ಕೋಲಾರ : “ಯಾವ ಕಾರಣಕ್ಕೆ ದಿನೇಶ್ ಕಲ್ಲಹಳ್ಳಿಯವರು ದೂರು ವಾಪಸ್ ಪಡೆದಿದ್ದಾರೆಂದು ಗೊತ್ತಿಲ್ಲ. ಈ ಪ್ರಕರಣದಲ್ಲಿ ಸರ್ಕಾರಕ್ಕೆ ಜವಾಬ್ದಾರಿ ಇರುವುದರಿಂದ ಸ್ವಯಂ ಪ್ರೇರಿತ ಕೇಸ್ ದಾಖಲಿಸಬಹುದು” ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.
“ಕಳೆದ ಒಂದು ವಾರದಿಂದ ಅಸಹ್ಯಕರವಾದ ಘಟನೆಗಳು ನಡೆಯುತ್ತಿದೆ. ಸರ್ಕಾರ ಗೌರವ ಉಳಿಸಿಕೊಳ್ಳುವ ನಿಟ್ಟಿನಲ್ಲಿ, ರಾಜ್ಯದ ಜನತೆಗೆ ಸರ್ಕಾರ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು” ಎಂದು ಕುಮಾರಸ್ವಾಮಿ ಸರಕಾರಕ್ಕೆ ಸಲಹೆ ನೀಡಿದರು.
“ಯಾರು ದೂರು ವಾಪಸ್ ತೆಗೆದುಕೊಳ್ಳುವುದಕ್ಕೆ ಪ್ರೇರೆಪಿಸಿದ್ದಾರೆ ಎಂದು ಗೊತ್ತಾಗಬೇಕು. ಸಂತ್ರಸ್ತ ಮಹಿಳೆಗೆ ನೋವು ಆಗಿರುವ ಬಗ್ಗೆ ಅಥವಾ ಅನ್ಯಾಯವಾಗಿದೆ ಎಂಬ ವಿಚಾರದಲ್ಲಿ ಇದುವರೆಗೆ ಯಾರೂ ಮಾತನಾಡಿಲ್ಲ. ಯಾವ ಕಾರಣಕ್ಕೆ ಈ ಪ್ರಕರಣ ಬಹಿರಂಗವಾಗಿದೆ? ಇದರ ಸತ್ಯಾಂಶ ಏನು? ಎನ್ನುವುದನ್ನು ಸರ್ಕಾರ ಜನತೆಯ ಮುಂದೆ ಇಡಬೇಕು” ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಸಿಡಿ ಬಿಡುಗಡೆಯಾದಾಗ ಮೈಸೂರಿನಲ್ಲಿ ಮಾತನಾಡಿದ್ದ ಎಚ್. ಡಿ. ಕುಮಾರಸ್ವಾಮಿ, “ಈ ಪ್ರಕರಣದಲ್ಲಿ 5 ಕೋಟಿಯ ಡೀಲ್ ನಡೆದಿದೆ. ಇದು ನನಗಿರುವ ಮೂಲಗಳ ಮಾಹಿತಿ. ಕಳೆದು ಮೂರು ತಿಂಗಳಿಂದ ಈ ಡೀಲ್ ವ್ಯವಹಾರ ನಡೆದಿದೆ. ದೊಡ್ಡ ದೊಡ್ಡವರೇ ಈ ಪ್ರಕರಣದಲ್ಲಿ ಇದ್ದಾರೆ” ಎಂದು ಹೇಳಿಕೆ ನೀಡಿದ್ದರು.
ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ದಿನೇಶ್ ಕಲ್ಲಹಳ್ಳಿ, “ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಹೇಳಿಕೆಯ ಸತ್ಯಾಸತ್ಯತೆಯನ್ನು ಬಹಿರಂಗ ಮಾಡಬೇಕು. ಮಾಧ್ಯಮಗಳ ಮುಂದೆ, ತನಿಖಾಧಿಕಾರಿಗಳ ಮುಂದೆ ಈ ಕುರಿತು ಸ್ಪಷ್ಟಪಡಿಸಬೇಕು” ಎಂದು ಒತ್ತಾಯಿಸಿದ್ದರು.