ವೆಲ್ಫೇರ್ ಪಾರ್ಟಿ ವಿರುದ್ಧ ನಖ್ವಿ ಆರೋಪ: ಕ್ಷಮೆ ಯಾಚಿಸದಿದ್ದರೆ ಬಿಜೆಪಿ ವಿರುದ್ಧ ಕಾನೂನು ಕ್ರಮ: ಅಧ್ಯಕ್ಷ ಡಾ.ಇಲ್ಯಾಸ್

ಹೊಸದಿಲ್ಲಿ: ಮುಸ್ಲಿಮ್ ಸಂಘಟನೆಗಳ ಗೌರವಕ್ಕೆ ಧಕ್ಕೆ ತರುವ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಪ್ರಯತ್ನವನ್ನು ತೀವ್ರವಾಗಿ ಖಂಡಿಸಿರುವ ವೆಲ್ಫೇರ್ ಪಾರ್ಟಿ ಆಫಿ ಇಂಡಿಯಾ, ಬಿಜೆಪಿ ಮತ್ತು ಸಚಿವರು ತಕ್ಷಣವೇ ಸಾರ್ವಜನಿಕವಾಗಿ ಕ್ಷಮೆ ಕೋರಬೇಕೆಂದು ಆಗ್ರಹಿಸಿರುವುದಾಗಿ ‘ಮುಸ್ಲಿಮ್ ಮಿರರ್’ ವರದಿ ಮಾಡಿದೆ.

ಬಿಹಾರ ಅಸೆಂಬ್ಲಿ ಚುನಾವಣೆಯನ್ನು ಕಳೆದುಕೊಳ್ಳುವ ಲಕ್ಷಣಗಳಿರುವುದರಿಂದ ಬಿಜೆಪಿ ಹತಾಶೆಯನ್ನು ಇದರಿಂದ ಎದ್ದುಕಾಣುತ್ತದೆ ಎಂದು ಪಕ್ಷವು ಹೇಳಿದೆ.

- Advertisement -

ಮುಸ್ಲಿಮ್ ಸಂಘಟನೆಗಳನ್ನು ‘ಮೂಲಭೂತವಾದಿ ಮತ್ತು ಭಯೋತ್ಪಾದಕರು’ ಎಂದು ಕರೆದಿರುವ ನಖ್ವಿ ಅವರನ್ನು ವೆಲ್ಫೇರ್ ಪಾರ್ಟಿ ಅಧ್ಯಕ್ಷ ಡಾ.ಎಸ್.ಕ್ಯು.ಆರ್ ಇಲ್ಯಾಸ್ ತೀವ್ರವಾಗಿ ಟೀಕಿಸಿದ್ದಾರೆ. ಅವರ ಆರೋಪವು ಆಧಾರ ರಹಿತ. ಚುನಾವಣಾ ಆಯೋಗದಲ್ಲಿ ನೋಂದಾವಣೆಗೊಂಡಿರುವ ಸ್ವತಂತ್ರ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಗೌರವಕ್ಕೆ ಹಾನಿಯುಂಟುಮಾಡುವ ಉದ್ದೇಶದಿಂದ ಈ ಆರೋಪವನ್ನು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ರವಿವಾರದಂದು ಇಲ್ಲಿನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ನಖ್ವಿ, ಜಮಾಅತ್ ಎ ಇಸ್ಲಾಮಿ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಂತಹ ‘ಮೂಲಭೂತವಾದಿ’ ಸಂಘಟನೆಗಳೊಂದಿಗೆ ಕಾಂಗ್ರೆಸ್ ಬಿಹಾರದಲ್ಲಿ ಮೈತ್ರಿ ನಡೆಸಿದೆ ಎಂದು ಆರೋಪಿಸಿದ್ದರು. ಮುಂದುವರಿಸಿ “ಜಮಾಅತ್ ಇಸ್ಲಾಮ್ ರಾಜಕೀಯ ಪಕ್ಷವೊಂದನ್ನು ಸ್ಥಾಪಿಸಿದ್ದು, ಅದರ ಹೆಸರು ವೆಲ್ಫೇರ್ ಪಾರ್ಟಿ ಎಂಬುದನ್ನು ಕಾಂಗ್ರೆಸ್ ಗಮನದಲ್ಲಿರಲಿ” ಎಂದು ಅವರು ಹೇಳಿದ್ದರು.

ಮತದಾರರ ದಿಕ್ಕುತಪ್ಪಿಸಲು, ಗಮನವನ್ನು ಬೇರೆಡೆಗೆ ಸೆಳೆಯಲು ಮತ್ತು ಧ್ರುವೀಕರಿಸಲು ಇದು ಅವರ ತಂತ್ರಗಾರಿಕೆಯಾಗಿದೆ. ಅವರ ನಕಲಿ ತಂತ್ರ ಮತ್ತು ಘೋಷಣೆಗಳಿಂದ ಜನರು ಬೇಸತ್ತಿದ್ದು, ಅವರನ್ನು ತಿರಸ್ಕರಿಸಲಿದ್ದಾರೆ ಎಂದು ಇಲ್ಯಾಸ್ ಹೇಳಿದ್ದಾರೆ. ವೆಲ್ಫೇರ್ ಪಾರ್ಟಿಯನ್ನು ಭಯೋತ್ಪಾದಕ ಮತ್ತು ಮೂಲಭೂತವಾದಿಯೆಂದು ಕರೆದ ನಖ್ವಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು. ತಪ್ಪಿದರೆ ಕಾನೂನು ಮೊಕದ್ದಮೆ ಸಲ್ಲಿಸಲಾಗುವುದು ಅವರು ಹೇಳಿದ್ದಾರೆ.

- Advertisement -