ಪಶ್ಚಿಮ ಬಂಗಾಳ ರೈಲು ದುರಂತ : ಗಾಯಾಳು ತನ್ನ ಕುಟುಂಬವನ್ನು ಸಂಪರ್ಕಿಸಲು ಸಹಾಯಕವಾದ ಮಸೀದಿಯ ಧ್ವನಿ ವರ್ಧಕ

Prasthutha|

ಗುವಾಹತಿ: ಮಸೀದಿಯಲ್ಲಿ ಪ್ರಾರ್ಥನಾ ವೇಳೆ ಬಳಸುವ ಧ್ವನಿ ವರ್ಧಕದಲ್ಲಿ ಪ್ರಕಟನೆ ನೀಡುವ ಮೂಲಕ ಅಸ್ಸಾಂ ನ ವ್ಯಕ್ತಿಯನ್ನು ಆತನ ಕುಟುಂಬದ ಜೊತೆ ಸೇರಲು ನೆರವಾದ ಹೃದಯ ಸ್ಪರ್ಶಿ ಘಟನೆಯೊಂದು ಗುವಾಹತಿಯಲ್ಲಿ ನಡೆಯಿತು. ಪಶ್ಚಿಮ ಬಂಗಾಳದ ಜಲಪೈಗುರಿಯಲ್ಲಿ ಗುರುವಾರ ನಡೆದ ರೈಲು ದುರಂತದಲ್ಲಿ 12 ಬೋಗಿಗಳು ಹಳಿ ತಪ್ಪಿ ಒಂಬತ್ತು ಮಂದಿ ದಾರುಣವಾಗಿ ಸಾವನ್ನಪ್ಪಿದ್ದರು. ಅಸ್ಸಾಂ ನ ದರ್ರಾಂಗ್ ಜಿಲ್ಲೆಯ ಸೈಫಿಕುಲ್ ಅಲಿ ಸೇರಿದಂತೆ 36 ಮಂದಿ ತೀವ್ರ ಗಾಯಗೊಂಡಿದ್ದರು. ಕೂದಲೆಳೆ ಅಂತರದಲ್ಲಿ ಸಾವಿನ ದವಡೆಯಿಂದ ಪಾರಾಗಿದ್ದ ಸೈಫಿಕುಲ್ ಅಲಿ ಜಲಪೈಗುರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಗಾಯಾಳುಗಳನ್ನು ಸಂದರ್ಶಿಸಲು ರೈಲ್ವೇ ಸಚಿವರಾದ ಅಶ್ವಿನಿ ವೈಷ್ಣೊವ್ ಆಸ್ಪತ್ರೆಗೆ ಭೇಟಿ ನೀಡಿದ್ದರು.

- Advertisement -

ಅಲಿ ಮತ್ತು ಆತನ ಮನೆಯವರಲ್ಲಿ ಮೊಬೈಲ್ ಇಲ್ಲದ ಕಾರಣ ಕುಟುಂಬದವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂದು ಅಲಿ ಅವರ ಆರೋಗ್ಯ ವಿಚಾರಿಸುವ ವೇಳೆ ತಿಳಿದು ಬಂತು. ಅಲಿ ಪಕ್ಕದ ಮನೆಯವರ ನಂಬರ್ ನೀಡಿದಾಗ ತಮ್ಮ ಮೊಬೈಲ್ ನಿಂದಲೇ ಸಚಿವರು ಕರೆ ಮಾಡಿದ್ದರು. ಕರೆ ಸ್ವೀಕರಿಸಿದ ವ್ಯಕ್ತಿಯು ಅಲಿ ಅವರ ಮನೆಗೆ ಹೋದಾಗ ಅಲ್ಲಿ ಯಾರು ಇರಲಿಲ್ಲ ಎಂದು ತಿಳಿದು ಬಂದಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ . ಸಚಿವರು ವ್ಯವಸ್ಥೆ ಮಾಡಿದ್ದ ಅಂಚೆಪೇದೆಗೂ ಮನೆಯವರನ್ನು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ.
ಪ್ರಯತ್ನ ವಿಫಲವಾದಾಗ ಗ್ರಾಮದ ಮಸೀದಿಗಳಲ್ಲಿ ಪ್ರಾರ್ಥನೆಗಾಗಿ ಬಳಸುವ ಧ್ವನಿ ವರ್ಧಕಗಳ ಮೂಲಕ ಪ್ರಕಟನೆ ನೀಡಲಾಯಿತು. ಈ ಮೂಲಕ ಮಾಹಿತಿ ದೊರಕಿದ ಆತನ ಕುಟುಂಬದವರು ರೈಲ್ವೇ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿದರು ಎಂದು ತಿಳಿದು ಬಂದಿದೆ.



Join Whatsapp