’ , ಕನಿಷ್ಟ ಕೂಲಿ ನಿಗದಿ ಕಾಯ್ದೆ , ಭಾಗ್ಯಜ್ಯೋತಿಯೋಜನೆ, ಇಂದಿರಾ ಗಾಂಧಿ ಅವರ ಮಹತ್ವಾಕಾಂಕ್ಷೆಯ ೨೦ ಅಂಶಗಳ ಕಾರ್ಯಕ್ರಮಗಳನ್ನು ಬದ್ದತೆಯಿಂದ ಅನುಷ್ಠಾನ , ‘ಆಹಾರ ದಂಗೆ’ ಯನ್ನು ಹತ್ತಿಕ್ಕಿದ್ದಲ್ಲದೆ ಅದಕ್ಕೆ ಕಾರಣವಾದ ನಿರುದ್ಯೋಗ ಸಮಸ್ಯೆಯ ನಿವಾರಣೆಗೆ ‘ಸ್ಟೈಫಂಡ್ರಿ ಯೋಜನೆ’ ಹೀಗೆ.. ಒಂದು ನಾಡಿನ ಬಹುಜನರ ಏಳಿಗೆಗಾಗಿ ಹತ್ತಾರು ಯೋಜನೆಗಳನ್ನು ತಪ್ಪಸ್ಸಿನಂತೆ ಜಾರಿಗೊಳಿಸಿದ ಕೀರ್ತಿ ದೇವರಾಜ ಅರಸು ಅವರಿಗೆ ಸಲ್ಲುತ್ತದೆ.

