ಬೆಂಗಳೂರು: ವಿದ್ಯಾವಂತ ಮಕ್ಕಳಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಸುಶಿಕ್ಷಿತ ಸಮಾಜ ನಿರ್ಮಾಣವಾಗಲು ಶಿಕ್ಷಕರ ಕೊಡುಗೆ ಅಪಾರ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಹೇಳಿದ್ದಾರೆ.
ರವೀಂದ್ರ ಕಲಾಕ್ಷೇತ್ರದಲ್ಲಿ ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದಿಂದ ಆಯೋಜಿಸಲಾದ ರಾಷ್ಟ್ರೀಯ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯೆ ಕಲಿತರೆ ಸಮಾಜದಲ್ಲಿ ಗೌರವ ಸಿಗುತ್ತದೆ. ಅಕ್ಷರ ಕಲಿತವರು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು. ಸುಶಿಕ್ಷಿತರು ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕು ಎಂದರು.
ಮನೆಯಲ್ಲಿ ತಂದೆ, ತಾಯಿ ಗುರುವಾಗಿ ಮಕ್ಕಳನ್ನು ಸಾಕಿ ಸಲಹುವರು. ನಂತರ ಶಾಲೆ, ಕಾಲೇಜಿನಲ್ಲಿ ಉತ್ತಮ ಪ್ರಜೆ, ವಿದ್ಯಾವಂತರಾಗಲು ಶಿಕ್ಷಕರ ಮಾರ್ಗದರ್ಶನ ಸಲಹೆ ಬೇಕು ಎಂದು ಹೇಳಿದರು.
ಮಾಜಿ ಕುಲಪತಿಗಳಾದ ಡಾ.ಎಸ್.ಚಂದ್ರಶೇಖರ್ ಶೆಟ್ಟಿ, ಡಾ.ಎಸ್.ಸಚ್ಚಿದಾನಂದ ಮತ್ತು ವೈದೇಹಿ ಮೆಡಿಕಲ್ ರಿಸರ್ಚ್ ಸೆಂಟರ್ ಸಂಸ್ಥೆಯ ಡಿ.ಜೆ.ಕಲ್ಪಜಾ, ನ್ಯಾಷನಲ್ ಪ್ರಸ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ ಶ್ರಾವಣ್ ಲಕ್ಷ್ಮಣ್ ಕಾರ್ಯಕ್ರಮ ಉದ್ಘಾಟಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸುಜಾತ ರಾಥೋಡ್, ಡಾ.ಲಿಂಗೇಗೌಡ,ಎಮ್. ರಮೇಶ್ ರೆಡ್ಡಿ, ಪ್ರಸನ್ನಕುಮಾರ್,ಡಾ.ಆಶಾ ಅಯ್ಯಂಗಾರ್ ಅವರನ್ನು ಸನ್ಮಾನಿಸಲಾಯಿತು.