ಕೋಲ್ಕತ್ತಾ: ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಶ್ವ ಭಾರತಿ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ನಾಯಕ ಮತ್ತು ಎಡರಂಗದ ಕಾರ್ಯಕರ್ತ ಟಿಪ್ಪು ಸುಲ್ತಾನ್ ಅಲಿಯಾಸ್ ಮುಸ್ತಫಾ ಕಮಲ್ ಅವರನ್ನು ಯುಎಪಿಎ ಕಾನೂನಿನಡಿಯಲ್ಲಿ ಬಂಧಿಸಲಾಗಿದೆ ಎಂದು ಪಶ್ಚಿಮ ಬಂಗಾಳ ಪೊಲೀಸರು ತಿಳಿಸಿದ್ದಾರೆ.
ಕಳೆದ ತಡರಾತ್ರಿ ದಾಳಿ ನಡೆಸಿದ ಪೊಲೀಸರು ಬೀರಭೂಮ್ ಜಿಲ್ಲೆಯ ಶಾಂತಿನಿಕೇತನ ಎಂಬಲ್ಲಿರುವ ಟಿಪ್ಪು ಸುಲ್ತಾನ್ ಅವರ ನಿವಾಸಕ್ಕೆ ಅಕ್ರಮವಾಗಿ ಪ್ರವೇಶಗೈದು ಅವರನ್ನು ಬಂಧಿಸಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಈ ಸಂಬಂಧ ಬಂಧಿತ ಟಿಪ್ಪು ಸುಲ್ತಾನ್ ಅವರನ್ನು ಜಾರ್ ಗ್ರಾಮ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಮತ್ತು ನ್ಯಾಯಾಧೀಶರು ಏಳು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ.
ರಾಜಕೀಯ ಪ್ರೇರಿತವಾಗಿ ಈ ಬಂಧನ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಈ ಬಂಧನವನ್ನು ಕುಟುಂಬದ ಸದಸ್ಯರು, ಎಡರಂಗದ ಕಾರ್ಯಕರ್ತರು ಮತ್ತು ಸಮಾನ ಮನಸ್ಕ ಸಂಘಟನೆಗಳು ಖಂಡಿಸಿವೆ.
ಈ ಮಧ್ಯೆ ಮಾನವ ಹಕ್ಕು ಮತ್ತು ಪ್ರಜಾಪ್ರಭುತ್ವ ಹಕ್ಕು ಸಂರಕ್ಷಣಾ ಸಂಘ (ಎಪಿಡಿಆರ್), ರಾಜಕೀಯ ಕೈದಿಗಳ ವಿಮೋಚನ ಸಮಿತಿ (ಸಿಪಿಡಿಆರ್)- ಫ್ಯಾಶಿಸ್ಟ್ ವಿರೋಧಿ ನಾಗರಿಕ ವೇದಿಕೆ ಮತ್ತು ಹಲವಾರು ವಿದ್ಯಾರ್ಥಿ ಸಂಘಟನೆಗಳು ಮುಸ್ತಫಾ ಅವರನ್ನು ಬಿಡುಗಡೆಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿವೆ