ನಾವು ಜಗತ್ತಿನೆಲ್ಲೆಡೆ ಮಾಧ್ಯಮ ಸ್ವಾತಂತ್ರ್ಯ ಮುಕ್ತವಾಗಿರಬೇಕೆನ್ನುವುದನ್ನು ಬೆಂಬಲಿಸುತ್ತೇವೆ: ಬಿಬಿಸಿ ದಾಳಿ ಬಗ್ಗೆ ಅಮೆರಿಕ ಪ್ರತಿಕ್ರಿಯೆ

Prasthutha|

ನವದೆಹಲಿ: ಮುಂಬೈ ಮತ್ತು ದಿಲ್ಲಿಯ ಬ್ರಿಟಿಷ್ ಬ್ರಾಡ್ ಕಾಸ್ಟಿಂಗ್ ಕಂಪೆನಿಗಳ ಮೇಲೆ ನಡೆದ ಆದಾಯ ತೆರಿಗೆ ಇಲಾಖೆಯವರ ದಾಳಿ ಬಗ್ಗೆ ಅಮೆರಿಕ ಸಂಯುಕ್ತ ಸಂಸ್ಥಾನವು ಹೇಳಿಕೆ ನೀಡಿದೆ.

- Advertisement -

ನಾವು ಆದಾಯ ತೆರಿಗೆ ಇಲಾಖೆಯವರ ಸಮೀಕ್ಷಾ ದಾಳಿಯ ಬಗ್ಗೆ ಅರಿತಿದ್ದೇವೆ, ಆದರೆ ಅದರ ಬಗ್ಗೆ ಯಾವುದೇ ತೀರ್ಮಾನಕ್ಕೆ ಬಂದಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ನೆಡ್ ಪ್ರೈಸ್ ಹೇಳಿದ್ದಾರೆ.

“ಭಾರತೀಯ ತೆರಿಗೆ ಅಧಿಕಾರಿಗಳು ಸಮೀಕ್ಷೆ ಎಂದು ಬಿಬಿಸಿಯ ದಿಲ್ಲಿ, ಮುಂಬೈ ಕಚೇರಿಗಳ ಮೇಲೆ ದಾಳಿ ಮಾಡಿರುವುದು ನಮ್ಮ ಗಮನಕ್ಕೆ ಬಂದಿದೆ. ಭಾರತದ ದಾಳಿ ಅಧಿಕಾರಿಗಳು ಈ ಬಗ್ಗೆ ವಿವರಣೆ ನೀಡುವುದನ್ನು ನಾನು ಬಯಸುತ್ತೇನೆ. ಅದಕ್ಕಿಂತ ಪ್ರತ್ಯೇಕವಾಗಿ ಇನ್ನೇನನ್ನೂ ಹೇಳಲಾಗದು. ಜಾಗತಿಕವಾಗಿ ವಿಸ್ತೃತ ಕಣ್ಣೋಟದಿಂದಲೇ ಇದನ್ನು ನೋಡಬೇಕಾಗುತ್ತದೆ” ಎಂದು ನೆಡ್ ಪ್ರೈಸ್ ಮಾಧ್ಯಮದವರಿಗೆ ಹೇಳಿದ್ದಾರೆ.

- Advertisement -

ಪ್ರಜಾಪ್ರಭುತ್ವ ಮತ್ತು ಅದರ ಬಲಪಡಿಸುವಿಕೆಗೆ ಮುಕ್ತ ಮಾಧ್ಯಮ ಬಹಳ ಕಷ್ಟ ಎಂದೂ ನೆಡ್ ಹೇಳಿದರು.

“ನಾವು ಜಗತ್ತಿನೆಲ್ಲೆಡೆ ಮಾಧ್ಯಮ ಸ್ವಾತಂತ್ರ್ಯ ಮುಕ್ತವಾಗಿರಬೇಕೆನ್ನುವುದನ್ನು ಬೆಂಬಲಿಸುತ್ತೇವೆ. ಜಗತ್ತಿನೆಲ್ಲೆಡೆಯ ಪ್ರಜಾಪ್ರಬುತ್ವಗಳನ್ನು ಬಲಪಡಿಸಲು ಅಭಿವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ಮಾನವ ಹಕ್ಕುಗಳ ರಕ್ಷಣೆ ಇವೆಲ್ಲವುಗಳನ್ನು ನಾವು ಬಲವಾಗಿ ಬೆಂಬಲಿಸುತ್ತೇವೆ. ನಮ್ಮ ದೇಶದ ಪ್ರಜಾಪ್ರಭುತ್ವವನ್ನು ಇವೆಲ್ಲ ಬಲಪಡಿಸಿವೆ; ಭಾರತದಲ್ಲೂ ಅವು ಅಲ್ಲಿನ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ ಎಂದು ನಂಬಿದ್ದೇವೆ” ಎಂದು ನೆಡ್ ತಿಳಿಸಿದರು.

ಭಾರತದಲ್ಲಿ ಆದಾಯ ತೆರಿಗೆ ಇಲಾಖೆಯವರ ದಾಳಿಯು ಪ್ರಜಾಸತ್ತಾತ್ಮಕ ಮೌಲ್ಯದ ವಿರುದ್ಧ ನಡೆಯಿತೆ ಎಂಬ ಪ್ರಶ್ನೆಯು ನೆಡ್ ರಿಗೆದುರಾಯಿತು. “ಈಗಲೇ ಆ ಬಗ್ಗೆ ನಾನು ತೀರ್ಮಾನವಾಗಿ ಹೇಳಲಾಗದು. ಅವರೂ ಈ ದಾಳಿಯ ಹಿಂದಿನ ಮಹತ್ವವನ್ನು ಅರಿತಿರುತ್ತಾರೆ” ಎಂದೂ ನೆಡ್ ಹೇಳಿದರು.

ಫೆಬ್ರವರಿ 14ರ ಮಂಗಳವಾರ ಆದಾಯ ತೆರಿಗೆ ಅಧಿಕಾರಿಗಳು ದಿಲ್ಲಿ ಮತ್ತು ಮುಂಬೈಯಲ್ಲಿರುವ ಬ್ರಿಟನ್ನಿನ ಬಿಬಿಸಿಯ ಕಚೇರಿಗಳ  ಮೇಲೆ ದಾಳಿ ಮಾಡಿದ್ದರು. ತೆರಿಗೆ ತಪ್ಪಿಸುವಿಕೆಯ ಸಮೀಕ್ಷಾ ದಾಳಿ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದರು.

ಇದು ಬಿಬಿಸಿಯ ಸಾಕ್ಷ್ಯಚಿತ್ರಗಳ ವಿವಾದದ ಬಳಿಕ ಪ್ರತಿ ದಾಳಿಯೆಂದೇ ತಿಳಿಯಲಾಗುತ್ತಿದೆ.  

2002ರ ಗುಜರಾತ್ ಗಲಭೆಗಳಲ್ಲಿ ಮೋದಿಯವರ ಪಾತ್ರವನ್ನು ಪ್ರಶ್ನಿಸುವ ಎರಡು ಸಾಕ್ಷ್ಯಚಿತ್ರಗಳನ್ನು ಬಿಬಿಸಿ ತಯಾರಿಸಿದೆ. ಬಿಬಿಸಿಯು ಭಾರತ ವಿರೋಧಿ ಪ್ರಚಾರದಲ್ಲಿ ತೊಡಗಿದೆ ಎಂದು ಆ ಬಗ್ಗೆ ಭಾರತದ ವಿದೇಶಾಂಗ ಸಚಿವಾಲಯವು ಹೇಳಿತ್ತು.

Join Whatsapp