ಜನರಿಗೆ ಶಿಕ್ಷಣ ಮತ್ತು ಭೂಮಿಯ ಹಕ್ಕನ್ನು ಕೊಟ್ಟಾಗ ಮಾತ್ರ ಅವರ ಮತ್ತು ಈ ನಾಡಿನ ಅಭ್ಯುಧ್ಯುಯ ಮತ್ತು ಸಾಮಾಜಿ ಅಸಮಾನತೆ ನಿವಾರಣೆ ಸಾಧ್ಯ ಎಂಬ ಸತ್ಯವನ್ನು ಮನಗಂಡ ಅರಸು ಅವರು ತಂದ ಕ್ರಾಂತಿಕಾರಿ ಕಾಯ್ದೆಯೆಂದರೆ ಅದು “ಭೂಸುಧಾರಣ ಕಾಯ್ದೆ” (೧೯೭೪). ಇದುವರೆಗೂ ಇದ್ದ ಮೇಲ್ಜಾತಿ ಮತ್ತು ಕೆಳಜಾತಿಗಳ ನಡುವಿನ ಸಾಮಾಜಿಕ ಸಂಘರ್ಷವನ್ನು ಆರ್ಥಿಕ ಸಂಘರ್ಷಕ್ಕೆ ತಂದು ನಿಲ್ಲಿಸಿದರು ಅರಸು. ಇದು ಭೂಮಾಲೀಕರೇ ಆಗಿದ್ದ ಬಲಾಢ್ಯ ಜಾತಿಗಳನ್ನು ಕೆರಳಿಸಿದರೂ ಅದಾವುದಕ್ಕೂ ಸೊಪ್ಪು ಹಾಕದೆ ನಿರ್ಗತಿಕ ಜಾತಿಗಳಲ್ಲಿ ಆರ್ಥಿಕ ಮತ್ತು ರಾಜಕೀಯ ಬಲವನ್ನು ತುಂಬುವ ಕೆಲಸವನ್ನು ನಿರ್ಭಯವಾಗಿ ಮಾಡುತ್ತಾ ಹೋದರು. ಪ್ರಚಾರಕ್ಕಾಗಿ ಎಂದಿಗೂ ಹಾತೊರೆಯಲಿಲ್ಲ. ಜಾತಿ ಶ್ರೇಷ್ಠತೆಯ ಮಲವನ್ನೆ ಮೆದುಳಲ್ಲಿ ತುಂಬಿಕೊಂಡ ಪತ್ರಕರ್ತರಿಗೆ ಎಂದಿಗೂ ಅರಸು ಓರ್ವ ಜನನಾಯಕ, ಪರಿವರ್ತನೆಯ ಹರಿಕಾರ, ಅಸಂಖ್ಯಾತ ದುರ್ಬಲ ಜಾತಿಗಳನ್ನು ಪರಂಪರಾಗತ ದುಃಖ ಮತ್ತು ದೌರ್ಜನ್ಯ-ಅವಮಾನಗಳಿಂದ ಬಿಡುಗಡೆ ಗೊಳಿಸಿದ ವಿಮೋಚಕ ಎಂದು ಅನ್ನಿಸಲೇ ಇಲ್ಲ. ಬದಲಾಗಿ ಅವರನ್ನು ಭ್ರಷ್ಟ, ದುರಂಕಾರಿ ಎಂದು ಬಿಂಬಿಸಿದವು. ಅವತ್ತಿನ ಪತ್ರಿಕಾ ಕ್ಷೇತ್ರದಲ್ಲಿ ಮೇಲ್ಜಾತಿಗಳವರೆ ಪತ್ರಕರ್ತರಾಗಿ ಇದ್ದಿದ್ದರಿಂದ ಅರಸು ಅವರ ಜನಕಲ್ಯಾಣ ಕೆಲಸಗಳನ್ನು ಜನರಿಗೆ ತಲುಪಿಸುವಲ್ಲಿ ಮಾಧ್ಯಮಗಳೇ ಇಲ್ಲವಾಗಿ ಹೋಗಿ ಬಿಟ್ಟವು. ( ಹಾಗಂತ ಅವರು ಪತ್ರಿಕೆಗಳ ವಿರುದ್ದ ಸೇಡಿಗೆ ಇಳಿಯಲಿಲ್ಲ. ಬ್ರಾಹ್ಮಣರೇ ತುಂಬಿದ್ದ ಸಂಯುಕ್ತ ಕರ್ನಾಟಕ ಪತ್ರಿಕೆಯನ್ನು ಉಳಿಸಿದ್ದು ಅವರ ಉದಾತ್ತತೆಗೆ ನಿದರ್ಶನ) ಅರಸು ಅವರ ತೇಜೋವಧೆಯ ಹನನ ನಡೆಯಿತು. ಇದಾವುದಕ್ಕೂ ತಲೆ ಕೆಡಿಸಿಕೊಳ್ಳದ ಅರಸು ಅವರು ಪ್ರವಾಹದ ವಿರುದ್ದ ಈಜುವಂತೆ ರಾಜಕೀಯ ಬದುಕಿನಲ್ಲಿ ಈಜುತ್ತಲೆ ಇದ್ದರು. ಕೊನೆಗಾಲದಲ್ಲಿ ರಾಜಕೀಯ ಕಾರಣಕ್ಕಾಗಿ ದೆಹಲಿಗೆ ಹೋಗಲು ವಿಮಾನದ ಟಿಕೆಟ್ ಗೂ ಅವರಲ್ಲಿ ದುಡ್ಡಿರಲಿಲ್ಲ ಎಂದರೆ ನಂಬಲಾದೀತಾ? ಇದುವರೆಗೂ ವಿಮಾನ ಬುಕ್ ಮಾಡುತ್ತಿದ್ದ ಏಜೆನ್ಸಿ ಸಾಲದ ಜಾಸ್ತಿಯಾಗಿದೆ ಎಂದು ಎಂಟು ವರ್ಷ ಈ ನಾಡಿನ ಸುಭಿಕ್ಷೆಗಾಗಿ ಆಳಿದ, ಅಸಂಖ್ಯಾತ ಜನರ ಬದುಕನ್ನು ಬೆಳಕಾಗಿಸಿದ ಅರಸು ಎಂಬ ನಾಯಕನಿಗೆ ಒಂದು ವಿಮಾನದ ಟಿಕೆಟ್ ಬುಕ್ ಮಾಡಲು ಏಜೆನ್ಸಿ ನಿರಾಕರಿಸಿತು.

ಜೇಬಿನಲ್ಲಿ ದುಡ್ಡು, ಹೊಲ,ಗದ್ದೆ, ಮಹಲುಗಳಿಲ್ಲದೆ ಅರಸು ಬದುಕಿರುವಾಗ ಅವರು ಕರ್ನಾಟಕವನ್ನು ಲೂಟಿ ಹೊಡೆದ ಭ್ರಷ್ಟಚಾರಿ ಎಂದು ಮನುವ್ಯಾಧಿ ಪತ್ರಕರ್ತರು, ಪತ್ರಿಕೆಗಳು ಅವರ ವಿರುದ್ದ ಜಾತಿಯ ಸೇಡು ಬಗೆಯುತ್ತಿದ್ದವು. ಇದು ಕರ್ನಾಟಕದ ಪತ್ರಿಕೋದ್ಯಮ ಈ ನಾಡಿನ ಜನನಾಯಕನೊಬ್ಬನಿಗೆ ಬಗೆದ ದ್ರೋಹವೇ ಆಗಿತ್ತು.

