ಪಶ್ಚಿಮ ಬಂಗಾಳ ಬಿರ್ ಭೂಮ್ ಹಿಂಸಾಚಾರ: ಕನಿಷ್ಠ 20 ಮಂದಿಯ ಬಂಧನ

Prasthutha|

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿರ್ ಭೂಮ್ ಜಿಲ್ಲೆಯಲ್ಲಿ ಎಂಟು ಜೀವಗಳನ್ನು ಬಲಿತೆಗೆದುಕೊಂಡ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದುವರೆಗೆ ಕನಿಷ್ಠ 20 ಜನರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

- Advertisement -

ಆಡಳಿತಾರೂಢ ಟಿಎಂಸಿ ಪಂಚಾಯತ್ ಅಧಿಕಾರಿಯೊಬ್ಬರ ಹತ್ಯೆಯ ಬಳಿಕ ಮಂಗಳವಾರ ಮುಂಜಾನೆ ಬೊಗ್ಟುಯಿ ಗ್ರಾಮದಲ್ಲಿ ಸುಮಾರು ಹನ್ನೆರಡು ಮನೆಗಳಿಗೆ ಬೆಂಕಿ ಹಚ್ಚಿದ್ದರಿಂದ ಇಬ್ಬರು ಮಕ್ಕಳು ಸೇರಿದಂತೆ ಎಂಟು ಮಂದಿ ಸುಟ್ಟು ಕರಕಲಾಗಿದ್ದರು.

ಘಟನೆ ಸಂಬಂಧ ಹನ್ನೊಂದು ಜನರನ್ನು ಅದೇ ದಿನ ಬಂಧಿಸಲಾಯಿತು.

- Advertisement -

‘ಇನ್ನೂ ಒಂಬತ್ತು ಮಂದಿಯ ಬಂಧನಗಳೊಂದಿಗೆ, ಪ್ರಕರಣದಲ್ಲಿ ಬಂಧಿಸಲ್ಪಟ್ಟವರ ಸಂಖ್ಯೆ 20 ಕ್ಕೆ ಏರಿದೆ. ಘಟನೆಯಲ್ಲಿ ಹೆಚ್ಚಿನ ಜನರು ಭಾಗಿಯಾಗಿದ್ದಾರೆಯೇ ಎಂದು ಕಂಡುಹಿಡಿಯಲು ನಾವು ಅವರನ್ನು ವಿಚಾರಣೆ ನಡೆಸುತ್ತಿದ್ದೇವೆ. ಕೆಲ ಆರೋಪಿಗಳು ಗ್ರಾಮದಿಂದ ಪರಾರಿಯಾಗಿರುವಂತಿದೆ. ಅವರನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ’ ಎಂದು ಅಧಿಕಾರಿ ತಿಳಿಸಿದರು.

ಹಿಂಸಾಚಾರದ ಬಗ್ಗೆ ವಿವರಣೆ ಪಡೆಯಲು ವಿಧಿವಿಜ್ಞಾನ ತಜ್ಞರು ಧ್ವಂಸಗೊಂಡ ಮನೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಘಟನೆಯ ತನಿಖೆಗಾಗಿ ಪಶ್ಚಿಮ ಬಂಗಾಳ ಸರ್ಕಾರವು ಹೆಚ್ಚುವರಿ ಮಹಾನಿರ್ದೇಶಕ (ಸಿಐಡಿ) ಜ್ಞಾನವಂತ್ ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (ಎಸ್ ಐಟಿ) ರಚಿಸಿದೆ. ಘಟನೆಯ ಕುರಿತು ಕೇಂದ್ರ ಗೃಹ ಸಚಿವಾಲಯವು ರಾಜ್ಯ ಸರ್ಕಾರದಿಂದ ವಿವರವಾದ ವರದಿಯನ್ನು ಕೇಳಿದೆ.



Join Whatsapp