ಎನ್‌ಕೌಂಟರ್‌ನಲ್ಲಿ ಹತರಾದ ಎಲ್ಲರೂ ನಕ್ಸಲರೇ ಆಗಿದ್ದರಾ?: ಛತ್ತೀಸ್‌ಗಢ ಕಾಂಗ್ರೆಸ್ ನಾಯಕ

Prasthutha|

ಛತ್ತೀಸ್‌ಗಢ: ಭದ್ರತಾ ಪಡೆ ಮತ್ತು ನಕ್ಸಲರ ನಡುವಿನ ಎನ್​ಕೌಂಟರ್​ನಲ್ಲಿ 29 ನಕ್ಸಲರನ್ನು ಹತ್ಯೆ ಮಾಡಲಾಗಿದೆ ಎಂದು ಸರಕಾರ ಹೇಳಿದ ಒಂದು ದಿನದ ಬಳಿಕ ಛತ್ತೀಸ್‌ಗಢ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ದೀಪಕ್ ಬೈಜ್, ಎನ್‌ಕೌಂಟರ್‌ನಲ್ಲಿ ಹತರಾದ 29 ಮಂದಿಯೂ ನಕ್ಸಲರೇ ಆಗಿದ್ದಾರಾ ಎಂದು ಪ್ರಶ್ನಿಸಿದ್ದಾರೆ.

- Advertisement -

ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದೀಪಕ್ ಬೈಜ್, ಭದ್ರತಾ ಪಡೆ ನಡೆಸಿದ ಎನ್‌ಕೌಂಟರ್‌ನಲ್ಲಿ ಹತರಾದ ಎಲ್ಲಾ 29 ಮಂದಿಯೂ ನಕ್ಸಲರೇ ಅಥವಾ ಅದರಲ್ಲಿ ಕೆಲ ಗ್ರಾಮಸ್ಥರೂ ಸಾವನ್ನಪ್ಪಿದ್ದಾರೆಯೇ ಎಂದು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಎನ್​ಕೌಂಟರ್​ನಲ್ಲಿ ಅಮಾಯಕ ಬುಡಕಟ್ಟು ಜನಾಂಗದವರು ಸಾವನ್ನಪ್ಪಿದ್ದರೆ, ಸರ್ಕಾರ ಆದಿವಾಸಿಗಳಿಂದ ತೀವ್ರ ಆಕ್ರೋಶವನ್ನು ಎದುರಿಸಬೇಕಾಗುತ್ತದೆ. 29 ನಕ್ಸಲರನ್ನು ಹೊಡೆದುರುಳಿಸಲಾಗಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ. ಈ 29 ಜನರು ನಕ್ಸಲರಾಗಿದ್ದರೆ, ಇದು ಭದ್ರತಾ ಪಡೆಗಳ ದೊಡ್ಡ ಸಾಧನೆ ಎಂದು ನಾವೇ ಹೇಳುತ್ತೇವೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬಸ್ತಾರ್‌ನ ಆದಿವಾಸಿಗಳು ಆತಂಕದಲ್ಲಿದ್ದಾರೆ ಮತ್ತು ಭಯಭೀತರಾಗಿದ್ದಾರೆ ಎಂದರು.

- Advertisement -

ಭೂಪೇಶ್ ಬಘೇಲ್ ರಾಜ್ಯದ ಮಾಜಿ ಮುಖ್ಯಮಂತ್ರಿ. ಅವರು ಏನೇ ಹೇಳಿದರೂ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ನಕ್ಸಲ್ ವಿರೋಧಿ ಕಾರ್ಯಾಚರಣೆಯ ಹೆಸರಿನಲ್ಲಿ ಗ್ರಾಮಸ್ಥರನ್ನು ಕೊಂದ ಹಲವಾರು ಘಟನೆಗಳನ್ನು ನಾವು ನೋಡಿದ್ದೇವೆ. ಭೂಪೇಶ್ ಬಘೇಲ್ ಅವರ ಆರೋಪಗಳು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ ಮತ್ತು ಈ ಕಾರ್ಯಾಚರಣೆಯ ಕುರಿತಾದ ಎಲ್ಲಾ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಬೇಕು ಎಂದು ಆಗ್ರಹಿಸಿದರು.

ಎಲ್ಲಾ 29 ಮಂದಿ ನಕ್ಸಲರು ಮಾತ್ರವೇ ಅಥವಾ ಕೆಲವು ಗ್ರಾಮಸ್ಥರು ಸಹ ಕೊಲ್ಲಲ್ಪಟ್ಟಿದ್ದಾರಾ ಎಂದು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಅವರು ಸರಕಾರವನ್ನು ಆಗ್ರಹಿಸಿದ್ದಾರೆ.

Join Whatsapp