ಸಂಘಟಿತ ಜಾತಿಗಳ ಮತಬ್ಯಾಂಕುಗಳ ಮುಂದೆ ತಮಗೆ ‘ಅದೃಶ್ಯ ಮತದಾರರೇ’ ತನ್ನ ಶಕ್ತಿ ಎಂದು ರಾಜಕೀಯ ಗೆಲುವು ಸಾಧಿಸುತ್ತಾ ಬಂದ ಅರಸು ಚಿಕ್ಕಮಗಳೂರಿನಲ್ಲಿ ಚುನಾವಣೆ ಗೆ ನಿಲ್ಲಿಸಿ ಇಂದಿರಾಗಾಂಧಿ ಎಂಬ ದೈತ್ಯ ನಾಯಕಿಗೆ ರಾಜಕೀಯ ಮರುಹುಟ್ಟು ಕೊಡುವ ಮೂಲಕ ಭಾರತದ ರಾಜಕಾರಣಕ್ಕೆ ತನ್ನಗಿದ್ದ ಜನಶಕ್ತಿಯನ್ನು ಸಾಬೀತು ಪಡಿಸಿದರು. ಸರ್ವಾಧಿಕಾರ ರಾಜಕಾರಣದ ವಿರುದ್ದ ತೊಡೆ ತಟ್ಟಿದ ಪೈಲ್ವಾನ್ ದೇವರಾಜ ಅರಸು ಅವರು ಪರ‍್ಯಾಯ ರಾಜಕಾರಣವನ್ನು ಕಟ್ಟಿ ಪ್ರಜಾಪ್ರಭುತ್ವದ ನಿಜ ಜನಾಧಿಕಾರವನ್ನು ಸ್ಥಾಪಿಸ ಹೊರಟರು. ಸಮಾಜವಾದಿ ಚಳವಳಿಯ ತಾತ್ವಿಕ ನಿಲುವುಗಳನ್ನು ಬೆಂಬಲಿಸುವ ಮೂಲಕ ಕ್ರಾಂತಿರಂಗವನ್ನು ಬಲಪಡಿಸುವ ಕೆಲಸಕ್ಕೆ ಕೈ ಹಾಕಿದರು. ದುರಾದೃಷ್ಟ ಕಾಲಾನಂತರದಲ್ಲಿ ಇಂದಿರಾಗಾಂಧಿ ಅವರೇ ಅರಸು ಅವರ ಬೆನ್ನಿಗಿರಿದರು. ಯಾವ ಅರಸು ತಮ್ಮೊಳಗಿನ ಆತ್ಮ ಬಲ .ಛಲದಿಂದಲೇ ದಲಿತ -ಹಿಂದುಳಿದ ವರ್ಗಗಳಲ್ಲಿ ರಾಜಕೀಯ ಅಸ್ಮಿತೆಯ ಬೀಜ ಬಿತ್ತಿದರೋ ಅದೇ ದಲಿತ -ಹಿಂದುಳಿದ ವರ್ಗಗಳ ರಾಜಕೀಯ ನಾಯಕರುಗಳಾದ ವೀರಪ್ಪಮೊಯ್ಲಿ, ಧರಂಸಿಂಗ್, ಬಂಗಾರಪ್ಪ, ಖರ್ಗೆ ಸೇರಿದಂತೆ 35 ಕ್ಕೂ ಹೆಚ್ಚು ಶಾಸಕರುಗಳು ಅರಸು ಅವರನ್ನು ಹೊತ್ತಲ್ಲದ ಹೊತ್ತಲ್ಲಿ ಇರಿದು ಹೋದರು. ಅರಸು, ಕಲ್ಯಾಣದ ಬಸವಣ್ಣನಂತೆ ವಿದ್ರೋಹಗಳಿಗೆ ತುತ್ತಾಗಿ ನಲುಗಿದರು.

ಅದು 1982. ಅರಸು ಯುಗ ಪುನರುತ್ಥಾನಗೊಳ್ಳುವ ಕಾಲಘಟ್ಟ. ರಾಷ್ಟ್ರ ರಾಜಕಾರಣವೂ ಅರಸು ಇದ್ದ ಕರ್ನಾಟಕದತ್ತ ನೋಡುತ್ತಿತ್ತು. ಈ ನಾಡಿನ ಸಾಮಾಜಿಕ ಮತ್ತು ರಾಜಕೀಯದ ಮತ್ತೊಂದು ಅಭಿವೃದ್ದಿ ಪರ್ವ ಎದ್ದುನಿಲ್ಲುವ ಸಂದರ್ಭದಲ್ಲಿ ಯುಗಪುರುಷ ದೇವರಾಜ ಅರಸು ಎಂಬ ‘ಅರಸ’ ನನ್ನು ಈ ನಾಡು ಕಳೆದುಕೊಂಡಿತು. ಬಹುಜನ ಸಮಾಜ ಅನಾಥವಾಗಿ ಕಣ್ಣೀರಿಟ್ಟಿತು.

ಎಂಥಹ ವಿಪರ್ಯಾಸವೆಂದರೆ , ಅರಸು ಕಾರಣದಿಂದಲೇ ಜಾತಿ ವ್ಯವಸ್ಥೆ ಮತ್ತು ಧರ್ಮದ ಗುಲಾಮಗಿರಿಯಿಂದ ಮುಕ್ತಿಗೊಂಡು ಸುಖವುಂಡ ಜನಜಾತಿ ಸಮುದಾಯಗಳು ಮತ್ತು ಅರಸು ಹೆಸರೇಳಿಕೊಂಡೆ ರಾಜಕೀಯ ಅಸ್ತಿತ್ವ ಉಳಿಸಿಕೊಂಡ ಹಿಂದುಳಿದ- ದಮನಿತ ಸಮುದಾಯಗಳ ಷೋ ಕಾಲ್ಡ್ ನಾಯಕರುಗಳು ವರ್ತಮಾನದ ರಾಜಕಾರಣದಲ್ಲಿ ಅರಸು ವಿಚಾರಧಾರೆಯ ವಿರೋಧಿ ರಾಜಕೀಯ ಚಕ್ರಾಧಿಪತ್ಯಕ್ಕೆ , ಜಾತಿ ವ್ಯವಸ್ಥೆ ಮತ್ತು ಧರ್ಮ ರಕ್ಷಕರ ಪರಿವಾರಕ್ಕೆ ಸೇರುತ್ತಾ ಕೃತಘ್ನಗೇಡಿಗಳಂತೆ ವರ್ತಿಸುತ್ತಿದ್ದಾರೆ.

ದೇವರಾಜಅರಸು ಕರ್ನಾಟಕದ ರಾಜಕೀಯ ಮತ್ತು ಸಾಮಾಜಿಕ ಬದುಕಿನ ದೊಡ್ಡ ಪರಿವರ್ತಕ ಶಕ್ತಿ. ಅರಸು ಅವರ 106 ನೇ ಜನ್ಮದಿನದ ಈ ಸಂದರ್ಭದಲ್ಲಿ ಅವರನ್ನು ನೆನಪಿಸಿಕೊಳ್ಳುವಾಗ ಎದೆ ಭಾರವೆನಿಸುತ್ತದೆ. ಕೊರಳು ಗದ್ಗದಿತವಾಗಿ ಸಂಕಟ ಬಿಡದೆ ಕಾಡುತ್ತದೆ. ಈ ಹೊತ್ತಿನಲ್ಲಿ ದೇವರಾಜ ಅರಸು ಅವರನ್ನು ಮತ್ತು ಬಹಜನ ರಾಜಕಾರಣವನ್ನು ಬದ್ದತೆಯಿಂದ ಉಳಿಸುವುದು ಮತ್ತು ಕರ್ನಾಟಕದಲ್ಲಿ ಪರ‍್ಯಾಯ ರಾಜಕಾರಣವನ್ನು ಕಟ್ಟುವುದು ಅರಸು ಅವರಿಗೆ ನಾವು ಸಲ್ಲಿಸುವ ನಿಜವಾದ ಗೌರವವಾಗುತ್ತದೆ.

“ಸಮಸಮಾಜಕ್ಕಾಗಿ ಆಳಿನಂತೆ ದುಡಿದು ‘ಅರಸ’ ನಂತೆ ಬದುಕಿದ ನಾಯಕನಿಗೆ ನಮನಗಳು.”

Join Whatsapp